ADVERTISEMENT

ಕೆಪಿಎಸ್‌ಸಿ ಸುಗ್ರೀವಾಜ್ಞೆಗೆ ತಡೆ: ಸರ್ಕಾರದ ನಡೆ ಒಪ್ಪುವಂತದ್ದಲ್ಲ ಎಂದ ರಾಜ್ಯಪಾಲ

ವಜುಭಾಯಿ ವಾಲಾ

ರಾಜೇಶ್ ರೈ ಚಟ್ಲ
Published 29 ಜೂನ್ 2019, 1:58 IST
Last Updated 29 ಜೂನ್ 2019, 1:58 IST
ವಜುಭಾಯಿ
ವಜುಭಾಯಿ   

ಬೆಂಗಳೂರು: 1998ನೇ ಸಾಲಿನ 383 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮಗಳನ್ನು ಸಕ್ರಮಗೊಳಿಸಲು ರಾಜ್ಯ ಸರ್ಕಾರ ಸಿದ್ಧಪಡಿಸಿದ ಸುಗ್ರಿವಾಜ್ಞೆಗೆ ಅಂಕಿತ ಹಾಕಲು ರಾಜ್ಯಪಾಲ ವಜುಭಾಯಿ ವಾಲಾ ಎರಡನೇ ಬಾರಿ ನಿರಾಕರಿಸಿದ್ದಾರೆ.

ಸುಗ್ರೀವಾಜ್ಞೆಯನ್ನು ಮೊದಲ ಬಾರಿ ಕಳುಹಿಸಿದಾಗ ಅಂಕಿತ ಹಾಕದೆ, 'ಇಷ್ಟೊಂದು ತರಾತುರಿಯಲ್ಲಿ ಸುಗ್ರಿವಾಜ್ಞೆ ರೂಪಿಸುವ ಅವಶ್ಯಕತೆ ಏನು? ಎಂದು ಪ್ರಶ್ನಿಸಿವಾಪಸು ಕಳುಹಿಸಿದ್ದರು.

ಅದಕ್ಕೆ ಸಮಜಾಯಿಷಿ ನೀಡಿ ಎರಡನೇ ಬಾರಿಗೆ ಸರ್ಕಾರ ಕಳುಹಿಸಿತ್ತು. ಆದರೆ, ‘ಯಾವುದೇ ಕಾರಣಕ್ಕೂ ಸರ್ಕಾರದ ಈ ನಡೆ ಒಪ್ಪುವಂಥದ್ದಲ್ಲ’ ಎಂದು ರಾಜ್ಯಪಾಲರು ಷರಾ ಬರೆದಿದ್ದಾರೆ. ಅಲ್ಲದೇ, ಮುಂದಿನ ವಿಧಾನ ಮಂಡಲದ ಅಧಿವೇಶನ ದಲ್ಲಿಈ ಸಂಬಂಧ ಮಸೂದೆ ಮಂಡಿಸುವಂತೆಯೂ ಸಲಹೆ ನೀಡಿ ಕಡತವನ್ನು ಗುರುವಾರ ಮರಳಿಸಿದ್ದಾರೆ ಎಂದು ಸರ್ಕಾರದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ಈ ಕಡತವನ್ನು ಸಂಸದೀಯ ಇಲಾಖೆ, ಕಾನೂನು ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರಿಗೆ ತಲುಪಿಸಿದೆ.

ಅಧಿಕಾರಿಗಳ ಸ್ಥಾನ ಪಲ್ಲಟ: ಈ ಮಧ್ಯೆ, ಹೈಕೋರ್ಟ್ ತೀರ್ಪಿನ ಪ್ರಕಾರ ಕೆಪಿಎಸ್‌ಸಿ ಪ್ರಕಟಿಸಿದ ಪರಿಷ್ಕೃತ ಆಯ್ಕೆ ಪಟ್ಟಿಯಂತೆ 13 ವರ್ಷಗಳ ಬಳಿಕ ಕೆಲವು ಅಧಿಕಾರಿಗಳು ಇಲಾಖೆ, ವೃಂದ, ಶ್ರೇಣಿ ಬದಲಿಸಿಕೊಳ್ಳಲು ಮುಂದಾಗಿದ್ದಾರೆ.

ಈ ಪಟ್ಟಿ ಪ್ರಕಾರ ಒಟ್ಟು 140 ಅಧಿಕಾರಿಗಳು ಸ್ಥಾನಪಲ್ಲಟಗೊಳ್ಳುತ್ತಾರೆ. ಈ ಪೈಕಿ, ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ 115 ಅಧಿಕಾರಿಗಳ ಹುದ್ದೆ ಬದಲಾಗುತ್ತದೆ. ಆದರೆ, ಕೆಲವರು ಹುದ್ದೆ ಬದಲಿಸುವುದಿಲ್ಲ ಎಂದು ಲಿಖಿತವಾಗಿ ತಿಳಿಸಿದ್ದಾರೆ. ಹೀಗಾಗಿ, 52 ಅಧಿಕಾರಿಗಳ ಪಟ್ಟಿಯನ್ನು ಮಾತ್ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ತನ್ನ ವೆಬ್ ಸೈಟ್‌ನಲ್ಲಿ ಪ್ರಕಟಿಸಿದೆ.

ಹೀಗೆ ಸ್ಥಾನಪಲ್ಲಟಗೊಳ್ಳುವ ಅಧಿಕಾರಿಗಳಿಗೆ ಹುದ್ದೆ ಇಲ್ಲದೇ ಇದ್ದರೆ ಸೂಪರ್ ನ್ಯೂಮರರಿ ಹುದ್ದೆ ಸೃಜಿಸಲು ಸುಗ್ರೀವಾಜ್ಞೆಯಲ್ಲಿ ಪ್ರಸ್ತಾವಿಸಲಾಗಿದೆ.

ಪರಿಷ್ಕೃತ ಪಟ್ಟಿ ಯಥಾವತ್ ಜಾರಿಯಾದರೆ, ಈಗಾಗಲೇ ಐಎಎಸ್‌ಗೆ ಬಡ್ತಿ ಪಡೆದ ಏಳು ಕೆಎಎಸ್ ಅಧಿಕಾರಿಗಳು ಹಿಂಬಡ್ತಿಗೊಳ್ಳುತ್ತಾರೆ. ಆದರೆ, ಈ ಅಧಿಕಾರಿಗಳು ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯಿಂದ (ಸಿಎಟಿ) ತಡೆಯಾಜ್ಞೆ ತಂದಿದ್ದಾರೆ. ಹಿಂಬಡ್ತಿ ಭೀತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವಂತೆ ಸುಗ್ರೀವಾಜ್ಞೆ ಸಿದ್ಧಪಡಿಸಲಾಗಿದೆ.

ಹಿಂಬಡ್ತಿಗೊಂಡರೆ ಈ ಎಲ್ಲ ಏಳು ಅಧಿಕಾರಿಗಳು ಸಹಾಯಕ ಆಯುಕ್ತ (ಎ.ಸಿ) ಹುದ್ದೆ ಬಿಟ್ಟು ಬೇರೆ ಇಲಾಖೆಗೆ ಸ್ಥಾನಪಲ್ಲಟಗೊಳ್ಳುತ್ತಾರೆ.
ಅವರ ಬದಲು, ಆ ಹುದ್ದೆಗಳಿಗೆ ನೇಮಕಗೊಳ್ಳುವ ಏಳು ಅಧಿಕಾರಿಗಳು ಶುಕ್ರವಾರ (ಜೂನ್‌ 28), ಹೊಸ ಹುದ್ದೆಗೆ (ಸಹಾಯಕ ಅಯುಕ್ತ –ಕಿರಿಯ ಶ್ರೇಣಿ) ಸೇರಿದ್ದಾರೆ. ಆದರೆ, ಅವರಿಗೆ ಜ್ಯೇಷ್ಠತೆ ನೀಡುವ ಬಗ್ಗೆ ನೇಮಕಾತಿ ಆದೇಶದಲ್ಲಿ ಉಲ್ಲೇಖ ಇಲ್ಲ.

ಸ್ಥಾನಪಲ್ಲಟಗೊಳ್ಳುವ 20 ಅಧಿಕಾರಿಗಳು ಹೊಸ ಹುದ್ದೆಯ ನೇಮಕಾತಿ ಆದೇಶ ಪಡೆದರೂ, ಜ್ಯೇಷ್ಠತೆ ಮತ್ತು ವೇತನವನ್ನು ಈ ಆದೇಶದಲ್ಲಿ ಉಲ್ಲೇಖಿಸದೇ ಇರುವುದರಿಂದ ಸೇರಲು ನಿರಾಕರಿಸಿದ್ದಾರೆ. ಅಲ್ಲದೆ, ಈಗ ನಿರ್ವಹಿಸುತ್ತಿರುವ ಹುದ್ದೆಗೆ ತತ್ಸಮಾನವಾದ ಹುದ್ದೆ ಮತ್ತು ವೇತನವನ್ನು ನಿಗದಿಗೊಳಿಸಿ ಆದೇಶಿಸುವಂತೆ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.