ADVERTISEMENT

ಕೆಆರ್‌ಎಸ್‌ಗೆ ಧಕ್ಕೆಯಾಗಬಾರದು: ಹೈಕೋರ್ಟ್ ಕಾಳಜಿ

ಗಣಿಗಾರಿಕೆ –ತಜ್ಞರ ಸಮಿತಿ ತೀರ್ಮಾನವೇ ಅಂತಿಮ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 14:28 IST
Last Updated 28 ಮಾರ್ಚ್ 2024, 14:28 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ‘ಕಾವೇರಿ ನದಿಯು; ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಕೇರಳಗಳಿಗೆ ನೀರುಣಿಸುವ ಜೀವನದಿಯಾಗಿದ್ದು, ಇದಕ್ಕೆ ಕಟ್ಟಲಾಗಿರುವ ಕೆಆರ್‌ಎಸ್‌ (ಕೃಷ್ಣರಾಜ ಸಾಗರ) ಅಣೆಕಟ್ಟಿನ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ತೆರನಾದ ಗಣಿಗಾರಿಕೆ ಮತ್ತು ಅದಕ್ಕೆ ಹೊಂದಿಕೊಂಡಂತಹ ಚಟುವಟಿಕೆಗಳು ಅತ್ಯಂತ ಅಪಾಯಕಾರಿ. ಆದ್ದರಿಂದ, ಅಣೆಕಟ್ಟಿಗೆ ಕಿಂಚಿತ್ತೂ ಧಕ್ಕೆಯಾಗಂತೆ ನೋಡಿಕೊಳ್ಳಬೇಕಾದ ತುರ್ತು ಇಂದು ಹೆಚ್ಚಿದೆ’ ಎಂದು ಹೈಕೋರ್ಟ್ ತೀವ್ರ ಕಾಳಜಿ ವ್ಯಕ್ತಪಡಿಸಿದೆ.

‘ಕೆಆರ್‌ಎಸ್‌ ಜಲಾಯಶಯದ ಸುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಹಾಗೂ ಅದರಾಚೆಗೂ ಕೂಡಾ ಯಾವುದೇ ಕಲ್ಲು ಗಣಿಗಾರಿಕೆ ಹಾಗೂ ಸ್ಫೋಟಕ ಚಟುವಟಿಕೆಗಳಿಗೆ ಸಂಬಂಧಿಸಿದ ತಕರಾರುಗಳಿಗೆ ಪರಿಹಾರ ಪಡೆಯಲು, ಕರ್ನಾಟಕ ರಾಜ್ಯ ಜಲಾಶಯಗಳ ಸುರಕ್ಷಿತ ಸಮಿತಿಯ ಮುಂದೆಯೇ ಮನವಿ ಸಲ್ಲಿಸಬೇಕು. ಈ ವಿಚಾರದಲ್ಲಿ ಸಮಿತಿಯ ತೀರ್ಮಾನವೇ ಅಂತಿಮ’ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ಆದೇಶಿಸಿದೆ.

ADVERTISEMENT

ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌

‘ಅಣೆಕಟ್ಟಿಗೆ ಏನಾದರೂ ಆದರೆ ಗತಿಯೇನು? ಕೆಆರ್‌ಎಸ್‌ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಗಣಿಗಾರಿಕೆಯ ಚಟುವಟಿಕೆಗಳು ಅಪಾಯ ತಂದೊಡ್ಡಬಲ್ಲವು. ಇಂತಹ ಚಟುವಟಿಕೆಗಳ ಬಗ್ಗೆ ಉಂಟಾಗುವ ತಕರಾರುಗಳನ್ನು ಈಗಾಗಲೇ ಶಾಸನಾತ್ಮಕವಾಗಿ ರೂಪುಗೊಂಡಿರುವ ತಜ್ಞರ ಸಮಿತಿಯೇ ಪರಾಮರ್ಶಿಸಬೇಕು. ಅದು ಯಾವುದೇ ಕ್ರಮ ಕೈಗೊಳ್ಳಲು ಯುಕ್ತವಿದೆ. ಈ ವಿಷಯದಲ್ಲಿ ತೀರ್ಮಾನ ಪ್ರಕಟಿಸಲು ಕೋರ್ಟ್ ಏನೂ ತಜ್ಞ ಅಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

‘ನಿಮ್ಮ ಮನವಿಯನ್ನು ತಜ್ಞರ ಸಮಿತಿಯ ಮುಂದೆಯೇ ಸಲ್ಲಿಸಿ’ ಎಂದು ಅರ್ಜಿದಾರರಿಗೆ ನಿರ್ದೇಶಿಸಿ ವಿಲೇವಾರಿ ಮಾಡಿತು. ಇದಕ್ಕೆ ಪ್ರತಿಯಾಗಿ ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ್‌ ಎಸ್‌.ಚೌಟ, ‘ಅರ್ಜಿಯನ್ನು ಇಂತಿಷ್ಟೇ ಅವಧಿಯಲ್ಲಿ ಇತ್ಯರ್ಥಗೊಳಿಸುವಂತೆ ಸಮಯ ಮಿತಿ ವಿಧಿಸಿ’ ಎಂದು ಕೋರಿದರು. ಇದನ್ನು ನಿರಾಕರಿಸಿದ ನ್ಯಾಯಪೀಠ, ‘ಗಡುವಿಗೆ ಸಮಿತಿಯನ್ನೇ ಕೇಳಿಕೊಳ್ಳಿ. ನಾವು ವಿಧಿಸಲು ಆಗುವುದಿಲ್ಲ. ನಾವೆಲ್ಲಾ ಸಮಿತಿಯನ್ನು ಗೌರವಿಸಬೇಕು’ ಎಂದು ಹೇಳಿತು. ಅರ್ಜಿದಾರರ ಪರ ವಿಕ್ರಮ ಉನ್ನಿ ಬಾಲಕೃಷ್ಣ ವಕಾಲತ್ತು ವಹಿಸಿದ್ದರು. ರಾಜ್ಯ ಸರ್ಕಾರದ ಪರ ಎಸ್.ಎಸ್.ಮಹೇಂದ್ರ ವಾದ ಮಂಡಿಸಿದರು.

ಪ್ರಕರಣವೇನು?: ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕನಗನ ಮರಡಿ ಗ್ರಾಮದ ‘ಮಂಚಮ್ಮದೇವಿ ಸ್ಟೋನ್‌ ಕ್ರಷರ್‌ ಹಾಗೂ ಎಂ.ಸ್ಯಾಂಡ್‌’ ಘಟಕಕ್ಕೆ ಜಿಲ್ಲಾ ಸ್ಟೋನ್‌ ಕ್ರಷರ್‌ ಪರವಾನಗಿ ಮತ್ತು ನಿಯಂತ್ರಣ ಪ್ರಾಧಿಕಾರವು 2024ರ ಜನವರಿ 20ರಂದು ನೋಟಿಸ್‌ ನೀಡಿರುವ ಕಾರಣ ಘಟಕದ ಚಟುವಟಿಕೆ ಸ್ಥಗಿತಗೊಳಿಸಲಾಗಿದೆ. ಇದನ್ನು ಪ್ರಶ್ನಿಸಿ ಮಾಲೀಕ ವೈ.ಬಿ.ಅಶೋಕ್‌ಗೌಡ ಪಟೇಲ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. 

ಅರ್ಜಿಯಲ್ಲಿ ಏನಿದೆ?

‘ನಮ್ಮದು ಕೇವಲ ಕ್ರಷರ್‌ ಮತ್ತು ಎಂ.ಸ್ಯಾಂಡ್ ಘಟಕವಾಗಿದ್ದು ಗಣಿಗಾರಿಕೆಗೆ ಹೊಂದಿಕೊಂಡ ಇತರೆ ಯಾವುದೇ, ಕಲ್ಲು ಸ್ಫೋಟಿಸುವ ಅಥವಾ ನಿರ್ಬಂಧಿತ ಚಟುವಟಿಕೆಗಳನ್ನು ಕೈಗೊಳ್ಳುತ್ತಿಲ್ಲ. ನಾವು ಕೆಆರ್‌ಎಸ್‌ ಆಣೆಕಟ್ಟಿನ 20 ಕಿಮೀ ಸುತ್ತಳತೆಯ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದೇವೆ. ಆದರೂ, ಘಟಕದ ಕಾನೂನುಬದ್ಧ ಚಟುವಟಿಕೆಗಳಿಗೆ ಅಡ್ಡಿ ಉಂಟು ಮಾಡಲಾಗಿದೆ. ಚಟುವಟಿಕೆ ಪುನರಾರಂಭಕ್ಕೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರ ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.