ADVERTISEMENT

ಸಂತೋಷ ಸಾವಿನ ತನಿಖೆ ಮೇಲೆ ಈಶ್ವರಪ್ಪ ಪ್ರಭಾವ: ರಾಜ್ಯಪಾಲರಿಗೆ ಮೃತನ ಪತ್ನಿ ಪತ್ರ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 9:49 IST
Last Updated 15 ಜುಲೈ 2022, 9:49 IST
ಕೆ.ಎಸ್‌.ಈಶ್ವರಪ್ಪ
ಕೆ.ಎಸ್‌.ಈಶ್ವರಪ್ಪ   

ಬೆಳಗಾವಿ: ‘ಉಡುಪಿಯ ಲಾಡ್ಜ್‌ವೊಂದರಲ್ಲಿ ಮತಪಟ್ಟ ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ ಅವರ ಪ್ರಕರಣದ ತನಿಖೆಯನ್ನು ದಾರಿ ತಪ್ಪಿಸಲಾಗುತ್ತಿದೆ. ಪಾರದರ್ಶಕ ತನಿಖೆ ನಡೆಸಲು ಕ್ರಮ ವಹಿಸಬೇಕು’ ಎಂದು ಕೋರಿ ಸಂತೋಷ ಪತ್ನಿ ರೇಣುಕಾ (ಜಯಶ್ರೀ) ಅವರು ಶುಕ್ರವಾರ ರಾಜ್ಯಪಾಲರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

‘ಕಳೆದ ಏಪ್ರಿಲ್‌ 12ರಂದು ನನ್ನ ಪತಿ ಸಾವು ಸಂಭವಿಸಿದೆ. ಈ ಸಾವು ಅನುಮಾನಾಸ್ಪ‍ದ ಆಗಿದ್ದರಿಂದ ಏ‍ಪ್ರಿಲ್‌ 13ರಂದು ಉಡುಪಿ ಪೊಲೀಸರಿಗೆ ಶಾಸಕ ಕೆ.ಎಸ್‌.ಈಶ್ವರಪ್ಪ ವಿರುದ್ಧ ದೂರು ನೀಡಿದ್ದೇನೆ. ಅದಕ್ಕೆ ಮೂಲ ಕಾರಣವೇನು, ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಆದರೆ, ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದು ನಮ್ಮ ಕುಟುಂಬಕ್ಕೆ ಆತಂಕ ಉಂಟಾಗಿದೆ. ಇದರಲ್ಲಿ ಪ್ರಮುಖ ಆರೋಪಿ ಕೆ.ಎಸ್‌.ಈಶ್ವರಪ್ಪ ಅವರು ಪ್ರಭಾವಿ ನಾಯಕರಾಗಿದ್ದಾರೆ. ಅವರ ನಿರ್ದೇಶನದಂತೆಯೇ ತನಿಖೆ ನಡೆಯುತ್ತಿದೆ’ ಎಂದು ಅವರು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.

‘ಈ ಪ್ರಕರಣದಿಂದ ಕೇವಲ 15 ದಿನಗಳಲ್ಲಿ ಹೊರಗೆ ಬರುತ್ತೇನೆ. ಆರೋಪ ಮುಕ್ತನಾಗುತ್ತೇನೆ ಎಂದು ಕೆ.ಎಸ್‌. ಈಶ್ವರಪ್ಪ ಅವರು ಪದೇಪದೇ ಹೇಳಿಕೆ ನೀಡುತ್ತಿದ್ದಾರೆ. ಪ್ರಕರಣವು ತನಿಖೆ ಹಂತದಲ್ಲಿ ಇದ್ದರೂ ಅವರು ಇಷ್ಟೊಂದು ಆತ್ಮವಿಶ್ವಾಸ ವ್ಯಕ್ತಪಡಿಸುವುದು ಸಂಶಯಾಸ್ಪದವಾಗಿದೆ. ತಮ್ಮ ಹಣದ ಬಲ ಹಾಗೂ ರಾಜಕೀಯ ಬಲ ಪ್ರಯೋಗಿಸಿ, ಪ್ರಕರಣ ಮುಚ್ಚಿಹಾಕುವ ಸಾಧ್ಯತೆ ಇದೆ’ ಎಂದೂ ರೇಣುಕಾ ಆತಂಕ ತೋಡಿಕೊಂಡಿದ್ದಾರೆ.

ADVERTISEMENT

‘ನನ್ನ ಪತಿ ಹಿಂಡಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 108 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು ಎಲ್ಲರಿಗೂ ತಿಳಿದ ವಿಷಯ. ಇದರ ಬಿಲ್‌ ನೀಡಲು ಕೆ.ಎಸ್‌.ಈಶ್ವರಪ್ಪ ಹಾಗೂ ಅವರ ಆಪ್ತರು ಶೇ 40ರಷ್ಟು ಕಮಿಷನ್‌ ಕೇಳಿದ್ದರು ಎಂಬುದು ಮಾಧ್ಯಮಗಳಲ್ಲೂ ಬಹಿರಂಗವಾಗಿದೆ. ಆದರೂ ಈಶ್ವರಪ್ಪ ಅವರು ಆರೋಪ ಮುಕ್ತನಾಗುವುದಾಗಿ ಧೈರ್ಯದಿಂದ ಹೇಳುತ್ತಿದ್ದಾರೆ. ಇದು ನಮಗೆ ಬಹಳ ಆಶ್ಚರ್ಯ ಉಂಟುಮಾಡಿದೆ’ ಎಂದು ತಿಳಿಸಿದ್ದಾರೆ.

‘ಯಾರು, ಎಷ್ಟೇ ‌ಪ್ರಭಾವಿಯಾದರೂ ಕಾನೂನು ಎಲ್ಲರಿಗೂ ಒಂದೇ ಆಗಿದೆ. ಆದ್ದರಿಂದ ಪಾರದರ್ಶಕ ತನಿಖೆ ನಡೆಸಲು ತನಿಖಾಧಿಕಾರಿಗೆ ಸೂಚನೆ ನೀಡಬೇಕು’ ಎಂದೂ ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.