ADVERTISEMENT

ಕೃಷಿ ಮಾರಾಟ ಮಂಡಳಿಗೆ ವಂಚನೆ ಪ್ರಕರಣ: ಇ.ಡಿ ವಶಕ್ಕೆ ₹ 4.98 ಕೋಟಿ ಮೌಲ್ಯದ ಆಸ್ತಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 20:12 IST
Last Updated 28 ಜುಲೈ 2021, 20:12 IST

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ರಾಜ್ಯ ಕೃಷಿ ಮಾರಾಟ ಮಂಡಳಿಯ ₹ 48 ಕೋಟಿ ನಿಶ್ಚಿತ ಠೇವಣಿ (ಎಫ್‌ಡಿ) ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿ ವಂಚಿಸಿದ ಪ್ರಕರಣದ ಆರೋಪಿಗಳ ₹ 4.98 ಕೋಟಿ ಮೌಲ್ಯದ ಆಸ್ತಿಯನ್ನು ಮಾತ್ರ ವಶಕ್ಕೆ ಪಡೆಯಲು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಸಾಧ್ಯವಾಗಿದೆ.

₹ 48 ಕೋಟಿ ವಂಚನೆ ಆರೋಪದಡಿ ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ 2020ರ ಜನವರಿಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಸಿಸಿಬಿ ಪೊಲೀಸರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿತ್ತು.

ಸಿಂಡಿಕೇಟ್‌ ಬ್ಯಾಂಕ್‌ನ ಉತ್ತರಹಳ್ಳಿ ಶಾಖೆಯ ಸಹಾಯಕ ವ್ಯವಸ್ಥಾಪಕರಾಗಿದ್ದ ಎಂ.ಡಿ. ಜಯರಾಂ, ಕರ್ನಾಟಕ ಕೃಷಿ ಮಾರಾಟ ಮಂಡಳಿಯ ಉಪ ಪ್ರಧಾನ ವ್ಯವಸ್ಥಾಪಕ ಸಿದ್ದಗಂಗಯ್ಯ, ವಿಜಯ್‌ ಆಕಾಶ್, ನಾಗರಾಜು, ರೇವಣ್ಣ, ಮೊಹಮ್ಮದ್ ಮುಸ್ತಾಫಾ ಮತ್ತು ಇತರ ಆರೋಪಿಗಳಿಗೆ ಸೇರಿದ ₹ 4.98 ಕೋಟಿ ಮೌಲ್ಯದ ಬ್ಯಾಂಕ್‌ ಠೇವಣಿ, ನಗದು, ಚಿನ್ನಾಭರಣ ಹಾಗೂ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ.

ADVERTISEMENT

ಮಂಡಳಿಯು ಆಂಧ್ರ ಬ್ಯಾಂಕ್‌ ರಾಜಾಜಿನಗರ ಶಾಖೆಯಲ್ಲಿ ಇರಿಸಿದ್ದ ₹ 100 ಕೋಟಿಯನ್ನು ಸಿಂಡಿಕೇಟ್‌ ಬ್ಯಾಂಕ್‌ನ ಉತ್ತರಹಳ್ಳಿ ಶಾಖೆಗೆ ವರ್ಗಾಯಿಸಲಾಗಿತ್ತು. ಅಲ್ಲಿ ತಲಾ ₹ 50 ಕೋಟಿ ಮೊತ್ತದ ಎರಡು ಎಫ್‌ಡಿ ಇರಿಸಿದಂತೆ ದಾಖಲೆ ಸೃಷ್ಟಿಸಲಾಗಿತ್ತು. ಅದರಲ್ಲಿ ₹ 48 ಕೋಟಿಯನ್ನು ಚೆನ್ನೈ ನಗರದಲ್ಲಿದ್ದ 106 ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಿ ವಂಚಿಸಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು.

ಆರೋಪಿಗಳಿಂದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯನ್ನು ಇ.ಡಿ ಆರಂಭಿಸಿತ್ತು. ಕೃಷಿ ಮಾರಾಟ ಮಂಡಳಿಗೆ ವಂಚಿಸಿದ ಮೊತ್ತದ ಶೇಕಡ 10ರಷ್ಟು ಮೌಲ್ಯದ ಆಸ್ತಿಯನ್ನು ಮಾತ್ರ ಪತ್ತೆ ಮಾಡಿ, ವಶಕ್ಕೆ ಪಡೆದುಕೊಳ್ಳಲು ತನಿಖಾ ಸಂಸ್ಥೆಗೆ ಸಾಧ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.