ADVERTISEMENT

ವೆಬ್‌ ಇಂಡೆಂಟ್ ಗೊಂದಲ: ಮದ್ಯ ಖಾಲಿ!

ಏಪ್ರಿಲ್ 1ರಿಂದ ಜಾರಿಗೆ ಬಂದಿರುವ ಹೊಸ ವ್ಯವಸ್ಥೆ: ಸನ್ನದುದಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 19:45 IST
Last Updated 5 ಏಪ್ರಿಲ್ 2022, 19:45 IST
   

ಬೆಂಗಳೂರು: ವೆಬ್–ಇಂಡೆಂಟ್ ಮೂಲಕ ಮಾತ್ರ ಮದ್ಯ ಖರೀದಿ ಮಾಡಬೇಕು ಎಂಬ ಹೊಸ ನಿಯಮವನ್ನು ಕರ್ನಾಟಕ ಪಾನೀಯ ನಿಗಮ (ಕೆಎಸ್‌ಬಿಸಿಎಲ್‌) ಜಾರಿಗೆ ತಂದಿದ್ದು, ಇದು ಮದ್ಯದಂಗಡಿ ಸನ್ನದುದಾರರಿಗೆ ತಲೆನೋವಾಗಿ ಪರಿಣಮಿಸಿದೆ. ಹೊಸ ವ್ಯವಸ್ಥೆಯಲ್ಲಿ ಮದ್ಯ ಖರೀದಿ ಮಾಡಲು ಸಾಧ್ಯವಾಗದೆ ಮದ್ಯದ ಅಂಗಡಿಗಳಲ್ಲಿ ದಾಸ್ತಾನು ಖಾಲಿಯಾಗಿವೆ.

ಎಲ್ಲ ಜಿಲ್ಲೆಗಳಲ್ಲೂ ಇರುವ ಪಾನೀಯ ನಿಗಮದ ಡಿಪೋಗಳಿಗೆ ಸನ್ನದುದಾರರು ಮದ್ಯದ ಬೇಡಿಕೆ ಪಟ್ಟಿಯೊಂದಿಗೆ ಹೋಗಿ ಅಲ್ಲೇ ಹಣ ಪಾವತಿಸಿ ಖರೀದಿ ಮಾಡುವ ವ್ಯವಸ್ಥೆ ಹಲವು ವರ್ಷಗಳಿಂದ ಜಾರಿಯಲ್ಲಿತ್ತು. ಕುಳಿತಲ್ಲೇ ಮದ್ಯ ಖರೀದಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವೆಬ್‌–ಇಂಡೆಂಟಿಂಗ್ ವ್ಯವಸ್ಥೆಯನ್ನು ಕೆಎಸ್‌ಬಿಸಿಎಲ್ ಜಾರಿಗೆ ತಂದಿದೆ.

ಈ ತಂತ್ರಾಂಶದಲ್ಲಿ ಪ್ರತಿ ಸನ್ನದುದಾರರಿಗೆ ಪ್ರತ್ಯೇಕ ಖಾತೆಗಳನ್ನು ಹೊಂದಲು ಅವಕಾಶ ಇದೆ. ಆ ಖಾತೆಯಲ್ಲಿ ಮೊದಲೇ ಹಣ ಜಮಾವಣೆ ಮಾಡಿಟ್ಟುಕೊಂಡಿರಬೇಕು. ಆ ಖಾತೆಯಲ್ಲಿ ಇರುವಷ್ಟು ಮೊತ್ತಕ್ಕಷ್ಟೇ ಮದ್ಯ ಖರೀದಿ ಮಾಡಲು ಅವಕಾಶ ಇದೆ. ಕೊನೆ ಕ್ಷಣದಲ್ಲಿ ಮದ್ಯದ ಬೇಡಿಕೆ ಸಿದ್ಧಪಡಿಸಿಕೊಂಡು, ಅದಕ್ಕೆ ತಕ್ಕಂತೆ ಹಣ ಹೊಂದಿಸಿಕೊಂಡು ಮದ್ಯ ಖರೀದಿ ಮಾಡಿಕೊಂಡು ಬರಲು ಈ ಹೊಸ ವ್ಯವಸ್ಥೆಯಲ್ಲಿ ಅವಕಾಶ ಇಲ್ಲ.

ADVERTISEMENT

‘ಈ ಹಿಂದೆ ಕ್ಯಾಷಿಯರ್‌ಗಳೇ ಬೇಡಿಕೆ ಪಟ್ಟಿ ಸಿದ್ಧಪಡಿಸಿಕೊಂಡು ಮದ್ಯ ಖರೀದಿ ಮಾಡಿಕೊಂಡು ಬರುತ್ತಿದ್ದರು. ಈಗ ವೆಬ್‌ ಇಂಡೆಂಟ್‌ ಮೂಲಕ ಮಾತ್ರ ಖರೀದಿಸಬೇಕೆಂದರೆ ಅದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ನೇಮಿಸಿಕೊಳ್ಳಬೇಕಾಗುತ್ತದೆ. ಈ ವ್ಯವಸ್ಥೆ ದೊಡ್ಡ ಮಟ್ಟದ ವ್ಯಾಪಾರಿಗಳಿಗಷ್ಟೇ ಅನುಕೂಲ ಆಗಲಿದೆ. ಗ್ರಾಮೀಣ ಭಾಗದ ಸಣ್ಣ–ಪುಟ್ಟ ವ್ಯಾಪಾರಿಗಳಿಗೆ ಸಮಸ್ಯೆಯಾಗಲಿದೆ’ ಎಂದು ಬೆಂಗಳೂರು ನಗರ ಮದ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಲೋಕೇಶ್ ಹೇಳುತ್ತಾರೆ.

‘ದಿನದ ವ್ಯಾಪಾರದಿಂದ ಬಂದ ಹಣದಲ್ಲೇ ಹೊಸದಾಗಿ ಮದ್ಯ ಖರೀದಿ ಮಾಡಲಾಗುತ್ತಿದೆ. ಮೊದಲೇ ಹಣ ಪಾವತಿ ಮಾಡಿಟ್ಟುಕೊಂಡು ಖರೀದಿಸಬೇಕು ಎಂಬ ನಿಯಮ ಸನ್ನದುದಾರರಿಗೆ ಕಷ್ಟವಾಗಲಿದೆ. ಸರ್ವರ್ ಸಮಸ್ಯೆ ಅಥವಾ ಮೂರ್ನಾಲ್ಕು ದಿನ ಒಟ್ಟಿಗೇ ಬ್ಯಾಂಕ್‌ ರಜೆ ಬಂದರೆ ಖರೀದಿ ಕಷ್ಟವಾಗಲಿದೆ. ಆಗ ಮದ್ಯದ ಅಂಗಡಿಗಳಲ್ಲಿ ದಾಸ್ತಾನು ಖಾಲಿಯಾಗಿ ಬಾಗಿಲು ಮುಚ್ಚಬೇಕಾಗುತ್ತದೆ’ ಎಂದು ಅವರು ವಿವರಿಸಿದರು.

‘ಏ.1ರಿಂದ ಹೊಸ ವ್ಯವಸ್ಥೆ ಜಾರಿಗೆ ಬಂದಿದ್ದು, ಸರ್ವರ್ ಸಮಸ್ಯೆ ಮತ್ತು ವೆಬ್‌ ಇಂಡೆಂಟ್‌ ಸಲ್ಲಿಸುವ ವಿಧಾನ ತಿಳಿಯದೆ ಹಲವು ಅಂಗಡಿಗಳಲ್ಲಿ ದಾಸ್ತಾನು ಖಾಲಿಯಾಗಿದೆ’ ಎಂದರು.

ಡಿಪೋಗಳ ಎದುರು ಪ್ರತಿಭಟನೆ ಇಂದು

‘ಹೊಸ ವ್ಯವಸ್ಥೆಗೆ ನಮ್ಮ ವಿರೋಧ ಇಲ್ಲ. ಅದಕ್ಕೆ ಹೊಂದಿಕೊಳ್ಳುವ ತನಕ ಒಂದು ತಿಂಗಳ ಮಟ್ಟಿಗೆ ಹಳೇ ವ್ಯವಸ್ಥೆಯನ್ನೂ ಉಳಿಸಿಕೊಳ್ಳುವಂತೆ ಅಬಕಾರಿ ಇಲಾಖೆಗೆ ಮನವಿ ಮಾಡಿದ್ದೇವೆ’ ಎಂದು ಫೆಡರೇಷನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್‌ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ ಹೆಗ್ಡೆ ಹೇಳಿದರು.

‘ಅಬಕಾರಿ ಸಚಿವರು, ಅಬಕಾರಿ ಆಯುಕ್ತರು ಸೇರಿ ಎಲ್ಲರಿಗೂ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ರಾಜ್ಯದ ಎಲ್ಲ ಕೆಎಸ್‌ಬಿಸಿಎಲ್ ಡಿಪೋಗಳ ಎದುರು ಬುಧವಾರ(ಏ.6) ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ಹಳೇ ಪದ್ಧತಿಯನ್ನೂ ಉಳಿಸಿ ಮದ್ಯ ವಹಿವಾಟು ಸರಾಗವಾಗಿ ನಡೆಯಲು ಅನುಕೂಲ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ಅಂಕಿ –ಅಂಶ

1.80 ಲಕ್ಷ ಬಾಕ್ಸ್
ಪ್ರತಿದಿನ ಮಾರಾಟವಾಗುವ ಮದ್ಯ

80 ಸಾವಿರ ಬಾಕ್ಸ್
ಪ್ರತಿದಿನ ಮಾರಾಟವಾಗುವ ಬಿಯರ್

₹100 ಕೋಟಿ
ದಿನದ ಸರಾಸರಿ ವಹಿವಾಟು

₹79 ಕೋಟಿ
ಸರ್ಕಾರಕ್ಕೆ ಬರುವ ದಿನದ ಸರಾಸರಿ ವರಮಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.