ADVERTISEMENT

ಮುಕ್ತ ವಿ.ವಿ: ಬಿ.ಇಡಿ, ಎಂಬಿಎಗೆ ಪ್ರವೇಶ

5 ಕೋರ್ಸ್‌ಗಳಿಗೆ ಮರು ಪ್ರವೇಶ; ಜ.30ಕ್ಕೆ ಪ್ರಕ್ರಿಯೆ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2018, 20:15 IST
Last Updated 22 ನವೆಂಬರ್ 2018, 20:15 IST

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು (ಕೆಎಸ್‌ಒಯು) 2018–19ನೇ ಶೈಕ್ಷಣಿಕ ಸಾಲಿನಲ್ಲಿ ಬಿ.ಇಡಿ, ಎಂಬಿಎ ಕೋರ್ಸ್‌ಗಳಿಗೆ ಜನವರಿಯಿಂದ ಪ್ರವೇಶ ಪ್ರಕ್ರಿಯೆ ಆರಂಭಿಸಲಿದೆ.

ಅಕ್ಟೋಬರ್‌ನಲ್ಲಿ ನಡೆಸಿದ್ದ ಪ್ರವೇಶ ಪ್ರಕ್ರಿಯೆ ವೇಳೆ 20ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದ 5 ಕೋರ್ಸ್‌ಗಳಿಗೆ ಮರು ಪ್ರವೇಶ ನಡೆಸಲು ಮುಂದಾಗಿದೆ.

ವಿಶ್ವವಿದ್ಯಾಲಯಕ್ಕೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮಾನ್ಯತೆ ನೀಡಿದೆ. ಒಟ್ಟು 31 ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅ.20 ಕೊನೆಯ ದಿನವಾಗಿತ್ತು. ಈ ಅವಧಿಯಲ್ಲಿ 11,759 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ADVERTISEMENT

‘ಎಂ.ಎ ಉರ್ದು, ಎಂಎಸ್ಸಿ ಜೈವಿಕ ತಂತ್ರಜ್ಞಾನ, ಎಂಎಸ್ಸಿ ಜೀವ ರಸಾಯನವಿಜ್ಞಾನ, ಎಂಎಸ್ಸಿ ಮಾಹಿತಿ ವಿಜ್ಞಾನ ಹಾಗೂ ಎಂ.ಲಿಬ್‌ ಐಎಸ್‌ಸಿ ಕೋರ್ಸ್‌ಗಳಿಗೆ 20ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಹೀಗಾಗಿ, ಮರು ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ’ ಎಂದು ವಿ.ವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆನ್‌ಲೈನ್‌ ಪ್ರವೇಶ: ಇನ್ನು ಮುಂದೆ ಪ್ರವೇಶ ಹಾಗೂ ಶುಲ್ಕ ಪಾವತಿ ಆನ್‌ಲೈನ್‌ ಮೂಲಕ ನಡೆಯಲಿದೆ. ವಿದ್ಯಾರ್ಥಿಗಳು ವೆಬ್‌ಸೈಟ್‌ www.ksoumysore.karnataka.gov.in ನಲ್ಲಿ ಲಭ್ಯವಿರುವ ಎಸ್‌ಬಿಐ ಕಲೆಕ್ಟ್‌ ತಂತ್ರಾಂಶದ ಸಹಾಯದಿಂದ ಶುಲ್ಕವನ್ನು ಪಾವತಿಸಬಹುದು. ನೆಟ್‌ ಬ್ಯಾಂಕಿಂಗ್‌, ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌, ಆರ್‌ಟಿಜಿಎಸ್‌ ಮೂಲಕವೂ ಶುಲ್ಕ ಪಾವತಿಸಬಹುದು. 2–3 ದಿನಗಳಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಜನವರಿ 30ಕ್ಕೆ ಮುಕ್ತಾಯವಾಗಲಿದೆ ಎಂದು ಅವರು
ವಿವರಿಸಿದರು.

ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಮಾಹಿತಿ ನೀಡಲಾಗುತ್ತದೆ. ವಿದ್ಯಾರ್ಥಿಗಳ ಅರ್ಹತಾ ಪಟ್ಟಿ, ಆಯ್ಕೆ ಪಟ್ಟಿ, ಕಾಯ್ದಿರಿಸಿದ ಪಟ್ಟಿ ಮತ್ತಿತರ ಮಾಹಿತಿಯನ್ನು ವಿ.ವಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಅಧಿಕಾರಿಗಳು, ವಿಭಾಗಗಳ ಮುಖ್ಯಸ್ಥರು, ಬೋಧಕ– ಬೋಧಕೇತರರಿಗೆ ಇ–ಮೇಲ್‌ ಮೂಲಕ ಪತ್ರ ವ್ಯವಹಾರ ಮಾಡಲಾಗುತ್ತದೆ ಎಂದು ಹೇಳಿದರು.

2013–14 ಹಾಗೂ 2014–15ನೇ ಸಾಲಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಪದವಿಗೆ ಮಾನ್ಯತೆ ನೀಡುವ ಸಂಬಂಧ ಕಾನೂನು ಹೋರಾಟ ನಡೆಸಲಾಗುತ್ತಿದೆ ಎಂದರು.

ಪಿಎಚ್‌.ಡಿ ಪ್ರವೇಶಕ್ಕೆ ಆದೇಶ

ಪಿಎಚ್‌.ಡಿ.ಗೆ ಸಂಬಂಧಿಸಿದಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ. ಸಂಶೋಧನಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ಮಾರ್ಗದರ್ಶಕರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. 2012ನೇ ಸಾಲಿನಲ್ಲಿ ಪಿಎಚ್‌.ಡಿ ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪುನಃ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಅದರ ನಂತರದ ಪ್ರಕ್ರಿಯೆಯನ್ನು ಹೊಸ ನಿಯಮದ ಪ್ರಕಾರ ಮಾಡಲಾಗುವುದು ಎಂದು ಪ್ರೊ.ಡಿ.ಶಿವಲಿಂಗಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.