ADVERTISEMENT

ಕೆಎಸ್ಆರ್‌ಟಿಸಿ ಬಸ್‌ಗಳಿಗೆ ಟ್ರ್ಯಾಕಿಂಗ್‌ ವ್ಯವಸ್ಥೆ: ಆಡಳಿತಾತ್ಮಕ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2023, 15:35 IST
Last Updated 10 ಆಗಸ್ಟ್ 2023, 15:35 IST
   

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್ಸುಗಳ ಸಂಚಾರ ನಿಗಾ ವ್ಯವಸ್ಥೆ ಮತ್ತು ಪ್ಯಾನಿಕ್‌ ಬಟನ್‌ ವ್ಯವಸ್ಥೆಯೊಂದಿಗೆ ಕೇಂದ್ರೀಕೃತ ನಿಯಂತ್ರಣ ಕೊಠಡಿ ಸ್ಥಾಪಿಸುವ ₹30.74 ಕೋಟಿ ಯೋಜನೆಗೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ಈ ಯೋಜನೆ ಜಾರಿಯಿಂದ ನೈಜ ಸಮಯದಲ್ಲಿ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಸುಧಾರಿತ ನಿರ್ವಹಣಾ ಮಾಹಿತಿ ವ್ಯವಸ್ಥೆ, ಬಸ್‌ಗಾಗಿ ಕಾಯುವ ಅನಿಶ್ಚಿತತೆ ಕಡಿಮೆ ಮಾಡಬಹುದು  ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಲ್ಲದೇ, ಬಸ್‌ ಪ್ರಯಾಣದ ಸಮಯವೂ ಕಡಿಮೆ ಆಗಲಿದೆ. ಸರ್ಕಾರಿ ಬಸ್‌ ವ್ಯವಸ್ಥೆಯ ವಿಶ್ವಾಸಾರ್ಹತೆ, ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ, ಅಪಘಾತ ಮತ್ತು ಅವಘಡಗಳ ನಿಯಂತ್ರಣ ಸಾಧ್ಯ ಎಂದು ಪಾಟೀಲ ವಿವರಿಸಿದರು.

ADVERTISEMENT

ಅಲ್ಲದೇ, ಬಸ್ ಸೇವೆಯ ಗುಣಮಟ್ಟ ವೃದ್ಧಿಗೊಳಿಸುವುದು, ಬೇಡಿಕೆಯ ಮೌಲ್ಯಮಾಪನಕ್ಕಾಗಿ ದತ್ತಾಂಶ ಲಭ್ಯತೆ, ಬಸ್‌ ಕಾರ್ಯಾಚರಣೆ ಸನ್ನಿವೇಶಗಳ ವಿಶ್ಲೇಷಣೆ, ಹೆಚ್ಚಿದ ಪ್ರಯಾಣಿಕರು ಮತ್ತು ಉತ್ತಮ ಆದಾಯ, ಇಂಧನ ವೆಚ್ಚದಲ್ಲಿ ಉಳಿತಾಯವೂ ಆಗುತ್ತದೆ ಎಂದರು.

15 ಜಿಲ್ಲಾ ಆಸ್ಪತ್ರೆಗಳಿಗೆ ಎಂಆರ್‌ಐ:

ರಾಜ್ಯದ 15 ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಯ್ಕಾನ್ ಮತ್ತು 5 ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್‌ ಸೇವೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದರ ಅನುಷ್ಠಾನಕ್ಕೆ ₹47.41 ಕೋಟಿ ವೆಚ್ಚವಾಗಲಿದೆ. 

ಎಲ್ಲೆಲ್ಲಿ ಎಂಆರ್‌ಐ ಸ್ಯ್ಕಾನ್: ಸಿ.ವಿ.ರಾಮನ್‌ನಗರ ಸಾರ್ವಜನಿಕ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ (ಬೆಂಗಳೂರು), ಚಿಕ್ಕಮಗಳೂರು, ದಾವಣಗೆರೆ, ಬಾಗಲಕೋಟೆ, ಧಾರವಾಡ, ಹಾವೇರಿ, ರಾಮನಗರ, ಯಾದಗಿರಿ, ಮೈಸೂರು, ವೆನ್‌ಲಾಕ್ ಆಸ್ಪತ್ರೆ(ಮಂಗಳೂರು,) ವಿಜಯನಗರ, ಉಡುಪಿ, ಚಿಕ್ಕೋಡಿ, ಅರಸೀಕೆರೆ.

ಸಿಟಿಸ್ಕ್ಯಾನ್‌: ಮೈಸೂರು, ಚಿತ್ರದುರ್ಗ, ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆ,  ಬೆಂಗಳೂರಿನ ಸಿ.ವಿ.ರಾಮನ್‌ನಗರ ಸಾರ್ವಜನಿಕ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ.

ಪ್ರಮುಖ ಅಂಶಗಳು:

* ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಿಸುತ್ತಿರುವ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಪರಿಷ್ಕೃತ ಅಂದಾಜು ಮೊತ್ತ ₹187 ಕೋಟಿಗೆ ಒಪ್ಪಿಗೆ.

*ಏರೋಸ್ಪೇಸ್‌ ಹಾಗೂ ರಕ್ಷಣಾ ಶೇಷ್ಠತಾ ಕೇಂದ್ರದ ಪರಿಷ್ಕೃತ ಅಂದಾಜು ವೆಚ್ಚ ₹288.68 ಕೋಟಿಯಿಂದ ₹391.61 ಕೋಟಿಗೆ ಹೆಚ್ಚಿಸಲು ಅನುಮೋದನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.