ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ನೌಕರರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ ‘ಕೆಎಸ್‌ಆರ್‌ಟಿಸಿ ಆರೋಗ್ಯ’ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಚಾಲನೆ ನೀಡಿದರು. ಆ ಮೂಲಕ, ಸಾರಿಗೆ ನೌಕರರ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.
ಸುಮಾರು 34 ಸಾವಿರ ಸಿಬ್ಬಂದಿ ಮತ್ತು ಅವರ ಅವಲಂಬಿತರು (ಅಂದಾಜು 1.50 ಲಕ್ಷ) ಈ ಯೋಜನೆಗೆ ಅರ್ಹರಾಗಲಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ಈ ಯೋಜನೆಯಡಿ ಒಡಂಬಡಿಕೆ ಮಾಡಿಕೊಂಡಿರುವ ಎಲ್ಲ ಆಸ್ಪತ್ರೆಗಳು ಕೆಎಸ್ಆರ್ಟಿಸಿ ನೌಕರರು ಮತ್ತು ಕುಟುಂಬದವರು ಆಸ್ಪತ್ರೆಗೆ ಬಂದಾಗ ಗೌರವಯುತವಾಗಿ ಹಾಗೂ ಮಾನವೀಯತೆಯಿಂದ ಚಿಕಿತ್ಸೆ ನೀಡಬೇಕು’ ಎಂದರು.
‘ಸದ್ಯ ಕೆಎಸ್‌ಆರ್‌ಟಿಸಿ ಮಾತ್ರ ಈ ಯೋಜನೆಯನ್ನು ಜಾರಿಗೆ ತಂದಿದೆ. ಉಳಿದ ನಿಗಮಗಳು ಮೂರು ತಿಂಗಳ ಒಳಗೆ ಜಾರಿಗೆ ತರಲಿವೆ’ ಎಂದರು.
ಇದೇ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಟ್ರಸ್ಟ್‌ಗೆ ₹ 20 ಕೋಟಿ ಮೊತ್ತದ ಚೆಕ್ ಅನ್ನು ಹಸ್ತಾಂತರಿಸಿದ ಮುಖ್ಯಮಂತ್ರಿ, ಬಳಿಕ ನಿಗಮದ ಆಂತರಿಕ ನಿಯತಕಾಲಿಕ ‘ಸಾರಿಗೆ ಸಂಪದ’ ಸಂಚಿಕೆ ಮತ್ತು ಕೆಎಸ್‌ಆರ್‌ಟಿಸಿ ಆರೋಗ್ಯ ಕೈಪಿಡಿ ಬಿಡುಗಡೆ ಮಾಡಿದರು.
ನೌಕರರ ಕನಸು ನನಸಾದ ದಿನ: ‘ಸುಮಾರು 20 ವರ್ಷಗಳಿಂದ ಈ ವಿಚಾರವಾಗಿ ಬೇಡಿಕೆ ಇತ್ತು. ಅನೇಕ ನೌಕರರ ಕನಸು ನನಸಾಗಿದೆ. ಸದ್ಯ 250 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಇನ್ನೂ 50 ಆಸ್ಪತ್ರೆಗಳನ್ನು ಸೇರ್ಪಡೆ ಮಾಡಲಾಗುವುದು’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್, ‘ಕೆಎಸ್ಆರ್ಟಿಸಿ ಆರೋಗ್ಯ ಕಾರ್ಡ್ಗಾಗಿ ನೌಕರರು ಪ್ರತಿ ತಿಂಗಳು ₹ 650 ಪಾವತಿ ಮಾಡಬೇಕು. ಕೆಎಸ್ಆರ್ಟಿಸಿ ₹ 600 ಪಾವತಿ ಮಾಡಲಿದೆ. ಇದರಿಂದ ವರ್ಷಕ್ಕೆ ಒಟ್ಟು ₹ 46 ಕೋಟಿ ಸಂಗ್ರಹ ಆಗಲಿದೆ. ಈ ಹಿಂದೆ ನೌಕರರ ಆರೋಗ್ಯಕ್ಕಾಗಿ ಕೆಎಸ್ಆರ್ಟಿಸಿ ಪ್ರತಿವರ್ಷ ₹ 16 ಕೋಟಿ ವೆಚ್ಚ ಮಾಡುತ್ತಿತ್ತು’ ಎಂದರು.
lಸರ್ಕಾರಿ, ಖಾಸಗಿ ಸೇರಿ 250 ಆಸ್ಪತ್ರೆಗಳಲ್ಲಿ ಆರೋಗ್ಯ ಕಾರ್ಡ್ ಬಳಸಿ ನಗದುರಹಿತ ಚಿಕಿತ್ಸೆ
lಸೂಪರ್ ಸ್ಪೆಷಾಲಿಟಿ, ಮಲ್ಟಿ ಸ್ಪೆಷಾಲಿಟಿ, ಸಾಮಾನ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯ
l ಯಾವುದೇ ಕಾಯಿಲೆಗೆ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ
l ನೌಕರರ ಮನೆಯ ಆರು ಜನರು ಆರೋಗ್ಯ ಕಾರ್ಡ್ ಬಳಸಿ ಚಿಕಿತ್ಸೆ ಪಡೆಯಬಹುದು
l ನೌಕರರು ನಿವೃತ್ತಿ ಆಗುವವರೆಗೂ ಸೌಲಭ್ಯ
l ಕಣ್ಣು ಮತ್ತು ದಂತ ಚಿಕಿತ್ಸಾ ವೆಚ್ಚವೂ ಲಭ್ಯ
l ಆಯುರ್ವೇದ, ಪ್ರಕೃತಿ, ಯುನಾನಿ ಮತ್ತು ಹೋಮಿಯೋಪತಿ ಚಿಕಿತ್ಸೆಗಳೂ ಸಿಗಲಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.