ADVERTISEMENT

ಕರಾವಳಿ ಜಿಲ್ಲೆಗಳಲ್ಲಿ ಜನವರಿಯಿಂದ ಕುಚಲಕ್ಕಿ ವಿತರಣೆ– ಸಚಿವ ಕೋಟ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 10:38 IST
Last Updated 10 ನವೆಂಬರ್ 2022, 10:38 IST
ಸಚಿವ ಕೋಟ ಶ್ರೀನಿವಾಸ ಪೂಜಾರಿ
ಸಚಿವ ಕೋಟ ಶ್ರೀನಿವಾಸ ಪೂಜಾರಿ   

ಬೆಂಗಳೂರು: ‘ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಜ. 1ರಿಂದ ಕುಚಲಕ್ಕಿ ವಿತರಿಸಲು ನಿರ್ಧರಿಸಲಾಗಿದೆ’ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಈ ಮೂರೂ ಜಿಲ್ಲೆಗಳಲ್ಲಿ ವಿತರಿಸಲು ಒಟ್ಟು 13 ಲಕ್ಷ ಕ್ವಿಂಟಲ್ ಕುಚಲಕ್ಕಿ ಅವಶ್ಯಕತೆ ಇದೆ’ ಎಂದರು.

‘ಅದಕ್ಕೆ ಪೂರಕವಾಗಿ ಡಿ. 1ರಿಂದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರಕನ್ನಡ ಜಿಲ್ಲೆಯಲ್ಲಿ ಬೆಂಬಲ ಬೆಲೆ ನೀಡಿ ಭತ್ತ ಖರೀದಿ ಕೇಂದ್ರ ತೆರೆಯಲಾಗುವುದು. ₹ 2,540 ಬೆಂಬಲ ಬೆಲೆ ನೀಡಿ ಭತ್ತ ಖರೀದಿಸಿ ಸ್ಥಳೀಯವಾಗಿ ಸಂಸ್ಕರಿಸಲು ಉದ್ದೇಶಿಸಲಾಗಿದೆ. ಕೆಂಪು ಕುಚಲಕ್ಕಿಯ ಭತ್ತವನ್ನೇ ಖರೀದಿ ಮಾಡಲಾಗುವುದು’ ಎಂದರು.

ADVERTISEMENT

‘ಐದು ಕಿಲೋ ಕುಚಲಕ್ಕಿ ಪಡಿತರ ಮೂಲಕ ವಿತರಿಸಲಾಗುವುದು. ನಮ್ಮಲ್ಲಿರುವ ಕುಚಲಕ್ಕಿಯ ಭತ್ತ ವರ್ಷ ಪೂರ್ತಿ ಸಿಗುವುದು ಕಷ್ಟ. ಹೀಗಾಗಿ ರಾಜ್ಯದ ಬೇರೆ ಜಿಲ್ಲೆಗಳಿಂದ ಭತ್ತ ಖರೀದಿ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ’ ಎಂದರು.

‘ನಾವು ಊಟ ಮಾಡುವ ಕುಚಲಕ್ಕಿಯನ್ನು ಪಡಿತರ ಮೂಲಕ ಕೊಡಬೇಕು ಎಂದು ಕರಾವಳಿ ಜಿಲ್ಲೆಗಳ ಜನರು ಬೇಡಿಕೆ ಇಟ್ಟಿದ್ದರು. ಬೇರೆ ಬೇರೆ ಕಾರಣಗಳಿಂದ ಜಾರಿ ಸಾಧ್ಯವಾಗಿರಲಿಲ್ಲ. ಅವರ ಬೇಡಿಕೆ ಗಮನಿಸಿ ಮುಖ್ಯಮಂತ್ರಿ ಸ್ಥಳೀಯ ಕುಚಲಕ್ಕಿಯನ್ನು ವಿತರಿಸುವ ಭರವಸೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಭತ್ತವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು. ಖರೀದಿಸಿದ ಭತ್ತಕ್ಕೆ ಹೆಚ್ಚುವರಿ ಮೊತ್ತವನ್ನು ಸರ್ಕಾರ ಕೊಡಲಿದೆ’ ಎಂದರು.

‘ನಾವು ಕುಚಲಕ್ಕಿ ಮಾಡುವ ತಳಿಗಳಾದ ಜಯ, ಅಭಿಲಾಷ ಜ್ಯೋತಿ, ಎಂಒ 4ಗೆ ಬೆಂಬಲ ಬೆಲೆ ಘೋಷಿಸಿದ್ದೇವೆ. 13 ಲಕ್ಷ ಕ್ವಿಂಟಲ್ ಭತ್ತ ಖರೀದಿಯ ಗುರಿ ಇದೆ. ಈ ಪೈಕಿ, 8.50 ಲಕ್ಷ ಕ್ವಿಂಟಲ್ ಭತ್ತ ಬರುವ ಅಂದಾಜಿದೆ. ಅದನ್ನು ವಿತರಿಸಲಾಗುವುದು. ಕೇಂದ್ರ ಸರ್ಕಾರ ಕೊಡುವ ಬೆಂಬಲ ಬೆಲೆಗೆ ಭತ್ತ ಸಿಗದ ಕಾರಣ, ಪ್ರತಿ ಕ್ವಿಂಟಲ್‌ಗೆ ₹ 500 ಹೆಚ್ಚುವರಿ ಬೆಲೆ ಕೊಡಲಾಗುವುದು. ಇದನ್ನು ರಾಜ್ಯ ಸರ್ಕಾರ ಭರಿಸುತ್ತದೆ. ಇದಕ್ಕೆ ₹ 132 ಕೋಟಿ ಆಗುವ ಅಂದಾಜಿದೆ. ಈ ಹಿನ್ನೆಲೆಯಲ್ಲಿ ಆಹಾರ ಮತ್ತು ಕೃಷಿ ಇಲಾಖೆ ಜೊತೆಗೆ ಸಭೆ ಮಾಡಿದ್ದೇನೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.