ADVERTISEMENT

ಕುಂ.ವೀರಭದ್ರಪ್ಪ ಅವರ ‘ಸುಪಾರಿ’ ಕಾದಂಬರಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2023, 21:31 IST
Last Updated 11 ಫೆಬ್ರುವರಿ 2023, 21:31 IST
ಕುಂ. ವೀರಭದ್ರಪ್ಪ (ಎಡದಿಂದ ಮೊದಲನೆಯವರು) ಅವರ ‘ಸುಪಾರಿ’ ಕಾದಂಬರಿಯನ್ನು ಪ್ರೊ. ಸಿ.ಎನ್. ರಾಮಚಂದ್ರನ್ (ಎಡದಿಂದ ಎರಡನೆಯವರು) ಬಿಡುಗಡೆ ಮಾಡಿದರು. ಕೆ. ಮರುಳಸಿದ್ದಪ್ಪ, ಅಗ್ರಹಾರ ಕೃಷ್ಣಮೂರ್ತಿ ಮತ್ತು ಸಪ್ನ ಬುಕ್‌ ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಇದ್ದಾರೆ.       –ಪ್ರಜಾವಾಣಿ ಚಿತ್ರ
ಕುಂ. ವೀರಭದ್ರಪ್ಪ (ಎಡದಿಂದ ಮೊದಲನೆಯವರು) ಅವರ ‘ಸುಪಾರಿ’ ಕಾದಂಬರಿಯನ್ನು ಪ್ರೊ. ಸಿ.ಎನ್. ರಾಮಚಂದ್ರನ್ (ಎಡದಿಂದ ಎರಡನೆಯವರು) ಬಿಡುಗಡೆ ಮಾಡಿದರು. ಕೆ. ಮರುಳಸಿದ್ದಪ್ಪ, ಅಗ್ರಹಾರ ಕೃಷ್ಣಮೂರ್ತಿ ಮತ್ತು ಸಪ್ನ ಬುಕ್‌ ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಇದ್ದಾರೆ.       –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಮ್ಮ ಸಂವಿಧಾನವನ್ನು ನಾಶ ಮಾಡಲು ಸುಪಾರಿ ತೆಗೆದುಕೊಂಡವರೇ ದೇಶದಲ್ಲಿ ಈಗ ಮುಂಚೂಣಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಬುದ್ಧ ಲೇಖಕರಿಗೆ ಜನಾಭಿಪ್ರಾಯ ರೂಪಿಸುವ ಜವಾಬ್ದಾರಿ ಇದೆ’ ಎಂದು ಸಾಹಿತಿ ಕೆ. ಮರುಳಸಿದ್ದಪ್ಪ ಹೇಳಿದರು.

ಸಪ್ನ ಬುಕ್‌ ಹೌಸ್ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುಂ. ವೀರಭದ್ರಪ್ಪ ಅವರ ‘ಸುಪಾರಿ’ ಕಾದಂಬರಿ ಬಿಡುಗಡೆಯಾಯಿತು.

‘ನಮ್ಮಲ್ಲಿ ಬಹಳಷ್ಟು ಪ್ರತಿಭಾವಂತ ಲೇಖಕರು ಇದ್ದಾರೆ. ಆದರೆ, ಅವರು ನಿರ್ಣಾಯಕ ಸಂದರ್ಭದಲ್ಲಿ ಮೌನಿ ಬಾಬಾಗಳಾಗುತ್ತಾರೆ. ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಹೇಳುವ ಲೇಖಕರನ್ನು ನಾನು ಗೌರವಿಸುತ್ತೇನೆ.
ಈ ವಿಚಾರವಾಗಿ ನನಗೆ ಎಸ್‌.ಎಲ್. ಬೈರಪ್ಪ ಅವರ ಮೇಲೆ ಹೆಚ್ಚು ಗೌರವವಿದೆ. ಅವರ ಅನೇಕ ವಿಚಾರಗಳನ್ನು ನಾನು ಒಪ್ಪುವುದಿಲ್ಲ. ಆದರೆ, ಅವರು ತಮಗೆ ಅನಿಸಿದ್ದನ್ನು ಸ್ಪಷ್ಟವಾಗಿ, ನೇರವಾಗಿ ಹೇಳುತ್ತಾರೆ. ಅದೇ ರೀತಿ, ಕುಂ. ವೀರಭದ್ರಪ್ಪ ಅವರೂ ನೇರವಾಗಿ ತಿಳಿಸುತ್ತಾರೆ. ಸೃಜನಶೀಲ ಲೇಖಕರು ಜನಾಭಿಪ್ರಾಯ ರೂಪಿಸಲು ಸ್ಪಷ್ಟವಾಗಿ, ನೇರವಾಗಿ ಹೇಳಬೇಕು’ ಎಂದು ತಿಳಿಸಿದರು.

ADVERTISEMENT

ಮುಖಪುಟಕ್ಕೆ ಆಕ್ಷೇಪ: ‘ಅಪಾಯಗಳನ್ನು ಎದುರಿಸಲು ಸನ್ನದ್ದನಾಗಿಯೇ ಕಾದಂಬರಿಯನ್ನು ಬರೆಯುತ್ತೇನೆ. ‘ಸುಪಾರಿ’ ಕಾದಂಬರಿ ಮುಖಪುಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಗಳುವ್ಯಕ್ತವಾಗಿದ್ದವು. ಎಚ್‌.ಡಿ. ಕುಮಾರಸ್ವಾಮಿ ಮತ್ತು ಬ್ರಾಹ್ಮಣ ಸಮುದಾಯದ ನಡುವೆ ಮುಖ್ಯಮಂತ್ರಿ ವಿಚಾರವಾಗಿ ಘರ್ಷಣೆನಡೆಯುತ್ತಿದೆ. ಯಾರು ಮುಖ್ಯಮಂತ್ರಿಯಾದರೂ ನಮ್ಮ ತಕರಾರು ಇಲ್ಲ. ಹಿಂದೆ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ನನಗೆ ಕೈಕೊಡದ ಚುನಾಯಿತ ಮುಖ್ಯಮಂತ್ರಿ, ಜ್ಯೋತಿಷಿಯೊಬ್ಬರಿಗೆ ಸಾಷ್ಟಾಂಗ ಪ್ರಣಾಮ ಮಾಡಿದ್ದರು. ನಿಜವಾದ ಮುಖ್ಯಮಂತ್ರಿ ಯಾರು’ ಎಂದು ಕಂ. ವೀರಭದ್ರಪ್ಪ ಪ್ರಶ್ನಿಸಿದರು.

ವಿಮರ್ಶಕ ಪ್ರೊ.ಸಿ.ಎನ್. ರಾಮಚಂದ್ರನ್ ಹಾಗೂ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅವರು ಕಾದಂಬರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಸುಪಾರಿ ಕಿಲ್ಲರ್ ಜತೆ ವಾಸ, ಸಂದರ್ಶನ’

‘ನಾನು 40 ವರ್ಷಗಳು ಆಂಧ್ರಪ್ರದೇಶದ ರಾಯಲುಸೀಮೆಯಲ್ಲಿ ವಾಸವಿದ್ದೆ. ಅಲ್ಲಿನ ತಳಸಮುದಾಯ, ಮೂಲಬೇರುಗಳು ಅರಿವಿನಲ್ಲಿದೆ. ಅಲ್ಲಿನ ನಿಗೂಢ ಭಾರತದ ಜತೆಗೆ ಒಡನಾಟ ಹೊಂದಿದ್ದೇನೆ. ಬೇತಂಚೆರ್ಲದಲ್ಲಿ ಜ್ಯೋತಿಷ್ಯಾಲಯ ನಡೆಸುತ್ತಿರುವ ಆಂಜನೇಯ ಶಾಸ್ತ್ರಿ, ಹಿಂದೆ ಸುಪಾರಿ ಕಿಲ್ಲರ್ ಆಗಿದ್ದರು. ಕುಕಟ್‌ಪಲ್ಲಿಯಲ್ಲಿ ಚಹಾ ಅಂಗಡಿ ಇಟ್ಟುಕೊಂಡಿರುವ ಸುಂಕದ ಪ್ರಸಾದ್ ನಾಯ್ಡು ಅವರೂ ಸುಪಾರಿ ಕಿಲ್ಲರ್ ಆಗಿದ್ದರು. ಅವರ ಸಂದರ್ಶನ ಮಾಡಿದ್ದೇನೆ. ಒಂದುವಾಗ್ಲಿ ಎಂಬ ಹಳ್ಳಿಯಲ್ಲಿ ಇದ್ದಾಗ ಸುಪಾರಿ ಕಿಲ್ಲರ್ ಒಬ್ಬರು 15 ದಿನ ನನ್ನ ಜತೆ ವಾಸವಿದ್ದರು. ಮನೆಯನ್ನು ತೊರೆದು 2 ದಿನಗಳಲ್ಲಿಯೇ ಅವರು ಕೊಲೆಯಾಗಿರುವುದು ತಿಳಿಯಿತು. ಈ ಅನುಭವಗಳು ಕಾದಂಬರಿಗೆ ಸಹಕಾರಿಯಾದವು’ ಎಂದು ಕುಂ. ವೀರಭದ್ರಪ್ಪ ಹೇಳಿದರು. ‘ನನ್ನ ‘ಜೈ ಬಜರಂಗಬಲಿ’ ಕಾದಂಬರಿಯನ್ನು ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಪ್ರಲ್ಹಾದ್ ಜೋಶಿ ಓದಿದರೆ, ಕೂಡಲೇ ನನ್ನ ಮೇಲೆ ಕ್ರಮ ಕೈಗೊಳ್ಳುತ್ತಿದ್ದರು. ಆದರೆ, ನನ್ನ ಪುಣ್ಯ ಅವರು ಇಂತಹ ಕಾದಂಬರಿಗಳನ್ನು ಓದುವುದಿಲ್ಲ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.