ADVERTISEMENT

ಬಿಜೆಪಿ ಆರೋಪಕ್ಕೆ ಎಚ್‌ಡಿಕೆ ಕಿಡಿ

ರಾಮನಗರ: ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದಕ್ಕೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2018, 18:49 IST
Last Updated 2 ನವೆಂಬರ್ 2018, 18:49 IST
   

ಹಾಸನ: ರಾಮನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆಸರಿದಿರುವುದನ್ನುಮುಂದಿಟ್ಟುಕೊಂಡು ಕಾಂಗ್ರೆಸ್– ಜೆಡಿಎಸ್ ಪಕ್ಷಗಳು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿವೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಈ ಹಿಂದೆ ‘ಆಪರೇಷನ್ ಕಮಲ’ ನಡೆಸಿ ಅವರು ಮಾಡಿದ್ದು ಏನು ಎಂದು ಪ್ರಶ್ನಿಸಿದ್ದಾರೆ.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎನ್ನುವುದು ಬಾಲಿಶತನದ್ದು. ಏನಂತ, ಯಾರ ಮೇಲೆ ದೂರು ಕೊಡುತ್ತಾರೆ ಎಂದು ವ್ಯಂಗ್ಯವಾಡಿದರು.

ಸಮ್ಮಿಶ್ರ ಸರ್ಕಾರಕ್ಕೆ ನ. 6ರ ಡೆಡ್‌ಲೈನ್ ನೀಡುತ್ತಿರುವುದು ಯಾವ ಆಧಾರದ ಮೇಲೆ ಈ ಧೋರಣೆ ಪ್ರಜಾಪ್ರ
ಭುತ್ವ ಉಳಿಸುವುದಕ್ಕೊ, ಕೊಲೆ ಮಾಡುವುದಕ್ಕೊ ಎಂಬ ವಿಚಾರಜನರ ಮುಂದೆ ಹೇಳಬೇಕು ಎಂದು ಒತ್ತಾಯಿಸಿದರು.

ADVERTISEMENT

‘ನಾವು ಯಾವ ರೀತಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದೇವೆ ಎಂಬುದನ್ನು ಹೇಳಲಿ. ಬಿಜೆಪಿಯಲ್ಲಿ ಹಲವು ಮುಖಂಡರಿದ್ದರೂ, ಅವರನ್ನು ಕಡೆಗಣಿಸಲಾಯಿತು. ಕಾಂಗ್ರೆಸ್‌ ನಿಷ್ಠಾವಂತ ಕಾರ್ಯಕರ್ತನಿಗೆ ಗಾಳ ಹಾಕಿ ಅಭ್ಯರ್ಥಿ ಮಾಡುವಾಗ ಪ್ರಜಾಪ್ರಭುತ್ವದ ಕಗ್ಗೊಲೆ ಬಗ್ಗೆ ಯೋಚನೆ ಮಾಡಲಿಲ್ಲವೆ’ ಎಂದರು.

‘ಆಪರೇಷನ್‌ ಕಮಲ’ ನಡೆಸಿ 20 ಮಂದಿ ಕಾಂಗ್ರೆಸ್– ಜೆಡಿಎಸ್ ಶಾಸಕರ ರಾಜೀನಾಮೆ ಕೊಡಿಸಲಾಯಿತು. ಅದು ಪ್ರಜಾಪ್ರಭುತ್ವದ ಕಗ್ಗೊಲೆ ಅಲ್ಲವೆ. ಈಗಲೂ ಕೋಟಿ ಕೋಟಿ ಆಮಿಷವೊಡ್ಡಿ ಆಡಳಿತ ಪಕ್ಷಗಳ ಶಾಸಕರನ್ನು ರಾಜೀನಾಮೆ ಕೊಡಿಸಲು ಹೊರಟಿರುವುದು ಯಾವ ನಡೆ’ ಎಂದು ಕಿಡಿಕಾರಿದರು.

ಹೆದರಿದ ಬಿಜೆಪಿಯವರಿಂದ ಮದ್ಯ ಹಂಚಿಕೆ: ಎಚ್‌ಡಿಕೆ

ಬೆಂಗಳೂರು: ‘ನಾನು ಹೋಗಿದ್ದರಿಂದ ಶಿವಮೊಗ್ಗದಲ್ಲಿ ಮೈತ್ರಿಕೂಟಕ್ಕೆ ಹೆಚ್ಚಿನ ಬಲ ಬಂದಿದೆ. ನಮಗೆ ಹೆದರಿಕೊಂಡು ಬಿಜೆಪಿಯವರು ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಹಂಚಿದ್ದಾರೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.

ನಗರದಲ್ಲಿ ಶುಕ್ರವಾರ, ‘ಬೆಂಗಳೂರು ಟ್ರಾಮಾ ಕೋರ್ಸ್‌’ಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಬಿಜೆಪಿಯ ಆಯನೂರು ಮಂಜುನಾಥ್ ನೀಡಿದ್ದ ಹೇಳಿಕೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಹೌದು ಅವರು ಹೇಳಿದ್ದೇ ನಿಜ. ಹೆದರಿಕೊಂಡು ಮದ್ಯ ಹಂಚಿಕೆ ಹೆಚ್ಚು ಮಾಡಿದ್ದಾರೆ’ ಎಂದರು.

‘ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ ಸೇರಿರುವುದು ದೈವಪ್ರೇರಣೆ ಇರಬಹುದು. ಹಣ ಕೊಟ್ಟು ಅವರನ್ನು ಖರೀದಿಸುವ ಅಗತ್ಯ ನನಗಿಲ್ಲ. ನಾನು ಹೋಗದಿದ್ದರೂ ರಾಮನಗರದ ಜನರೇ ಮುಂದೆ ನಿಂತು ಪ್ರಚಾರ ಮಾಡುತ್ತಾರೆ. ನಮ್ಮ ಪಕ್ಷವನ್ನು ಗೆಲ್ಲಿಸುತ್ತಾರೆ’ ಎಂದರು.

‘ವಿಧಾನಪರಿಷತ್ ಸದಸ್ಯತ್ವದ ಎರಡು ಸ್ಥಾನವನ್ನು ಕಾಂಗ್ರೆಸ್‌ಗೆ ನೀಡಲಾಗಿದೆ. ಒಂದನ್ನು ನಮ್ಮ ಪಕ್ಷಕ್ಕೆ ಉಳಿಸಿಕೊಂಡಿದ್ದೇವೆ. ಶೀಘ್ರದಲ್ಲೇ ನೇಮಕ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.