
ಎಚ್.ಸಿ. ಮಹದೇವಪ್ಪ
ಬೆಂಗಳೂರು: ಭಗವದ್ಗೀತೆ ಕಲಿಯುವುದರಿಂದ ಜನರಿಗೆ ಉಪಯೋಗವಾಗುತ್ತಾ ಎಂದು ಹಿಂದೆ ಕೇಳಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈಗ ಶಾಲೆಗಳಲ್ಲಿ ಭಗವದ್ಗೀತೆ ಕಲಿಸಬೇಕು ಎಂದು ಪತ್ರ ಬರೆದಿರುವುದು ಅವರು ಸೈದ್ಧಾಂತಿಕವಾಗಿ ಅಧಃಪತನ ಹೊಂದಿರುವುದಕ್ಕೆ ಸಾಕ್ಷಿ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ತಿಳಿಸಿದರು.
ಭಗವದ್ಗೀತೆಯ ಅಪ್ರಸ್ತುತತೆಯ ಬಗ್ಗೆ ಮತ್ತು ಸರ್ಕಾರವು ಹೊಂದಿರಬೇಕಾದ ಜವಾಬ್ದಾರಿಗಳ ಬಗ್ಗೆ ಕುಮಾರಸ್ವಾಮಿ ಮಾತನಾಡಿದ್ದರು. ಈಗ ಕೋಮುವಾದಿ ಆರ್‌ಎಸ್‌ಎಸ್ ಅನ್ನು ಬೆಂಬಲಿಸಲು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಟೀಕಿಸಿದರು.
‘ಮಕ್ಕಳ ತಲೆಗೆ ಕೇವಲ ಧಾರ್ಮಿಕತೆ ತುಂಬುವುದನ್ನು ಬಿಟ್ಟು ಒಂದಷ್ಟು ವೈಚಾರಿಕ, ವೈಜ್ಞಾನಿಕ ಮತ್ತು ಸಮಾನತೆಯ ಜ್ಞಾನವನ್ನು ತುಂಬುವ ಕೆಲಸ ಮಾಡಿ. ನಿಮ್ಮ ಕಾರಿನಲ್ಲಿ ಇರುವ ಪುಸ್ತಕವನ್ನು ಪೂರ್ತಿ ಓದಿ ಬಿಡಿ’ ಎಂದು ಸಲಹೆ ನೀಡಿದ್ದಾರೆ.
‘ಸೈದ್ಧಾಂತಿಕವಾಗಿ ಬಹಳಷ್ಟು ಗೊಂದಲದಲ್ಲಿ ಇರುವ ಕುಮಾರಸ್ವಾಮಿ ಅವರು ಭಗವದ್ಗೀತೆಯ ಹಿಂದೆ ಬಿದ್ದು ಮಕ್ಕಳ ಮನಸ್ಸಿಂದ ಪ್ರಜಾಸತ್ತಾತ್ಮಕ ತಿಳಿವಳಿಕೆಯನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದೊಂದು ಅಪಾಯಕಾರಿ ಹೇಳಿಕೆಯಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇನೆ’ ಎಂದು ಹೇಳಿದರು.
‘ಸಂವಿಧಾನದ ಬಲದಿಂದ ಸಚಿವರಾಗಿರುವ ಕುಮಾರಸ್ವಾಮಿ ಅವರು ಎಲ್ಲರಿಗೂ ಸಂವಿಧಾನ ಕಲಿಸಿ ಎಂದು ಪತ್ರ ಬರೆದಿದ್ದರೆ ಅವರಿಗೂ, ಅವರ ಪಕ್ಷದ ಅಸ್ತಿತ್ವಕ್ಕೂ ಒಂದು ಅರ್ಥ ಇರುತ್ತಿತ್ತು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.