ADVERTISEMENT

‘ಕನಿಷ್ಠ ವೇತನ’ದತ್ತ ಕಾರ್ಮಿಕರ ಕಣ್ಣು! ಕೌಶಲರಹಿತರಿಗೆ ಕನಿಷ್ಠ ವೇತನ ₹31,566

ವಲಯ–1ರಲ್ಲಿ ಕೌಶಲರಹಿತರಿಗೆ ಕನಿಷ್ಠ ವೇತನ ₹31,566 ನೀಡಲು ಪಟ್ಟು

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 21:13 IST
Last Updated 1 ಜುಲೈ 2022, 21:13 IST
   

ಬೆಂಗಳೂರು: ಕನಿಷ್ಠ ವೇತನ ಕಾಯ್ದೆಯ ವ್ಯಾಪ್ತಿಯಲ್ಲಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸುವ ಪ್ರಕ್ರಿಯೆ ಪ್ರಗತಿ ಯಲ್ಲಿದ್ದು, ರಾಜ್ಯ ಸರ್ಕಾರ ನಿಗದಿಪಡಿಸಬಹುದಾದ ಪರಿಷ್ಕೃತ ವೇತನ ಪ್ರಮಾಣದ ಕಡೆಗೆ ಕಾರ್ಮಿಕ ಸಮುದಾಯ ನಿರೀಕ್ಷೆಯಿಂದ ಕಾಯುತ್ತಿದೆ.

ಸದ್ಯದ ಬೆಲೆ ಆಧರಿಸಿ ಲೆಕ್ಕಾಚಾರ ಮಾಡಿರುವ ಕಾರ್ಮಿಕ ಸಂಘಟನೆಗಳ ಒಕ್ಕೂಟ, ಬೆಂಗಳೂರು ಸೇರಿ ಎಂಟು ನಗರಗಳನ್ನು ಒಳಗೊಂಡ ವಲಯ– 1 ರಲ್ಲಿ ಕೌಶಲರಹಿತ ಕಾರ್ಮಿಕರಿಗೆ ಕನಿಷ್ಠ ವೇತನ ₹ 31,566 ವೇತನ ನಿಗದಿಪಡಿಸಬೇಕೆಂದು ಪಟ್ಟು ಹಿಡಿದಿದೆ.

ಈ ಮಧ್ಯೆ, ಕನಿಷ್ಠ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ 2016ರ ಲೆಕ್ಕಾಚಾರವನ್ನು ಪರಿಗಣಿಸಿ ಕೌಶಲರಹಿತ, ಅರೆಕೌಶಲ, ಕೌಶಲ ಮತ್ತು ಅತಿ ಕೌಶಲ ಹೊಂದಿದ ಕಾರ್ಮಿಕರಿಗೆ ಸರಾಸರಿ ಶೇ 10ರಷ್ಟು ಪರಿಷ್ಕರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ADVERTISEMENT

ಇತ್ತೀಚೆಗೆ ನಡೆದ ಕನಿಷ್ಠ ವೇತನ ಸಲಹಾ ಮಂಡಳಿಯ ಸಭೆಯಲ್ಲಿ ವೇತನ ಹೆಚ್ಚಿಸಬೇಕಾದ ಅನಿವಾರ್ಯವನ್ನು ಕಾರ್ಮಿಕ ಸಂಘಟನೆಗಳ ಒಕ್ಕೂಟಗಳ ಜಂಟಿ ಸಮಿತಿ ಪ್ರತಿಪಾದಿಸಿದೆ. ಆದರೆ, ಕಂಪನಿಗಳ ಮಾಲೀಕರು ಕಾರ್ಮಿಕರ ಬೇಡಿಕೆಗಳನ್ನು ಒಪ್ಪಲು ತಯಾರಿಲ್ಲ.

ಕನಿಷ್ಠ ವೇತನ ಕಾಯ್ದೆಯಂತೆ ಪ್ರತಿ ಐದು ವರ್ಷಗಳ ಒಳಗೆ ವೇತನವನ್ನು ಪರಿಷ್ಕರಿಸಬೇಕು. ಅನುಸೂಚಿತ 82 ಉದ್ಯೋಗಗಳಿಗೆ ಕನಿಷ್ಠ ವೇತನ ನಿಗದಿಯಾಗಬೇಕು. ಕಾರ್ಮಿಕ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಕನಿಷ್ಠ ವೇತನ ಸಲಹಾ ಮಂಡಳಿ ಸಭೆಯಲ್ಲಿ ಆರು ಅನುಸೂಚಿತ ಉದ್ಯೋಗಗಳ ವೇತನ ಪರಿಷ್ಕರಣೆ ಬಗ್ಗೆ ತ್ರಿಪಕ್ಷೀಯ (ಕಾರ್ಮಿಕ, ಮಾಲೀಕರ ಮತ್ತು ಸರ್ಕಾರದ ತಲಾ 9 ಪ್ರತಿನಿಧಿಗಳು) ಸಭೆ ನಡೆದಿದೆ.

‘ಸರ್ಕಾರ 2016ರಲ್ಲಿ ಕನಿಷ್ಠ ವೇತನ ವನ್ನು ಕೊನೆಯದಾಗಿ ಪರಿಷ್ಕರಿಸಿದೆ. ಅದೇ ಲೆಕ್ಕಾಚಾರವನ್ನು ತೆಗೆದುಕೊಂಡು ಶೇ 10ರಷ್ಟು ಹೆಚ್ಚಿಸಲು ಈಗ ಚಿಂತನೆ ನಡೆಸಿದೆ. ಆಗ ₹ 10 ಸಾವಿರ ತುಟ್ಟಿಭತ್ಯೆ ಸೇರಿ ₹ 13 ಸಾವಿರದಿಂದ ₹ 15 ಸಾವಿರವರೆಗೆ ಕನಿಷ್ಠ ವೇತನ ಸಿಗುತ್ತಿದೆ. ಈ ರೀತಿ ಕನಿಷ್ಠ ವೇತನ ಲೆಕ್ಕಾಚಾರ ಅವೈಜ್ಞಾನಿಕ ಕ್ರಮ. ಮೇ ತಿಂಗಳಲ್ಲಿ ಹಣದುಬ್ಬರ ಶೇ 7ರಷ್ಟಿದ್ದರೆ ಕಳೆದ ತಿಂಗಳು ಅದು ಶೇ 7.8ರಷ್ಟಾಗಿದೆ. ಹೀಗಿರುವಾಗ ಶೇ 10ರಷ್ಟು ಹೆಚ್ಚಿಸು ವುದು ಸಮಂಜಸವಲ್ಲ. ವೇತನ ಪರಿ ಷ್ಕರಿಸಲು ಸರ್ಕಾರಕ್ಕೆ ಮನಸ್ಸಿದೆ. ಆದರೆ, ಲೆಕ್ಕಾಚಾರ ಮಾಡಲು ತಯಾ ರಿಲ್ಲ’ ಎಂದು ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಎಂ. ಸತ್ಯಾನಂದ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸಂಪರ್ಕಕ್ಕೆ ಸಿಗದ ಆಯುಕ್ತ:ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕಾರ್ಮಿಕ ಇಲಾಖೆಯ ಆಯುಕ್ತ ಅಕ್ರಂ ಪಾಷಾ ಅವರಿಗೆ ಕರೆ ಮಾಡಿದರೂ ಅವರು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

ಕಾರ್ಮಿಕ ಸಮುದಾಯದ ಬೇಡಿಕೆ

‘ವೈಜ್ಞಾನಿಕವಾಗಿ ಲೆಕ್ಕಾಚಾರ ಮಾಡಿ ವೇತನ ಪರಿಷ್ಕರಿಸಬೇಕು. ಒಂದು ಕುಟುಂಬದಲ್ಲಿ ನಾಲ್ಕು ಜನ ಇದ್ದರೆ, ಮೂರು ಜನಕ್ಕೆ ದವಸಧಾನ್ಯ, ತರಕಾರಿ, ಮೊಟ್ಟೆ, ಬಟ್ಟೆ, ವಸತಿ, ಬಾಡಿಗೆ, ಶಿಕ್ಷಣ, ವೈದ್ಯಕೀಯ, ಸಾರಿಗೆಗೆ ತಿಂಗಳಿಗೆ ಎಷ್ಟು ಬೇಕಾಗುತ್ತದೆ ಲೆಕ್ಕ ಹಾಕಿಕೊಂಡು ಕನಿಷ್ಠ ವೇತನ ಲೆಕ್ಕಾಚಾರ ಮಾಡಲಾಗುತ್ತದೆ. ಜನತಾ ಬಜಾರ್‌, ಹಾಪ್‌ ಕಾಮ್ಸ್‌ನಲ್ಲಿ ಇವತ್ತಿನ ಬೆಲೆ ಗಣನೆಗೆ ತೆಗೆದುಕೊಂಡು ವೈಜ್ಞಾನಿಕವಾಗಿ ಲೆಕ್ಕಮಾಡಿ ಕನಿಷ್ಠ ವೇತನ ಪರಿಷ್ಕರಿಸುವಂತೆ ನಾವು ಬೇಡಿಕೆ ಇಟ್ಟಿದ್ದೇವೆ’ ಎಂದು ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಎಂ. ಸತ್ಯಾನಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.