ADVERTISEMENT

ವಿಧವಾ ಕಾರ್ಮಿಕರ ಕಲ್ಯಾಣಕ್ಕೆ ‘ಪ್ರತ್ಯೇಕ ಮಂಡಳಿ’: ಮಸೂದೆ ಸಿದ್ಧ

ಕಾರ್ಮಿಕ ಇಲಾಖೆಯಿಂದ ಕರಡು ಮಸೂದೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 20:52 IST
Last Updated 4 ಜನವರಿ 2026, 20:52 IST
<div class="paragraphs"><p>ಸಂತೋಷ್ ಲಾಡ್</p></div>

ಸಂತೋಷ್ ಲಾಡ್

   

ಬೆಂಗಳೂರು: ನಿರ್ಗತಿಕ ವಿಧವಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆಗಳನ್ನು ಒದಗಿಸಲು ಪ್ರತ್ಯೇಕ ಮಂಡಳಿ ಮತ್ತು ಕಲ್ಯಾಣ ನಿಧಿ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಉದ್ದೇಶದಿಂದ ಕಾರ್ಮಿಕ ಇಲಾಖೆ ಮಸೂದೆಯೊಂದನ್ನು ರೂಪಿಸಿದೆ.

ADVERTISEMENT

ಪೆಟ್ರೋಲಿಯಂ ಉತ್ಪನ್ನಗಳ ಮಾರಾಟದ ಮೇಲಿನ ಸೆಸ್, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಸಹಾಯಧನ, ನೋಂದಾಯಿತ ಮಹಿಳಾ ಕಾರ್ಮಿಕರು ನೀಡುವ ದೇಣಿಗೆ, ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ, ದೇಣಿಗೆಗಳಿಂದ ಈ ನಿಧಿಗೆ ಹಣ ಸಂಗ್ರಹಿಸಲು ಉದ್ದೇಶಿಸಲಾಗಿದೆ.

ಇದಕ್ಕಾಗಿ ‘ಕರ್ನಾಟಕ ನಿರ್ಗತಿಕ ವಿಧವಾ ಕಾರ್ಮಿಕರು (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ– 2026’ರ ಕರಡು ಸಿದ್ಧವಾಗಿದೆ.

ಪ್ರತಿಯೊಬ್ಬ ನಿರ್ಗತಿಕ ವಿಧವಾ ಕಾರ್ಮಿಕರಿಗೆ ಕೆಲಸ ಮಾಡುವ ಮತ್ತು ಜೀವನೋಪಾಯದ ಹಕ್ಕಿದೆ. ನೋಂದಾಯಿತ ಫಲಾನುಭವಿಗಳು ಮತ್ತು ಅವರ ಕುಟುಂಬಗಳಿಗೆ ಸಾಮಾಜಿಕ ಭದ್ರತೆ ಮತ್ತು ಇತರ ಕಲ್ಯಾಣ ಯೋಜನೆಗಳನ್ನು ಒದಗಿಸುವ ಉದ್ದೇಶದಿಂದ ವಿಧವಾ ಕಾರ್ಮಿಕ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಂಡಳಿ ರಚಿಸುವ ಪ್ರಸ್ತಾವ ಈ ಮಸೂದೆಯಲ್ಲಿದೆ. ಪ್ರಸ್ತಾವಿತ ಮಂಡಳಿಯು ಫಲಾನುಭವಿಗಳಿಗೆ ಕೌಶಲ ತರಬೇತಿಯನ್ನೂ ನೀಡಲಿದೆ.

ವಿವಿಧ ಮೂಲಗಳಿಂದ ಸಂಗ್ರಹವಾದ ನಿಧಿಯ ಮೇಲ್ವಿಚಾರಣೆಯನ್ನು ಸರ್ಕಾರಿ ಅಧಿಕಾರಿಗಳು, ನಿರ್ಗತಿಕ ವಿಧವಾ ಕಾರ್ಮಿಕರು ಮತ್ತು ಸಂಘಗಳ ಪ್ರತಿನಿಧಿಗಳನ್ನು ಒಳಗೊಂಡ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಂಡಳಿ ನಿರ್ವಹಿಸಲಿದೆ. ಆದರೆ, ನಿರ್ಗತಿಕ ವಿಧವಾ ಕಾರ್ಮಿಕರನ್ನು ಗುರುತಿಸಲು ಆದಾಯದ ಮಿತಿ ನಿಗದಿಪಡಿಸಿಲ್ಲ ಎಂದೂ ಮಸೂದೆಯಲ್ಲಿದೆ.

ನೋಂದಣಿ ಕಡ್ಡಾಯ:ಈ ಮಂಡಳಿಯ ಮೂಲಕ ಸಾಮಾಜಿಕ ಭದ್ರತೆಯ ಸೌಲಭ್ಯಗಳನ್ನು ಪಡೆಯಲು ಬಯಸುವರು ಕಾರ್ಮಿಕ ಇಲಾಖೆಯಿಂದ ಮೂರು ವರ್ಷಗಳ ಮಾನ್ಯತೆಯ ನೋಂದಣಿ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆದಿರಬೇಕು. ಮಂಡಳಿಯು ಎಲ್ಲ ನೋಂದಣಿಗಳ ಅಂಕಿ–ಅಂಶಗಳನ್ನು ನಿರ್ವಹಿಸಬೇಕು. ಅಲ್ಲದೆ, ತಂತ್ರಾಂಶದ ಮೂಲಕ ದಾಖಲೆಗಳ ಡಿಜಿಟಲೀಕರಣ ಕೈಗೊಳ್ಳಬೇಕು. ನೋಂದಾಯಿತ ಪ್ರತಿಯೊಬ್ಬ ವಿಧವಾ ಕಾರ್ಮಿಕರಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗುವುದು ಎಂದೂ ಮಸೂದೆಯಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.