ADVERTISEMENT

ಯಾವ ವೃತ್ತಿಯೂ ಮೇಲು, ಕೀಳಲ್ಲ: ಉಪವಿಭಾಗಾಧಿಕಾರಿ ಟಿ.ಜವರೇಗೌಡ

ಮಡಿಕೇರಿ ಕಾವೇರಿ ಕಲಾಕ್ಷೇತ್ರದಲ್ಲಿ ಕಾರ್ಮಿಕ ಸಮ್ಮಾನ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 13:35 IST
Last Updated 1 ಮಾರ್ಚ್ 2020, 13:35 IST
ಮಡಿಕೇರಿಯಲ್ಲಿ ಭಾನುವಾರ ನಡೆದ ಕಾರ್ಮಿಕ ಸಮ್ಮಾನ ದಿನಾಚರಣೆಯನ್ನು ಎಸಿ ಜವರೇಗೌಡ ಉದ್ಘಾಟಿಸಿದರು
ಮಡಿಕೇರಿಯಲ್ಲಿ ಭಾನುವಾರ ನಡೆದ ಕಾರ್ಮಿಕ ಸಮ್ಮಾನ ದಿನಾಚರಣೆಯನ್ನು ಎಸಿ ಜವರೇಗೌಡ ಉದ್ಘಾಟಿಸಿದರು   

ಮಡಿಕೇರಿ: ‘ಸಮಾಜದಲ್ಲಿ ಯಾವ ವೃತ್ತಿಯೂ ಮೇಲು ಕೀಳು ಎಂಬುದಿಲ್ಲ. ಆ ಭಾವನೆಗಳು ಯಾರಲ್ಲೂ ಇರಬಾರದು’ ಎಂದು ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಭಾನುವಾರ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಕಾರ್ಮಿಕ ಸಮ್ಮಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಕಾಯಕವೇ ಕೈಲಾಸ’ ಎಂಬ ತತ್ವವನ್ನು ಅಳವಡಿಸಿಕೊಂಡು ದುಡಿಮೆ ಮಾಡಬೇಕು. ಆಗಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಆಗಲಿದೆ ಎಂದು ಹೇಳಿದರು.

‘ಸಮಾಜದಲ್ಲಿ ಬಹಳಷ್ಟು ಕೆಳಸ್ತರದಲ್ಲಿ ದುಡಿಯುವ ಕಾರ್ಮಿಕರನ್ನು ಗುರುತಿಸಿ ಸನ್ಮಾನಿಸುವುದು ನಿಜಕ್ಕೂ ಸಂತಸದ ವಿಚಾರ ಮತ್ತು ಇದೊಂದು ವಿಶಿಷ್ಟ ಕಾರ್ಯಕ್ರಮ. ಸಮಾಜದಲ್ಲಿ ಯಾವುದೇ ವೃತ್ತಿ ಮೇಲು-ಕೀಳು ಎಂಬ ಭಾವನೆಗಳು ನಮ್ಮಲ್ಲಿರಬಾರದು’ ಎಂದು ಹೇಳಿದರು.

ADVERTISEMENT

‘ಸಮಾಜವೊಂದು ಪರಿಪೂರ್ಣ ಆಗುವುದು ಎಲ್ಲ ವರ್ಗದ ಜನರ ದುಡಿಮೆಯಿಂದಲೇ. ಇನ್ನು ಮುಂದೆಯೂ ಸಹ ಸಮಾಜಕ್ಕೆ ಕೊಡುಗೆ ನೀಡುವಂತೆ ಉತ್ತಮವಾಗಿ ಕಾರ್ಯ ನಿರ್ವಹಿಸಿ. ಕಾರ್ಮಿಕರು ಗಳಿಸಿದ್ದರಲ್ಲಿ ಸ್ವಲ್ಪ ಉಳಿಸಿ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ. ಈ ಮೂಲಕ ನೀವು ಕೂಡ ಮುಖ್ಯವಾಹಿನಿಗೆ ಬರಬಹುದು ಎಂದರು.

‘ಎಂದಿಗೂ ಸಹ ದುಶ್ಚಟಗಳನ್ನು ಪಾಲಿಸದೆ ಸಮಾಜಮುಖಿಯಾಗಿರಿ’ ಎಂದು ಸಲಹೆ ನೀಡಿದರು.

ತಾಲ್ಲೂಕು ಕಾರ್ಮಿಕ ಅಧಿಕಾರಿ ಯತ್ನಟ್ಟಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಮಾರ್ಚ್ 1ರಂದು ಅಸಂಘಟಿತ ವಲಯದ ಕಾರ್ಮಿಕರಿಗೆ ಶ್ರಮ ಸಮ್ಮಾನ ಮತ್ತು ವಿಶೇಷ ಪುರಸ್ಕಾರ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸನ್ಮಾನ ಕಾರ್ಯಕ್ರಮವು ಪ್ರಥಮವಾಗಿ 2019ರ ಮಾರ್ಚ್ 1ರಂದು ಪ್ರಥಮವಾಗಿ ಆಚರಿಸಲಾಗಿತ್ತು ಎಂದು ತಿಳಿಸಿದರು.

2018ರಲ್ಲಿ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರಾದ ಹಮಾಲರು, ಟೈಲರ್‌ಗಳು, ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಚಿಂದಿ ಆಯುವವರು, ಮನೆ ಗೆಲಸದವರು, ಮೆಕ್ಯಾನಿಕ್, ಮಂಡಕ್ಕಿ ಭಟ್ಟಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಂಡಳಿ ವತಿಯಿಂದ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಜಿಲ್ಲೆಯಲ್ಲಿ ಇದುವರೆಗೂ ಈ ವಲಯಗಳಲ್ಲಿ ಕೆಲಸ ಮಾಡುವ ಈ ವರ್ಗದ ಕಾರ್ಮಿಕರಿಂದ 1764 ಅರ್ಜಿಗಳು ಸಲ್ಲಿಕೆಯಾಗಿದ್ದು ಈವರೆಗೆ 1,067 ಸ್ಮಾರ್ಟ್ ಕಾರ್ಡ್‌ಗಳು ಮಂಡಳಿಯಿಂದ ವಿತರಣೆಯಾಗಿದ್ದು, ಉಳಿದ ಸ್ಮಾರ್ಟ್ ಕಾರ್ಡ್‌ಗಳನ್ನು ಸಹ ನೀಡಲಾಗುತ್ತದೆ ಎಂದು ತಿಳಿಸಿದರು.

ಆಟೊ ಚಾಲಕರ ಸಂಘದ ಅಧ್ಯಕ್ಷ ಎಸ್.ಜಿ.ಮೇದಪ್ಪ ಮಾತನಾಡಿ, ಸಮಾಜದಲ್ಲಿ ಅಸಂಘಟಿತ ಕಾರ್ಮಿಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸರ್ಕಾರ ಇತ್ತೀಚಿನ ದಿನಗಳಲ್ಲಿ ಈ ವರ್ಗದ ಕಾರ್ಮಿಕರ ಸೇವೆಯನ್ನು ಪರಿಗಣಿಸಿ ಸನ್ಮಾನ ಮಾಡುತ್ತಿರುವುದು ಸಂತಸದ ವಿಷಯ. ಇಲಾಖೆಯೂ ಸಹ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದೆ ಎಂದು ತಿಳಿಸಿದರು.

ಟೈಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಆನಂದ್ ಮಾತನಾಡಿ, ಅಸಂಘಟಿತ ವಲಯದ ಕಾರ್ಮಿಕರು ಸಮಾಜದಲ್ಲಿ ಸಾಕಷ್ಟು ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಸೇವೆಯನ್ನೂ ಪರಿಗಣಿಸಿ ಸನ್ಮಾನ ಮಾಡುತ್ತಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.

ಕಾರ್ಮಿಕ ಸಮ್ಮಾನ ದಿನಾಚರಣೆಯ ಪ್ರಯುಕ್ತ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯ ಅಡಿ ಆಯ್ಕೆಯಾದ 11 ವಲಯದ ಅಸಂಘಟಿತ ಕಾರ್ಮಿಕರು ಹಾಗೂ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ ಅಡಿ ಆಯ್ಕೆಯಾದ 1 ವಲಯದ, ಒಟ್ಟು 90 ಜನ ಕಾರ್ಮಿಕರಿಕೆ ಶ್ರಮ ಸಮ್ಮಾನ ಪ್ರಶಸ್ತಿ ಮತ್ತು ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕು ಕಾರ್ಮಿಕ ಅಧಿಕಾರಿಗಳಾದ ಎಂ.ಮಹದೇವ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.