ADVERTISEMENT

‘ಖರ್ಗೆ ಅವರ ಮೇಲೆ ಅಭಿಮಾನವಿದ್ದರೆ ಏಕೆ ಸೋಲಿಸಿದಿರಿ’

ಜಿ.ಪಂ. ಸದಸ್ಯ ಅರುಣಕುಮಾರ ಪಾಟೀಲಗೆ ಮಾಲೀಕಯ್ಯ ಬೆಂಬಲಿಗರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 9:13 IST
Last Updated 12 ಜೂನ್ 2020, 9:13 IST
ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ   

ಕಲಬುರ್ಗಿ: ‘ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜೀವ ಬೆದರಿಕೆ ಕರೆ ಬಂದಿದ್ದಕ್ಕೆ ಪತ್ರಿಕಾಗೋಷ್ಠಿ ನಡೆಸಿ ಖಂಡಿಸಿರುವ ಜಿಲ್ಲಾ ಪಂಚಾಯಿತಿ ಸದಸ್ಯ ಅರುಣಕುಮಾರ ಪಾಟೀಲ ಅವರು ತಮ್ಮ ತಂದೆ ಶಾಸಕರಾಗಿರುವ ಕ್ಷೇತ್ರದಲ್ಲಿ ಖರ್ಗೆ ಅವರಿಗೆ ಕಡಿಮೆ ಮತಗಳನ್ನೇಕೆ ತಂದುಕೊಟ್ಟರು’ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಅವರ ಬೆಂಬಲಿಗ, ಕಲ್ಯಾಣ ಕರ್ನಾಟಕ ಕೋಲಿ ಸಮಾಜದ ಉಪಾಧ್ಯಕ್ಷ ಲಚ್ಚಪ್ಪ ಜಮಾದಾರ ಪ್ರಶ್ನಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಖರ್ಗೆ ಅವರ ಬಗ್ಗೆ ಮಾತನಾಡಿದ್ದಕ್ಕೆ ಮಾಲೀಕಯ್ಯ ಅವರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಅರುಣಕುಮಾರ ಪಾಟೀಲ ಮಾಡಿದ್ದಾರೆ. ಖರ್ಗೆ ಅವರ ಬಗ್ಗೆ ಅಷ್ಟೊಂದು ಅಭಿಮಾನವಿದ್ದರೆ ಅಫಜಲಪುರ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ಕೊಡಿಸಬಹುದಿತ್ತು. ಅದನ್ನೇಕೆ ಮಾಡಲಿಲ್ಲ? ಚುನಾವಣೆಯಲ್ಲಿ ಎಷ್ಟು ಅಭಿಮಾನಪೂರ್ವಕವಾಗಿ ಕೆಲಸ ಮಾಡಿದ್ದೀರಿ. ನಿಮ್ಮ ಪ್ರಯತ್ನ ಎಂತಹದು ಎಂಬುದು ಖರ್ಗೆ ಅವರಿಗೆ ಗೊತ್ತಿದೆ. ಸಂದಿಯೊಳಗೆ ಚೂರಿ ಹಾಕಿ ಮಂದಿಯೊಳಗೆ ಸಾಚಾ ಆಗುವುದು ಹೆಚ್ಚು ದಿನ ನಡೆಯುವುದಿಲ್ಲ’ ಎಂದು ತಿರುಗೇಟು ನೀಡಿದರು.

‘ಮಾಲೀಕಯ್ಯ ಅವರನ್ನು ಬೆಳೆಸಿದ್ದ ಖರ್ಗೆಯವರೇ ಎಂದು ಅರುಣಕುಮಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅದಕ್ಕೂ ಮುನ್ನ ಬಂಗಾರಪ್ಪ ಅವರ ಸಂಪುಟದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸ್ಥಾನ ನೀಡಲೇಬೇಕು ಎಂದು ಹಟ ಹಿಡಿದು ಸಚಿವ ಸ್ಥಾನ ಕೊಡಿಸಿದ್ದು ಮಾಲೀಕಯ್ಯ ಅವರ ತಂದೆ ವೆಂಕಯ್ಯ ಗುತ್ತೇದಾರ ಅವರು’ ಎಂದರು.

ADVERTISEMENT

‘ಅರುಣಕುಮಾರ ಪಾಟೀಲ ಅವರು ಅನಗತ್ಯವಾಗಿ ಮಾಲೀಕಯ್ಯ ಅವರ ವಿರುದ್ಧ ಆರೋಪ ಮಾಡುವುದನ್ನು ಬಿಡಬೇಕು. ಇಲ್ಲದಿದ್ದರೆ ಅವರ ಅಭಿಮಾನಿಗಳು ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.

ಎಪಿಎಂಸಿ ಮಾಜಿ ನಿರ್ದೇಶಕ ಗುರುಬಾಳ ಜಕ್ಕಾಪೂರ, ಪುರಸಭೆ ಮಾಜಿ ಉಪಾಧ್ಯಕ್ಷ ಶ್ರೀಶೈಲ ಬಿ. ಬಳೂರ್ಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.