
ಬೆಂಗಳೂರು: ‘ಕಾನೂನುಬದ್ಧ ಅನುಮತಿ ಇಲ್ಲದೇ ಯಾವುದೇ ಒಬ್ಬ ವ್ಯಕ್ತಿ ತನ್ನ ಜಮೀನಿನಲ್ಲಿ ಪ್ರವೇಶಿಸುವುದನ್ನು ತಡೆಯುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ’ ಎಂಬ ಇಂಗ್ಲೆಂಡಿನ ಅತ್ಯುನ್ನತ ಕಿಂಗ್ಸ್ ಕೋರ್ಟ್‌ನ ಲೋಕಪ್ರಸಿದ್ಧ ತೀರ್ಪನ್ನು ಉಲ್ಲೇಖಿಸುವ ಮೂಲಕ ಕರ್ನಾಟಕ ಹೈಕೋರ್ಟ್, ಭೂ ಸ್ವಾಧೀನ ಪರಿಹಾರ ಕೋರಿಕೆ ಪ್ರಕರಣವೊಂದರಲ್ಲಿ ತುಮಕೂರು ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ.
ಈ ಸಂಬಂಧ ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿಯ ಹರದಗೆರೆ ಗ್ರಾಮದ ಎಚ್.ಪಿ.ರಮೇಶ್ ಮತ್ತು ಎಚ್.ಆರ್.ಸುಷ್ಮಿತಾ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.
‘ಸಂವಿಧಾನದ 300 ಎ ವಿಧಿಯಡಿ ಸಂರಕ್ಷಿಸಲಾದ ವ್ಯಕ್ತಿಯೊಬ್ಬನ ಆಸ್ತಿಯ ಹಕ್ಕನ್ನು, 21ನೇ ವಿಧಿಯಡಿ ಕಡ್ಡಾಯಗೊಳಿಸಲಾದ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದಿಂದ ಬಲಪಡಿಸಲಾಗಿದೆ’ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿರುವ ನ್ಯಾಯಪೀಠ, ‘ಅರ್ಜಿದಾರರು ಸಕ್ಷಮ ಪ್ರಾಧಿಕಾರದಲ್ಲಿ ಅಥವಾ ನ್ಯಾಯಾಲಯದಲ್ಲಿ ತಮ್ಮ ಹಕ್ಕನ್ನು ಸ್ಥಾಪಿಸಿಕೊಳ್ಳಬಹುದು’ ಎಂದು ಆದೇಶಿಸಿದೆ.
‘ಅರ್ಜಿದಾರರು ನಾಲ್ಕು ವಾರಗಳ ಒಳಗಾಗಿ ಅಗತ್ಯ ದಾಖಲೆಗಳೊಂದಿಗೆ ತಮ್ಮ ಆಕ್ಷೇಪಣೆಗಳ ಹೇಳಿಕೆಯನ್ನು ತುಮಕೂರು ಜಿಲ್ಲಾಧಿಕಾರಿ ಮುಂದೆ ಸಲ್ಲಿಸಬೇಕು. ಜಿಲ್ಲಾಧಿಕಾರಿ ಆಕ್ಷೇಪಣೆಯನ್ನು ಪರಿಗಣಿಸಿ ಅರ್ಜಿದಾರರ ವೈಯಕ್ತಿಕ ವಿಚಾರಣೆ ನಡೆಸಿದ ನಂತರ ಸೂಕ್ತ ಆದೇಶ ಹೊರಡಿಸಬೇಕು. ವಿಚಾರಣೆಯ ನಂತರ, ವಿವಾದದಲ್ಲಿರುವ ಸ್ಥಿರಾಸ್ತಿ ಸರ್ಕಾರಿ ಆಸ್ತಿ ಎಂಬುದು ಸಾಬೀತಾದರೆ, ಅರ್ಜಿದಾರರು ಯಾವುದೇ ಪರಿಹಾರಕ್ಕೆ ಅರ್ಹರಾಗಿರುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.
‘ಆಸ್ತಿ ಅರ್ಜಿದಾರರಿಗೆ ಸೇರಿದ್ದು ಮತ್ತು ಅವರು ಭೂಮಿಯನ್ನು ಅತಿಕ್ರಮಿಸಿಲ್ಲ ಎಂದಾದರೆ, ಅಧಿಕಾರಿಗಳು ಕಾನೂನಿನ ಪ್ರಕಾರ ರಸ್ತೆ ನಿರ್ಮಾಣ ಮತ್ತು ಶಾಲಾ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಪ್ರದೇಶವನ್ನು ನಿರ್ದಿಷ್ಟಪಡಿಸಬೇಕು. ಕಾನೂನು ಪ್ರಕಾರ ಅರ್ಜಿದಾರರಿಗೆ ಪರಿಹಾರ ಪಾವತಿಸುವ ಮೂಲಕ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದುವರಿಯಬೇಕು’ ಎಂದೂ ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.
ಪ್ರಕರಣವೇನು?: ‘ಹರದಗೆರೆ ಗ್ರಾಮದ ಸರ್ವೇ ನಂಬರ್ 51ರಲ್ಲಿನ ನಮ್ಮ ಜಮೀನನ್ನು ಸರ್ಕಾರ ಶಾಲಾ ಕಟ್ಟಡ ನಿರ್ಮಾಣ ಮತ್ತು ಸಾರ್ವಜನಿಕ ರಸ್ತೆ ಬಳಕೆಗಾಗಿ ಅಕ್ರಮವಾಗಿ ಬಳಸಿದ್ದು, ಪರಿಹಾರ ನಿರಾಕರಿಸಿದೆ. ಆದ್ದರಿಂದ, ಭೂ ಸ್ವಾಧೀನ ಪ್ರಕರಣಗಳಲ್ಲಿ, ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕುಗಳಿಗಾಗಿ ಇರುವ ಪುನರ್ವಸತಿ ಮತ್ತು ಪುನರ್‌ಸ್ಥಾಪನೆ ಕಾಯ್ದೆ–2013ರ ಅಡಿಯಲ್ಲಿ ಸರ್ಕಾರ ಬಳಸಿಕೊಂಡಿರುವ ನಮ್ಮ ಆಸ್ತಿಗೆ ಪರಿಹಾರ ಪಾವತಿಸಬೇಕು’ ಎಂದು ಅರ್ಜಿದಾರರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ್ದ ತುಮಕೂರು ಜಿಲ್ಲಾಧಿಕಾರಿ, ‘ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿ ಹರದಗೆರೆ ಗ್ರಾಮದ ಸರ್ವೇ ನಂ.51/1ರಲ್ಲಿ ಶಾಲಾ ಕಟ್ಟಡದ ಜಾಗ ಹಾಗೂ ಸಾರ್ವಜನಿಕ ಬಳಕೆಯ ರಸ್ತೆಯನ್ನು ಈಗ್ಗೆ 60 ವರ್ಷಗಳಿಗೂ ಮೊದಲಿಂದಲೇ ಉಪಯೋಗಿಸಲಾಗುತ್ತಿದೆ. ಈಗಾಗಲೇ ಅಲ್ಲಿ ಶಾಲೆಯ ಕಟ್ಟಡ ಮತ್ತು ರಸ್ತೆ ನಿರ್ಮಾಣವಾಗಿರುವುದರಿಂದ ಅರ್ಜಿದಾರರು ಈಗ ಪರಿಹಾರ ಕೇಳುತ್ತಿದ್ದು ಈ ಅರ್ಜಿಯನ್ನು ತಿರಸ್ಕರಿಸಲಾಗಿದೆ’ ಎಂದು 2021ರ ನವೆಂಬರ್ 8ರಂದು ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
Highlights - * 65 ವರ್ಷಗಳಷ್ಟು ಹಿಂದಿನ ಭೂಸ್ವಾಧೀನ ಪ್ರಕರಣ * ಶತಮಾನಗಳಷ್ಟು ಪುರಾತನದ ಇಂಗ್ಲೆಂಡ್ ತೀರ್ಪು ಉಲ್ಲೇಖ
Cut-off box - ‘ಅಧಿಕಾರಿಗಳ ಏಕಪಕ್ಷೀಯ ನಿರ್ಧಾರ ಸಲ್ಲ’ ‘ಅರ್ಜಿದಾರರು 2 ಎಕರೆ 8 ಗುಂಟೆ ಅಳತೆಯ ಜಮೀನಿನ ಸಂಪೂರ್ಣ ಮಾಲೀಕರು ಎಂದು ಹೇಳಿಕೊಳ್ಳುತ್ತಾರೆ. ಕೆಲವು ದಾಖಲೆಗಳ ಆಧಾರದಡಿ ಅವರು ತಮ್ಮ ಹಕ್ಕನ್ನು ಸಾಧಿಸುತ್ತಿದ್ದಾರೆ. ಹೀಗಿರುವಾಗ ಕಟ್ಟಡ ರಚನೆ ಅಥವಾ ರಸ್ತೆ ವಿಸ್ತರಣೆಯ ತಕರಾರಿನ ಅಂಶವನ್ನು ಆದ್ಯತೆಯ ಮೇರೆಗೆ ನಿರ್ವಹಿಸಬೇಕು. ಏಕೆಂದರೆ ಇವೆಲ್ಲಾ ಸಾರ್ವಜನಿಕ ಹಿತಾಸಕ್ತಿಯ ವಿಷಯ. ಆದರೆ ಈ ಪ್ರಕ್ರಿಯೆಯಲ್ಲಿ ನಾಗರಿಕರ ಹಕ್ಕುಗಳನ್ನು ಅಪಾಯಕ್ಕೆ ಸಿಲುಕಿಸಲು ಸಾಧ್ಯವಿಲ್ಲ ಎಂಬುದನ್ನು ಮರೆಯಬಾರದು. ಮತ್ತೊಂದೆಡೆ ಭೂಮಿಯ ಮಾಲೀಕರಾಗಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ಅರ್ಜಿದಾರರ ಹಕ್ಕುಗಳನ್ನು ಅಧಿಕಾರಿಗಳು ಏಕಪಕ್ಷೀಯವಾಗಿ ನಿರ್ಧರಿಸಲಾಗದು’ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.