ADVERTISEMENT

ಸ್ಮಶಾನಕ್ಕೆ ಜಮೀನು

ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಸುತ್ತೋಲೆ

ಬಿ.ಎಸ್.ಷಣ್ಮುಖಪ್ಪ
Published 29 ಅಕ್ಟೋಬರ್ 2019, 19:15 IST
Last Updated 29 ಅಕ್ಟೋಬರ್ 2019, 19:15 IST
ಸ್ಮಶಾನ
ಸ್ಮಶಾನ    

ಬೆಂಗಳೂರು: ನಮ್ಮೂರಿನಲ್ಲಿ ಸ್ಮಶಾನ ಇಲ್ಲ ಎಂದು ಇನ್ನು ಮುಂದೆ ಯಾವ ಗ್ರಾಮ ಅಥವಾ ನಗರವಾಸಿಗಳೂ ಕೊರಗುವಂತಿಲ್ಲ...!

ಇಂತಹ ಕೊರಗನ್ನು ದೂರ ಮಾಡಲು ಮುಂದಾಗಿರುವ ಕಂದಾಯ ಇಲಾಖೆ, ‘ಸ್ಮಶಾನ ಭೂಮಿ ಕೊರತೆ ಯಿರುವ ಗ್ರಾಮ ಮತ್ತು ನಗರಗಳಲ್ಲಿ ಸ್ಮಶಾನ ಭೂಮಿ ಒದಗಿಸುವ ಸಂಬಂಧ ಅಗತ್ಯ ಜಮೀನು ಕಾಯ್ದಿರಿಸಲು ಸಾಧ್ಯವಾದ ಕ್ರಮ ಕೈಗೊಳ್ಳಬೇಕು’ ಎಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ.

‘ರಾಜ್ಯದ ಅನೇಕ ಗ್ರಾಮಗಳಲ್ಲಿ ಶವ ಸಂಸ್ಕಾರಕ್ಕಾಗಿ ಜಮೀನುಗಳ ಸೌಲಭ್ಯ ಇಲ್ಲದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಆದ್ದರಿಂದ ಕರ್ನಾಟಕ ಭೂ ಕಂದಾಯ ಕಾಯ್ದೆ–1964ರ ಕಲಂ 71ರ ಅಡಿಯಲ್ಲಿ ಜಿಲ್ಲಾಧಿಕಾರಿಗಳು ಅಗತ್ಯ ಜಮೀನು ಕಾಯ್ದಿರಿಸಲು ಮುಂದಾಗಬೇಕು’ ಎಂದು ಸೂಚಿಸಿದೆ.

ADVERTISEMENT

‘ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಠ 18ರಿಂದ 20 ಗುಂಟೆ ಜಮೀನನ್ನು ಶವಸಂಸ್ಕಾರದ ಉದ್ದೇಶಕ್ಕಾಗಿ ಕಾಯ್ದಿರಿಸಬೇಕು. ಸರ್ಕಾರಿ ಜಮೀನು ಲಭ್ಯವಿಲ್ಲದ ಗ್ರಾಮಗಳಲ್ಲಿ ಖುಷ್ಕಿ ಜಮೀನನ್ನು ಭೂ ಮಾಲೀಕರಿಂದ ಮಾರ್ಗಸೂಚಿ ಬೆಲೆಗಿಂತ ಮೂರು ಪಟ್ಟು ಹೆಚ್ಚು ಬೆಲೆಗೆ ನೇರವಾಗಿ ಖರೀದಿಸಬೇಕು’ ಎಂದು ವಿವರಿಸಲಾಗಿದೆ.

‘ಅನಿವಾರ್ಯ ಪ್ರಸಂಗಗಳಲ್ಲಿ ಧಾರ್ಮಿಕತೆ ಆಧರಿಸಿ ಪ್ರತ್ಯೇಕವಾಗಿ ಸರ್ಕಾರಿ ಜಮೀನನ್ನು ಶವ ಸಂಸ್ಕಾರಕ್ಕಾಗಿ ಕಾಯ್ದಿರಿಸಬೇಕು’ ಎಂದೂ ತಾಕೀತು ಮಾಡಲಾಗಿದೆ.

‘1,224 ಗ್ರಾಮಗಳಲ್ಲಿ ಸ್ಮಶಾನಗಳಿಲ್ಲ’

‘ರಾಜ್ಯ ಸರ್ಕಾರ 2014ರ ನವೆಂಬರ್ 11ರಂದು ಹೊರಡಿಸಿದ ಅಧಿಸೂಚನೆ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಅಂತ್ಯಕ್ರಿಯೆಗೆ ಅಗತ್ಯವಾದ 60 ಚದರ ಅಡಿ ಜಾಗವನ್ನು ಸ್ಥಳೀಯ ತಾಲ್ಲೂಕು ಅಥವಾ ಜಿಲ್ಲಾಡಳಿತ ಕಾಯ್ದಿರಿಸಬೇಕು. ಆದರೆ, ರಾಜ್ಯದ 17 ಜಿಲ್ಲೆಗಳ 1,224 ಗ್ರಾಮಗಳಲ್ಲಿ ಸೂಕ್ತ ಸ್ಮಶಾನ ವ್ಯವಸ್ಥೆಯೇ ಇಲ್ಲ’ ಎಂದು ಅರ್ಜಿದಾರರೂ ಆದ ವಕೀಲ ಮೊಹಮದ್‌ ಇಕ್ಬಾಲ್‌ ದೂರಿದ್ದರು.

‘ಸ್ಮಶಾನಗಳ ಸುತ್ತ ಮರ ಬೆಳೆಸಬೇಕು. ತಂತಿಬೇಲಿ ಹಾಕಬೇಕು, ಅಗತ್ಯಮೂಲ ಸೌಕರ್ಯ ಕಲ್ಪಿಸಬೇಕು. ಒತ್ತುವರಿದಾರರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಈ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.

ಹೈಕೋರ್ಟ್‌ ಆದೇಶದ ಫಲಶ್ರುತಿ

‘ಪ್ರತಿಯೊಬ್ಬ ಮೃತ ವ್ಯಕ್ತಿಯ ಗೌರವಯುತ ಅಂತ್ಯ ಸಂಸ್ಕಾರಕ್ಕೆ ಅಗತ್ಯವಾದ ಸ್ಮಶಾನ ಭೂಮಿಯನ್ನು ಸ್ಥಳೀಯ ಜಿಲ್ಲಾಡಳಿತ ಕಾಯ್ದಿರಿಸಿಕೊಂಡು ಹೋಗಲು ನಿರ್ದೇಶಿಸಬೇಕು’ ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರ ಮೂರನೇ ಸುತ್ತಿನ ಹೋರಾಟದ ಫಲಶ್ರುತಿಯಾಗಿದೆ.

ಈ ನಿಟ್ಟಿನಲ್ಲಿ ಹೈಕೋರ್ಟ್‌, 2019ರ ಆಗಸ್ಟ್‌ 20ರಂದು ನೀಡಿದ ನಿರ್ದೇಶನದ ಅನುಸಾರ, ಎಲ್ಲ ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್‌ಗಳು ಈ ದಿಸೆಯಲ್ಲಿ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.