ADVERTISEMENT

ರೈತ ಸಂಘಟನೆಗಳ ಜೊತೆ ಸೇರಿ ಹೋರಾಟ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 18:13 IST
Last Updated 22 ಜುಲೈ 2020, 18:13 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳ ಜೊತೆಗೂಡಿ ಹೋರಾಟ ರೂಪಿಸಲಾಗುವುದು. ಈ ಕುರಿತು ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗುವುದು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ತಮ್ಮ ನಿವಾಸದಲ್ಲಿ ರೈತ ಸಂಘಟನೆಗಳ ಮುಖಂಡರ ಜೊತೆ ಬುಧವಾರ ಚರ್ಚೆ ನಡೆಸಿದ ಬಳಿಕ ಅವರು ಮಾತನಾಡಿದರು.

‘ಇದು ರೈತರ ಕತ್ತು ಹಿಚುಕುವ ಕರಾಳ ಶಾಸನ. ಸರ್ಕಾರ ರೈತರನ್ನು ಬೀದಿಪಾಲು ಮಾಡಲು ಹೊರಟಿದೆ. ಹೋರಾಟಕ್ಕೆ ನಾವೂ ತಯಾರು ಎಂದು ರೈತ ಮುಖಂಡರು ತಿಳಿಸಿದ್ದಾರೆ. ಹಳ್ಳಿ ಹಳ್ಳಿಗಳಲ್ಲೂ ಹೋರಾಟ ಮಾಡಲಾಗುವುದು‘ ಎಂದರು.

ADVERTISEMENT

‘ವೈದ್ಯಕೀಯ ಉಪಕರಣ ಖರೀದಿಯಲ್ಲಿ ಆಗಿರುವ ಅವ್ಯವಹಾರ ಕುರಿತು ಮೊದಲು ಹೋರಾಟ ಕೈಗೆತ್ತಿಕೊಳ್ಳುತ್ತೇವೆ. ಬಳಿಕ ಭೂ ಸುಧಾರಣಾ ಕಾಯ್ದೆಗೆ ಸಂಬಂಧಿಸಿದ ಚಳವಳಿ ಆರಂಭವಾಗಲಿದೆ. ಎಪಿಎಂಸಿ ಕಾಯ್ದೆ, ಇಂಧನ ಕಾಯ್ದೆ ತಿದ್ದುಪಡಿ ಸೇರಿದಂತೆ ವಿವಿಧ ಕಾಯ್ದೆಗಳಿಗೆ ಕೇಂದ್ರ– ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿ ವಿರುದ್ಧ ಹೋರಾಟ ನಡೆಸುತ್ತೇವೆ’ ಎಂದರು.

‘ಕೊರೊನಾ ಉಪಕರಣಗಳ ಖರೀದಿಗೆ ಸಂಬಂಧಿಸಿದ ಕೆಲವು ಮಾಹಿತಿ ನಮ್ಮಲ್ಲಿದೆ. ಗುರುವಾರ (ಜುಲೈ 23) ನಡೆಯುವ ಸುದ್ದಿಗೋಷ್ಠಿಯಲ್ಲಿ ಅದನ್ನು ಜನರ ಮುಂದಿಡುತ್ತೇವೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

ರೈತ ಸಂಘಟನೆಗಳ ಪ್ರಮುಖರಾದ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ, ಚಾಮರಸ ಮಾಲಿ ಪಾಟೀಲ, ವೀರಸಂಗಯ್ಯ, ಗೋಪಾಲ್ ಸಭೆಯಲ್ಲಿದ್ದರು.

ಸಚಿವ ಅಶೋಕಗೆ ಉಳುಮೆ ಪಾಠ

‘ನಮ್ಮ ಮನೆಯಲ್ಲಿ ಕೆಲಸದವರ ಜೊತೆ ನಾನೂ ಹೊಲ ಉಳುಮೆ ಮಾಡಲು ಹೋಗುತ್ತಿದ್ದೆ. ನೇಗಿಲ ಹಿಡಿ ಹಿಡಿದು ಅಂಗೈ ಗಾಯವಾಗುತ್ತಿತ್ತು. ನಾನು ಈಗಲೂ ನೇಗಿಲು ಕಟ್ಟಬಲ್ಲೆ, ಕುಂಟೆ ಕಟ್ಟಬಲ್ಲೆ, ಹಲುಬೆ ಹೊಡೆಯಬಲ್ಲೆ, ಮಟ್ಟ ಹೊಡೆಯಬಲ್ಲೆ, ಹೊಲ ಉಳುಮೆ ಮಾಡಬಲ್ಲೆ. ರೈತನಾಗಿ ಈ ಎಲ್ಲವನ್ನೂ ಕಂದಾಯ ಸಚಿವ ಅಶೋಕ ಮಾಡಿದ್ದಾರೆಯೇ’ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ‘ಕಂದಾಯ ಸಚಿವರಾದವರು ಈ ಎಲ್ಲವನ್ನೂ ತಿಳಿದುಕೊಳ್ಳಬೇಕು. ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವುದರಿಂದ ಏನೇನು ಅನಾಹುತ ಆಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.