ADVERTISEMENT

ಅನಾಥ ಮಕ್ಕಳಿಗೆ ಬಾರದ ಕಲಿಕಾ ಪ್ರೋತ್ಸಾಹಧನ

ಒಂದು ವರ್ಷದಿಂದ ಸ್ಥಗಿತಗೊಂಡ ಅರ್ಹ ಮಕ್ಕಳ ಆಯ್ಕೆ

ಬಾಲಕೃಷ್ಣ ಪಿ.ಎಚ್‌
Published 5 ಜುಲೈ 2018, 19:58 IST
Last Updated 5 ಜುಲೈ 2018, 19:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಜೈಲಲ್ಲಿರುವ ಪೋಷಕರ, ನಿರ್ಗತಿಕರ, ಲೈಂಗಿಕ ಕಾರ್ಯಕರ್ತೆಯರ ಹಾಗೂ ಏಕಪೋಷಕರ (ವಿಧವೆ) ಮಕ್ಕಳಿಗೆ ಕಲಿಕೆಗಾಗಿ ನೀಡಲಾಗುತ್ತಿದ್ದ ಪ್ರೋತ್ಸಾಹಧನ ಒಂದು ವರ್ಷದಿಂದ ಬಂದಿಲ್ಲ. ಹೀಗಾಗಿ ಈ ವರ್ಷ ಅಂತಹ ಮಕ್ಕಳನ್ನು ಗುರುತಿಸುವ ಕಾರ್ಯ ಇನ್ನೂ ನಡೆದಿಲ್ಲ.

ಬಡತನದಲ್ಲಿ ಇರುವ ಈ ಮಕ್ಕಳಿಗೆ ಬಾಲನ್ಯಾಯ ಕಾಯ್ದೆ 2000/ತಿದ್ದುಪಡಿ 2016ರಂತೆ ಮೂರು ವರ್ಷಗಳವರೆಗೆ ಪ್ರತಿ ತಿಂಗಳಿಗೆ ₹ 1,000ದಂತೆ ನೀಡಲಾಗುತ್ತದೆ. 18 ವರ್ಷದೊಳಗಿನವರಷ್ಟೇ ಈ ಯೋಜನೆಗೆ ಅರ್ಹರು. ಈ ಮೊತ್ತವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಆ ಮಕ್ಕಳ ಖಾತೆಗೆ ಜಮಾ ಮಾಡಬೇಕು. 2017ರ ಮಾರ್ಚ್‌ವರೆಗೆ ಮಾತ್ರ ಈ ಹಣ ಬಂದಿದೆ. 2017–18 ಮತ್ತು 2018–19ನೇ ಸಾಲಿನ ಪ್ರೋತ್ಸಾಹಧನಕ್ಕಾಗಿ ಕಾಯಲಾಗುತ್ತಿದೆ.

ಪ್ರತಿ ಜಿಲ್ಲೆಗೆ, ಅಲ್ಲಿನ ಮಕ್ಕಳ ರಕ್ಷಣಾ ಅಧಿಕಾರಿಗಳು ನೀಡಿದ ವರದಿಯ ಆಧಾರದಲ್ಲಿ ಗುರಿಯನ್ನು ನಿಗದಿ ಪಡಿಸಲಾಗಿದೆ. ಒಂದು ಮಗುವಿಗೆ 36 ತಿಂಗಳ ಪ್ರೋತ್ಸಾಹಧನ ನೀಡಿದ ಮೇಲೆ ಆ ಮಗುವಿನ ಬದಲು ಬೇರೆ ಅರ್ಹ ಮಗುವನ್ನು ಆಯ್ಕೆ ಮಾಡಲಾಗುತ್ತದೆ. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ.

ADVERTISEMENT

ಯಾರೆಲ್ಲ ಅರ್ಹರು ?:ಬಾಲಕರ ಅಥವಾ ಬಾಲಕಿಯರ ಬಾಲಮಂದಿರದಲ್ಲಿ ಇರುವ ಮಕ್ಕಳನ್ನು ಪೋಷಕರು ಕರೆದುಕೊಂಡು ಹೋಗಿ ಶಾಲೆಗೆ ಕಳುಹಿಸುತ್ತಾರೆ ಎಂದಾದರೆ ಅವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಯಾವುದೇ ಪ್ರಕರಣದಲ್ಲಿ ಹೆತ್ತವರಲ್ಲಿ ಒಬ್ಬರು ಜೈಲಿಗೆ ಹೋಗಿದ್ದರೆ, ಆ ಮನೆಯ ವಾರ್ಷಿಕ ಆದಾಯ ₹ 24 ಸಾವಿರಕ್ಕಿಂತ ಕಡಿಮೆ ಇದ್ದರೆ ಆ ಮಕ್ಕಳು ಈ ಯೋಜನೆಗೆ ಅರ್ಹರಾಗಿರುತ್ತಾರೆ.

ತಂದೆ, ತಾಯಿ ಯಾರೂ ಇಲ್ಲದ, ನಿರ್ಗತಿಕ ಮಕ್ಕಳನ್ನು ಮತ್ತು ಲೈಂಗಿಕ ಕಾರ್ಯಕರ್ತೆಯರ ಮಕ್ಕಳನ್ನು ಕೂಡ ಈ ಯೋಜನೆ ಒಳಗೊಂಡಿರುತ್ತದೆ. ಇದಲ್ಲದೆ ಒಡೆದ ಕುಟುಂಬದ ಏಕ ಪೋಷಕರ ಅಥವಾ ತಂದೆಯನ್ನು ಕಳೆದುಕೊಂಡಿರುವ ಮಕ್ಕಳೂ ಇದರ ವ್ಯಾಪ್ತಿಗೆ ಬರುತ್ತಾರೆ. ಈ ಎಲ್ಲ ಮಕ್ಕಳು ಶಾಲೆಗೆ ಹೋಗುತ್ತಿದ್ದು, ಶೇ 75ರಷ್ಟು ಹಾಜರಾತಿ ಹೊಂದಿರಬೇಕು.

ಪ್ರೋತ್ಸಾಹಧನ ಬಾರದೆ ಇರುವುದರಿಂದ 2017ರ ಏಪ್ರಿಲ್‌ನಿಂದ ಹೊಸ ಅರ್ಹ ಮಕ್ಕಳನ್ನು ಹುಡುಕಲು ಮಕ್ಕಳ ರಕ್ಷಣಾ ಘಟಕ ಮುಂದಾಗಿಲ್ಲ.

ಜೈಲಿನಲ್ಲಿರುವ ವ್ಯಕ್ತಿಗಳ ಮಕ್ಕಳ ಆಯ್ಕೆ ಹೇಗೆ?
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯು ಜೈಲು ಅಧಿಕಾರಿಗೆ ಪತ್ರ ಬರೆದು ಆಯಾ ಜಿಲ್ಲೆಯ ವ್ಯಕ್ತಿಗಳ ಮಾಹಿತಿ ಪಡೆಯುತ್ತಾರೆ. ಬಳಿಕ ಅವರ ಮನೆಗೆ ಭೇಟಿ ನೀಡಿ ಮನೆಯ ಪರಿಸ್ಥಿತಿಯನ್ನು ಪರಿಶೀಲಿಸುತ್ತಾರೆ. ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಈ ವಿಚಾರ ಚರ್ಚೆಯಾಗುತ್ತದೆ. ಅಲ್ಲಿಗೆ ಆ ಮಗುವನ್ನು ಕರೆಸಿ ಮಾತನಾಡಿಸಲಾಗುತ್ತದೆ. ಅರ್ಹ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಆಯ್ಕೆ ಮಾಡುತ್ತದೆ.

*
ಒಂದು ವರ್ಷದಿಂದ ಈ ಯೋಜನೆಗೆ ಅನುದಾನ ಬಂದಿರಲಿಲ್ಲ. ಇನ್ನೊಂದು ವಾರದಲ್ಲಿ ಮಕ್ಕಳ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಲಾಗುವುದು.
-ನರ್ಮದಾ ಆನಂದ್‌,
ಯೋಜನಾ ನಿರ್ದೇಶಕರು, ಐಸಿಪಿಎಸ್‌ ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.