ADVERTISEMENT

ಸುಗಮ ಕಲಾಪಕ್ಕೆ ಸಭಾಪತಿ ಹೊರಟ್ಟಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2023, 23:32 IST
Last Updated 22 ನವೆಂಬರ್ 2023, 23:32 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಬೆಂಗಳೂರು: ಬೆಳಗಾವಿಯಲ್ಲಿ ಡಿಸೆಂಬರ್‌ 4ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ಗದ್ದಲ, ಪ್ರತಿಭಟನೆಗಳನ್ನು ನಿಯಂತ್ರಿಸಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಕುರಿತ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಿಭಟನೆಯನ್ನು ತಡೆಯಲು ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುವಂತೆ ಉನ್ನತ ಶಿಕ್ಷಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಕಂದಾಯ ಹಾಗೂ ಕೃಷಿ ಸಚಿವರು ಮತ್ತು ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಒತ್ತಾಯಿಸಿದ್ದೇನೆ’ ಎಂದರು.

ಸರ್ಕಾರವು ಪ್ರತಿಭಟನಾಕಾರರಿಗೆ ಉತ್ತೇಜನ ನೀಡುವಂತೆ ವರ್ತಿಸಬಾರದು ಎಂದು ಕೋರಲಾಗಿದೆ. ಪ್ರತಿಭಟನೆ, ಧರಣಿ ನಡೆಯುತ್ತಿದ್ದರೆ ಸಚಿವರು ಮತ್ತು ಶಾಸಕರು ಸಕ್ರಿಯವಾಗಿ ಕಲಾಪದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

ADVERTISEMENT

2022 ರ ಡಿಸೆಂಬರ್‌ ತಿಂಗಳಲ್ಲಿ ಬೆಳಗಾವಿಯಲ್ಲಿ 10 ದಿನಗಳ ಕಾಲ ವಿಧಾನಮಂಡಲದ ಅಧಿವೇಶನ ನಡೆದಿತ್ತು. ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 102 ಸಂಘಟನೆಗಳು ಮನವಿ ಸಲ್ಲಿಸಿದ್ದವು. ಆ ಪೈಕಿ 64 ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸಿದ್ದವು. 65,000 ದಿಂದ 80,000 ದಷ್ಟು ಜನರು ಪ್ರತಿಭಟನೆಗಳನ್ನು ಭಾಗಿಯಾಗಿದ್ದರು ಎಂದು ವಿವರ ನೀಡಿದರು.

ಈ ಅಧಿವೇಶನದಲ್ಲಿ ಐದರಿಂದ ಆರು ದಿನಗಳನ್ನು ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಗೆ ಮೀಸಲಿಡಲಾಗುವುದು. ಮಂಡನೆಗೂ ಮೊದಲು ಮಸೂದೆಗಳ ಪ್ರತಿಗಳನ್ನು ಒದಗಿಸುವುದು ಕಡ್ಡಾಯ. ತರಾತುರಿಯಲ್ಲಿ ಮಸೂದೆ ಮಂಡನೆಗೆ ಅವಕಾಶ ನೀಡುವುದಿಲ್ಲ ಎಂದರು.

ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಾಣಕ್ಕೆ ಗುರುತಿಸಿರುವ 20 ಎಕರೆ ಜಮೀನಿನಲ್ಲಿ ತಾರಾ ಹೋಟೆಲ್‌ ನಿರ್ಮಾಣದ ಪ್ರಸ್ತಾವಕ್ಕೆ ಸರ್ಕಾರ ಒಪ್ಪಿಗೆ ನೀಡಬೇಕು. ಇದರಿಂದ ಆರ್ಥಿಕ ಹೊರೆ ತಗ್ಗುತ್ತದೆ ಎಂದು ಹೊರಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.