ADVERTISEMENT

ಸಿಎಎ, ಎನ್‌ಆರ್‌ಸಿ ಸಂಬಂಧ ಕಲ್ಪಿಸಿ ಭಯ ಸೃಷ್ಟಿಸುವ ವಿಪಕ್ಷಗಳು: ರಾಜನಾಥ್‌ ಸಿಂಗ್‌

ಜನಜಾಗೃತಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 5:39 IST
Last Updated 28 ಜನವರಿ 2020, 5:39 IST
   

ಮಂಗಳೂರು: ವಿರೋಧ ಪಕ್ಷಗಳು ವಿಪಕ್ಷ ಧರ್ಮ ಪಾಲನೆಯ ಜೊತೆಗೆ ರಾಷ್ಟ್ರ ಧರ್ಮವನ್ನೂ ಪಾಲನೆ ಮಾಡಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಆಗ್ರಹಿಸಿದರು.

ಇಲ್ಲಿನ ಬಂಗ್ರಕೂಳೂರು ಗೋಲ್ಡ್‌ ಫಿಂಚ್‌ ಸಿಟಿಯಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಕುರಿತ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ನೀವು ವಿಪಕ್ಷ ಧರ್ಮವನ್ನು ಪಾಲನೆ ಮಾಡಿ. ಆದರೆ, ವಿರೋಧ ಪಕ್ಷದಲ್ಲಿದ್ದೇವೆ ಎಂಬ ಕಾರಣಕ್ಕಾಗಿ ವಿಪಕ್ಷ ಧರ್ಮದ ಎದುರಿನಲ್ಲಿ ರಾಷ್ಟ್ರ ಧರ್ಮ ಪಾಲನೆಯನ್ನು ಕಡೆಗಣಿಸಬೇಡಿ’ ಎಂದರು.

‘ನೆರೆಯ ದೇಶಗಳಲ್ಲಿ ದೌರ್ಜನ್ಯಕ್ಕೆ ಒಳಗಾಗಿ ಆಶ್ರಯ ಕೋರಿ ಬರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ಕಾಯ್ದೆ ತರುವಂತೆ ಮಹಾತ್ಮಾ ಗಾಂಧಿಯವ‌ರೇ ಜವಾಹರಲಾಲ್‌ ನೆಹರೂ ಅವರಿಗೆ ಕಾಂಗ್ರೆಸ್‌ ಸಭೆಯಲ್ಲೇ ಸೂಚಿಸಿದ್ದರು. ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರೂ ರಾಜ್ಯಸಭೆಯಲ್ಲಿ ಇದೇ ಒತ್ತಾಯ ಮಾಡಿದ್ದರು. ಕಾಂಗ್ರೆಸ್‌ನ ಬೇಡಿಕೆಯಂತೆ ಸಿಎಎ ತಂದಿದ್ದೇವೆ. ತಪ್ಪು ಎಲ್ಲಿದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸಿಎಎ ಹೊಸ ಕಾಯ್ದೆ ಅಲ್ಲ. 1955ರಿಂದಲೂ ಜಾರಿಯಲ್ಲಿದ್ದ ಕಾಯ್ದೆಗೆ ಈಗ ತಿದ್ದುಪಡಿ ತರಲಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪ್ಘಾನಿಸ್ತಾನದಲ್ಲಿ ದೌರ್ಜನ್ಯಕ್ಕೊಳಗಾಗಿ ನಿರಾಶ್ರಿತರಾಗಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಅಂಶವನ್ನು ಮಾತ್ರ 2019ರ ತಿದ್ದುಪಡಿಯಲ್ಲಿ ಸೇರಿಸಲಾಗಿದೆ. ಇದರಿಂದ ಈ ದೇಶದ ಯಾವುದೇ ಪ್ರಜೆಯ ಪೌರತ್ವಕ್ಕೂಧಕ್ಕೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಅಸಾಂವಿಧಾನಿಕ ನಡೆ: ‘ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರುದ್ಧ ನಿರ್ಣಯ ಕೈಗೊಳ್ಳಲಾಗುತ್ತಿದೆ. ಇದು ಆ ರಾಜ್ಯ ಸರ್ಕಾರಗಳ ಅಸಾಂವಿಧಾನಿಕ ನಡೆ. ಸಿಎಎ ದೇಶದ ಸಂಸತ್ತು ರೂಪಿಸಿದ ಕಾಯ್ದೆ. ಎಲ್ಲ ರಾಜ್ಯಗಳೂ ಈ ಕಾಯ್ದೆಯನ್ನು ಜಾರಿಗೊಳಿಸಲೇಬೇಕು. ಜಾರಿಗೊಳಿಸದಿದ್ದರೆ ದೊಡ್ಡ ಪ್ರಮಾದವಾಗುತ್ತದೆ’ ಎಂದರು.

ಚರ್ಚೆಯೇ ಆಗಿಲ್ಲ:ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ಸಿಎಎ ನಡುವೆ ಸಂಬಂಧವೇ ಇಲ್ಲ. ದೇಶದಾದ್ಯಂತ ಎನ್‌ಆರ್‌ಸಿ ಜಾರಿ ಮಾಡುವ ಕುರಿತು ಚರ್ಚೆಯೇ ಆಗಿಲ್ಲ. ಆದರೂ, ವಿರೋಧ ಪಕ್ಷಗಳು ಎರಡರ ನಡುವೆ ಸಂಬಂಧ ಕಲ್ಪಿಸಿ ಜನರಲ್ಲಿ ಭಯ ಸೃಷ್ಟಿಸುತ್ತಿವೆ. ಮನೆ, ಮನೆಗೂ ತೆರಳಿ ಸತ್ಯ ಹೇಳುವ ಮೂಲಕ ಗೊಂದಲಕ್ಕೆ ತೆರೆ ಎಳೆಯಿರಿ ಎಂದು ಬಿಜೆಪಿ ಕಾರ್ಯಕರ್ತರಿಗೆ ರಾಜನಾಥ್‌ ಸಿಂಗ್‌ ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.