ADVERTISEMENT

‘ವಿಷ್ಣು–ಈಶ್ವರ ಎರಡೂ ನನ್ನತ್ರನೇ ಇರೋದು’: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 16:13 IST
Last Updated 12 ಆಗಸ್ಟ್ 2025, 16:13 IST
   

ಬೆಂಗಳೂರು: ‘ವಿಷ್ಣು–ಈಶ್ವರ ಎರಡೂ ನನ್ನತ್ರನೇ ಇರೋದು’.

ಹೀಗೆಂದವರು ಮುಖ್ಯಮಂತ್ರಿ ಸಿದ್ದರಾಮಯ್ಯ. ಭೋಜನ ವಿರಾಮದ ನಂತರ ವಿಧಾನಸಭೆ ಕಲಾಪ ಆರಂಭವಾದಾಗ ಯಾವುದೇ ಸಚಿವರು ಹಾಜರಿರದ ಬಗ್ಗೆ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಇದು ತಿಳಿ ಹಾಸ್ಯ ಮತ್ತು ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.

ಬಿಜೆಪಿ ಶಾಸಕರ ಆಕ್ಷೇಪ ಆರಂಭವಾಗುತ್ತಿದ್ದಂತೆ ಗೃಹ ಸಚಿವ ಜಿ.ಪರಮೇಶ್ವರ ಸದನದೊಳಗೆ ಬಂದರು. ಆಗ ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ‘ಪರಮೇಶ್ವರ ಬಂದ್ರು ಚಾಲೂ ಮಾಡ್ರಿ’ ಎಂದು ಹೇಳಿದರು.

ADVERTISEMENT

ಆದರೂ ಬಿಜೆಪಿ ಶಾಸಕರ ಗೊಣಗಾಟ ನಿಲ್ಲಲಿಲ್ಲ. ಆಗ ಪರಮೇಶ್ವರ ಅವರು, ‘ವಿರೋಧ ಪಕ್ಷದ ನಾಯಕರು ಬೆಳಿಗ್ಗೆಯಿಂದಲೂ ಚೆನ್ನಾಗಿ ಮಾತನಾಡುತ್ತಿದ್ದಾರೆ. ಮುಂದುವರೆಸಲಿ’ ಎಂದರು.

ಅವರಿಗೆ ಜತೆಯಾದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಇಲ್ಲಿ ಪರಮ ಈಶ್ವರನೇ ಇರುವಾಗ ಇನ್ನು ಬೇರೆ ಯಾರು ಬೇಕು ಹೇಳಿ’ ಎಂದರು.

‘ಕೃಷ್ಣನೂ ಇದ್ದಾರಲ್ಲ’ ಎಂದು ಬಿಜೆಪಿಯ ಎಸ್‌.ಸುರೇಶ್‌ಕುಮಾರ್ ಸೇರಿಸಿದರು. ‘ಹೆಸರಿಗಷ್ಟೇ ಕೃಷ್ಣ’ ಎಂದರು ಕೃಷ್ಣ ಬೈರೇಗೌಡ.

‘ಈಶ್ವರ, ಕೃಷ್ಣ, ರಾಮ ಮೂರೂ ಜನ ಇದ್ದಾರೆ. ಇನ್ನು ನಿಲ್ಸಂಗಿಲ್ಲ’ ಎಂದು ಅಶೋಕ ಹೇಳಿದಾಗ, ‘ಮತ್ಯಾಕೆ ಶುರು ಮಾಡಿ’ ಎಂದು ಕೃಷ್ಣ ಬೈರೇಗೌಡ ಉತ್ತೇಜಿಸಿದರು.

ಆಗ ಸಿದ್ದರಾಮಯ್ಯ ಅವರು, ‘ವಿಷ್ಣು–ಈಶ್ವರ ಎರಡೂ ನನ್ನತ್ರನೇ ಇರೋದು’ ಎಂದರು.

‘ರಾಮ ಅಂದ್ರೆ ಗೊತ್ತು ಸಿದ್ದ ಅಂದ್ರೆ ಯಾರು’ ಎಂದು ಅಶೋಕ ನಗುತ್ತಲೇ ಪ್ರಶ್ನಿಸಿದರು. ‘ಸಿದ್ದ ಅಂದ್ರೆ ಈಶ್ವರ, ರಾಮ ಅಂದ್ರೆ ವಿಷ್ಣು’ ಎಂದು ಸಿದ್ದರಾಮಯ್ಯ ಬಿಡಿಸಿ ಹೇಳಿದರು.

‘ಪರಮೇಶ್ವರ ಅಂದ್ರೆ’ ಎಂದು ಅರವಿಂದ ಬೆಲ್ಲದ ಪ್ರಶ್ನಿಸಿದಾಗ, ‘ಪರಮೇಶ್ವರ ಅಂದ್ರೆ ಸವರ್ಣದೀರ್ಘ ಸಂಧಿ’ ಎಂದು ಸಿದ್ದರಾಮಯ್ಯ ವಿವರಿಸಿದರು. 

‘ಇದನ್ನು ಅರ್ಥ ಮಾಡಿಕೊಳ್ಳೊರು ಇಲ್ಲಿ ಎಷ್ಟು ಜನ ಇದ್ದಾರೆ’ ಎಂದು ಕೃಷ್ಣ ಬೈರೇಗೌಡ ಪ್ರಶ್ನಿಸಿದರು.

‘ನಮಗೆ ಸಂಧಿ–ಸಮಾಸ ಸಹವಾಸವೇ ಬೇಡ’ ಎಂದು ಅಶೋಕ ಹೇಳಿದಾಗ ಎಲ್ಲರೂ ಗೊಳ್ಳೆಂದು ನಕ್ಕರು.

ಆಗ ವಿಷಯವನ್ನು ಬೇರೆಡೆ ಸೆಳೆದ ಬಿಜೆಪಿಯ ಸತೀಶ್ ರೆಡ್ಡಿ, ‘ರಾಜಣ್ಣ ರಾಜೀನಾಮೆಯಿಂದ ಮುಖ್ಯಮಂತ್ರಿ ಬೇಸರ ಗೊಂಡಿದ್ದಾರೆ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನನಗೆ ಯಾವಾಗಲೂ ಬೇಸರ ಆಗೋದಿಲ್ಲ. ನಾನು ಚೆನ್ನಾಗಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.