ADVERTISEMENT

ಬುತ್ತಿ ಸಮೇತ ಸುವರ್ಣಸೌಧಕ್ಕೆ ಮುತ್ತಿಗೆ -ಬಸವಜಯ ಮೃತ್ಯುಂಜಯ ಸ್ವಾಮೀಜಿ

ಕನಿಷ್ಠ 20 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ: ಕೂಡಲಸಂಗಮ ಶ್ರೀ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2022, 22:15 IST
Last Updated 21 ಡಿಸೆಂಬರ್ 2022, 22:15 IST
ಬೈಲಹೊಂಗಲದಿಂದ ಪಾದಯಾತ್ರೆ ಆರಂಭಿಸಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪಾದಯಾತ್ರೆ ವೇಳೆ ಭಕ್ತರು ನೀಡಿದ ಎಳನೀರು ಕುಡಿದು ದಣಿವು ಆರಿಸಿಕೊಂಡರು
ಬೈಲಹೊಂಗಲದಿಂದ ಪಾದಯಾತ್ರೆ ಆರಂಭಿಸಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪಾದಯಾತ್ರೆ ವೇಳೆ ಭಕ್ತರು ನೀಡಿದ ಎಳನೀರು ಕುಡಿದು ದಣಿವು ಆರಿಸಿಕೊಂಡರು   

ಬೆಳಗಾವಿ: ‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಡಿ. 22 ರಂದು ಬೃಹತ್‌ ಸಮಾವೇಶ ನಡೆಯುವುದು ಶತಃಸಿದ್ಧ. ಸುವರ್ಣಸೌಧದ ಬಳಿ ನಡೆಯುವ ಸಮಾವೇಶಕ್ಕೆ ನಮ್ಮ ಜನ ಬುತ್ತಿ ಕಟ್ಟಿಕೊಂಡು ಬರುತ್ತಾರೆ. ಜಾಗ ಬಿಟ್ಟು ಕದಲುವುದಿಲ್ಲ. ಮೀಸಲಾತಿ ಪಡೆದೇ ಮನೆಗೆ ಮರಳುವೆವು’ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಗುರುವಾರ ಬೆಳಿಗ್ಗೆ 11ಕ್ಕೆ ಸಮಾವೇಶ ಆರಂಭವಾಗುತ್ತದೆ. ಮೀಸಲಾತಿ ಘೋಷಿಸಿದರೆ ಮುಖ್ಯಮಂತ್ರಿ ಅವರನ್ನು ಕರೆದು ಕಲ್ಲುಸಕ್ಕರೆ ತುಲಾಭಾರ ಮಾಡಿ, ಸಿಹಿ ತಿನ್ನಿಸುತ್ತೇವೆ. ಇಲ್ಲದಿದ್ದರೆ ಬಂಡಾಯದ ಧ್ವಜ ಎತ್ತುತ್ತೇವೆ, ಸಂಜೆಯವರೆಗೆ ಕಾಯ್ದು ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ’ ಎಂದರು.

‘ಸೌಧದ ಬಳಿ 100 ಎಕರೆಯಷ್ಟು ವಿಶಾಲ ಜಾಗ ಸಿದ್ಧಮಾಡಿದ್ದೇವೆ.ಹರಿಹರದ ಮಾಜಿ ಶಾಸಕ ಶಿವಶಂಕರ ಅವರು 1,000 ಕ್ವಿಂಟಲ್‌ ಅಕ್ಕಿ ತರಿಸಿದ್ದಾರೆ. ಸಿ.ಸಿ. ಪಾಟೀಲ ಅವರು ಪದಾರ್ಥ ತರಿಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಕೆ.ಪಾಟೀಲ ಎಲ್ಲರೂ ಸಿದ್ಧತೆ ಮಾಡಿದ್ದಾರೆ. ಸಮಾಜದ ಜನರು ಹಿಂಜರಿಯದೇ ಬನ್ನಿ’ ಎಂದು ಕರೆ ನೀಡಿದರು.

‘ಕನಿಷ್ಠ 20 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ವೇದಿಕೆಗೆ ರಾಣಿ ಚನ್ನಮ್ಮನ ಹೆಸರು, ಮಹಾದ್ವಾರಕ್ಕೆ ಬೆಳವಡಿ ಮಲ್ಲಮ್ಮನ ಹೆಸರು, ಪ್ರದೇಶಕ್ಕೆ ರಾವ್‌ ಬಹಾದ್ದೂರ ಅರಟಾಳ ರುದ್ರಗೌಡರ ಹೆಸರು ಇಡಲಾಗಿದೆ. ಲಿಂಗಾಯತ ಪಂಚಮಸಾಲಿ ಸಮಾಜದ ಐದೂ ಪಂಗಡಗಳ ಜನ ಸೇರುವ ಕಾರಣ ‘ವಿರಾಟ ಪಂಚಶಕ್ತಿ ಸಮಾವೇಶ’ ಎಂದು ಕರೆಯಲಾಗಿದೆ’ ಎಂದರು.

ADVERTISEMENT

‘ಸಮಾವೇಶ ವಿಫಲಗೊಳಿಸುವ ಉದ್ದೇಶದಿಂದ ಆಯಾ ಜಿಲ್ಲೆಗಳ ಗಡಿಯಲ್ಲೇ ಜನರನ್ನು ತಡೆಯಲು ಚೆಕ್‌‍ಪೋಸ್ಟ್‌ ಹಾಕಲಾಗುತ್ತಿದೆ ಎಂಬ ಮಾಹಿತಿ ಬಂದಿದೆ. ನಾವು ಶಾಂತ ರೀತಿಯ ಹೋರಾಟ ಮಾಡುವವರು. ಯಾರನ್ನೂ ತಡೆಯಕೂಡದು’ ಎಂದು ಅವರು ಆಗ್ರಹಿಸಿದರು.

ವರದಿ ಬಂದ ನಂತರವೇ ಕ್ರಮ’

ಬೆಂಗಳೂರು: ‘ಹಿಂದುಳಿದ ವರ್ಗಗಳ ಆಯೋಗವು ವರದಿ ನೀಡಿದ ನಂತರವೇ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ಪಂಚಮಸಾಲಿ ಸಮುದಾಯದವರು ನಮ್ಮವರೇ. ಅವರು ಬೇರೆ ಅಲ್ಲ’ ಎಂದೂ ಅವರು ಹೇಳಿದರು.

ಮೀಸಲಾತಿ ಅಧ್ಯಯನ ವರದಿ ಪೂರ್ಣವಾಗಿಲ್ಲ: ಜಯಪ್ರಕಾಶ್ ಹೆಗ್ಡೆ

ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರ ಜತೆ ಅವರು, ‘ಸದಸ್ಯರೊಬ್ಬರ ಆರೋಗ್ಯ ಸಮಸ್ಯೆಯ ಕಾರಣ ಮಧ್ಯಂತರ ವರದಿಯ ಬಗ್ಗೆ ಚರ್ಚಿಸಲು ಬುಧವಾರ ಕರೆಯಲಾಗಿದ್ದ ಸಭೆ ಮುಂದೂಡಲಾಗಿದೆ. ಸರ್ಕಾರ ಕೇಳಿದರೆ ಇದುವರೆಗಿನ ಅಧ್ಯಯನದ ವಿವರ ನೀಡಲಾಗುವುದು.ಅಂತಿಮ ವರದಿ ಸಿದ್ಧಪಡಿಸಲು ಇನ್ನಷ್ಟು ಸಮಯ ಬೇಕಿದೆ.ಪೂರ್ಣ ವರದಿ ಯಾವಾಗ ಕೊಡಬಹುದು ಎಂಬ ಮಾಹಿತಿ ಖಚಿತಪಡಿಸಲು ಸಾಧ್ಯವಿಲ್ಲ. ಸಾಕಷ್ಟು ಸಮಯ ಬೇಕಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ಮೀಸಲಾತಿ ಬಗ್ಗೆ ಸರ್ಕಾರ ಅಧಿವೇಶನದಲ್ಲಿ ಉತ್ತರಿಸಲಿದೆ. ಸರ್ಕಾರದ ಪರವಾಗಿ ಆಯೋಗ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಸರ್ಕಾರಕ್ಕೆ ಮಾಹಿತಿ, ವರದಿ ನೀಡುವುದು ಆಯೋಗದ ಕೆಲಸ ಅಷ್ಟೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.