ADVERTISEMENT

ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಸಿ.ಎಂ ನಿಲುವು ಬಹಿರಂಗಪಡಿಸಲಿ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 13:48 IST
Last Updated 6 ಅಕ್ಟೋಬರ್ 2025, 13:48 IST
ವಿಜಯೇಂದ್ರ
ವಿಜಯೇಂದ್ರ   

ಬೆಂಗಳೂರು: ‘ವೀರಶೈವ–ಲಿಂಗಾಯತ ಅಥವಾ ಲಿಂಗಾಯತ ಧರ್ಮದ ಕೂಗಿಗೆ ಮತ್ತೆ ಚಾಲನೆ ನೀಡಿದ್ದಾರೆ. ಅದರ ಹಿಂದೆ ಇದ್ದು ಮಾತನಾಡುವವರು ಯಾರೆಂಬ ಅರಿವು ಸಮಾಜಕ್ಕೆ ಇದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಎಲ್ಲ ಸಮಾಜ, ಧರ್ಮಗಳನ್ನು ರಕ್ಷಿಸುವ ಆದ್ಯ ಕರ್ತವ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇರಬೇಕು. ಆದರೆ, ಅವರ ಅಂತರಂಗದಲ್ಲಿ ಏನಿದೆ ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು.

‘ಮೆಟ್ರೊಗೆ ಬಸವಣ್ಣ ಅವರ ಹೆಸರು ಇಡುವುದನ್ನು ಸ್ವಾಗತಿಸುತ್ತೇನೆ. ಆದರೆ, ಅವರು ಬಹಿರಂಗವಾಗಿ ಹೇಳುವುದು ಬೇರೆ; ಮುಖ್ಯಮಂತ್ರಿಯವರ ಅಂತರಂಗದ ಅಪೇಕ್ಷೆ ಏನು’ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅವರು ಹೇಳಿದರು.

ADVERTISEMENT

‘ನಾವು ಹಿಂದೂ ಧರ್ಮವನ್ನು ರಕ್ಷಿಸಬೇಕಿದೆ. ಧರ್ಮ ಒಡೆಯುವ ದುಸ್ಸಾಹಸವನ್ನೂ ಗಮನಿಸಬೇಕಿದೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಸಮಾಜ, ಒಕ್ಕಲಿಗ, ವೀರಶೈವ–ಲಿಂಗಾಯತ ಸಮಾಜ ಹೀಗೆ ಎಲ್ಲ ಸಮಾಜಗಳಲ್ಲಿಯೂ ಆರ್ಥಿಕ–ಸಾಮಾಜಿಕ–ಶೈಕ್ಷಣಿಕವಾಗಿ ಹಿಂದುಳಿದವರು ಇದ್ದಾರೆ. ಎಲ್ಲ ಸಮಾಜಕ್ಕೂ ನ್ಯಾಯ ಕೊಡುವ ಕೆಲಸ ಆಗಬೇಕಾಗಿದೆ. ಸಿದ್ದರಾಮಯ್ಯನವರಿಗೆ ಆತುರ ಏಕೆ’ ಎಂದು ಪ್ರಶ್ನಿಸಿದರು.

‘ಕೆಲವು ಶಕ್ತಿಗಳು ಸಮಾಜ ಒಡೆಯುವ ಕೆಲಸಕ್ಕೆ ಕೈಹಾಕಿವೆ. ಹಿಂದೂ ಧರ್ಮವನ್ನು ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಹಿಂದೆಯೂ ಇಂಥ ಷಡ್ಯಂತ್ರ ನಡೆದಿತ್ತು. ಅದರಲ್ಲಿ ಯಶಸ್ಸು ಸಿಕ್ಕಿರಲಿಲ್ಲ. ಮುಂದೆಯೂ ಸಿಗಲು ಸಾಧ್ಯವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.