ADVERTISEMENT

ಮದ್ಯ ಮಾರಾಟ | ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಬೇಡಿಕೆ: ₹231 ಕೋಟಿ ವಹಿವಾಟು

​ಪ್ರಜಾವಾಣಿ ವಾರ್ತೆ
Published 7 ಮೇ 2020, 2:02 IST
Last Updated 7 ಮೇ 2020, 2:02 IST
   

ಬೆಂಗಳೂರು: ಭಾರತೀಯ ತಯಾರಿಕಾ ಮದ್ಯಕ್ಕೆ (ಐಎಂಎಲ್) ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಪ್ರತಿ ದಿನ ದಾಖಲೆ ವಹಿವಾಟು ನಡೆಯುತ್ತಿದೆ. ಬುಧವಾರ ಒಟ್ಟು ₹ 231.6 ಕೋಟಿ ಮೊತ್ತದ ವಹಿವಾಟು ನಡೆದಿದೆ.

39 ಲಕ್ಷ ಲೀಟರ್‌ ಐಎಂಎಲ್ (₹216 ಕೋಟಿ)‌ ಹಾಗೂ 7 ಲಕ್ಷ ಲೀಟರ್‌ ಬಿಯರ್‌ (₹15.6 ಕೋಟಿ)‌ ಮಾರಾಟವಾಗಿದೆ. ಬಿಯರ್‌ ಮಾರಾಟ ಒಂದೇ ರೀತಿಯಲ್ಲಿದ್ದು, ಯಾವುದೇ ಏರಿಕೆ ಆಗಿಲ್ಲ.

42 ದಿನದ ಲಾಕ್‌ಡೌನ್‌ ಬಳಿಕ ಸೋಮವಾರದಿಂದ ಮದ್ಯದ ಅಂಗಡಿಗಳು ಮತ್ತೆ ತೆರೆದಿವೆ. ಮೊದಲ ದಿನ ₹45 ಕೋಟಿ ವಹಿವಾಟು ನಡೆದಿತ್ತು. ಸ್ಟಾಕ್‌ ಇಲ್ಲದಿದ್ದರಿಂದ ಬಹಳಷ್ಟು ಅಂಗಡಿಗಳು ಮಧ್ಯಾಹ್ನದ ಒಳಗೆ ಬಾಗಿಲು ಮುಚ್ಚಿದವು. ಮಂಗಳವಾರ ₹197 ಕೋಟಿ ವ್ಯಾಪಾರ ಆಗಿತ್ತು.

ADVERTISEMENT

ದುಬಾರಿ ಬೆಲೆಯ ದೇಶಿ ಹಾಗೂ ವಿದೇಶಿ ಬ್ರ್ಯಾಂಡ್‌ ಮದ್ಯಗಳು ಸರಬರಾಜು ಆಗಬೇಕಿದ್ದು, ಎರಡು ಅಥವಾ ಮೂರು ದಿನಗಳಲ್ಲಿ ಅಂಗಡಿಗಳ ಷೋಕೇಸ್‌ ಅಲಂಕರಿಸಲಿವೆ. ಆನಂತರ ವಹಿವಾಟು ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.

ಕೋವಿಡ್‌ಗೆ ಮೊದಲು ಸರಾಸರಿ 1.75 ಲಕ್ಷ ಕಾರ್ಟನ್‌ ಐಎಂಎಲ್‌ ಹಾಗೂ 80 ಸಾವಿರ ಕೇಸ್‌ ಬಿಯರ್‌ ವ್ಯಾಪಾರವಾಗುತಿತ್ತು ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.