ADVERTISEMENT

ಎಲ್‌ಕೆಜಿ ಪ್ರವೇಶ ನಿರಾಕರಣೆ: ಹಕ್ಕಿನ ಉಲ್ಲಂಘನೆ ಅಲ್ಲ; ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 16:00 IST
Last Updated 14 ಆಗಸ್ಟ್ 2025, 16:00 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಖಾಸಗಿ ಅನುದಾನರಹಿತ ಶಾಲೆಯಲ್ಲಿ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ ಮಾಡಿದರೆ ಅದು ಸಂವಿಧಾನದ 21ನೇ (ಜೀವಿಸುವ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕು) ವಿಧಿಯ ಉಲ್ಲಂಘನೆ ಆಗುವುದಿಲ್ಲ’ ಎಂದು ಹೈಕೋರ್ಟ್‌ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ.

‘ನನ್ನ ಮಗನಿಗೆ ಎಲ್‌ಕೆಜಿ ಪ್ರವೇಶಾತಿ ನಿರಾಕರಿಸಲಾಗಿದೆ’ ಎಂದು ಆಕ್ಷೇಪಿಸಿ ಬೆಳಗಾವಿ ಕ್ಯಾಂಪ್‌ ಪ್ರದೇಶದ ‘ಸೆಂಟ್‌ ಪಾಲ್ಸ್‌ ಹೈಸ್ಕೂಲ್‌’ ಆಡಳಿತ ಮಂಡಳಿಯ ಕ್ರಮವನ್ನು ಪ್ರಶ್ನಿಸಿ ಬೆಳಗಾವಿಯ ಶ್ರೀನಗರ ನಿವಾಸಿ ಮುಜಮ್ಮಿಲ್‌ ಖಾಜಿ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಈ ಕುರಿತಂತೆ ಆದೇಶಿಸಿದೆ.

ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಪೀಠ ‘ಅರ್ಜಿದಾರರ ಮಗುವಿಗೆ ಪ್ರವೇಶ ನಿರಾಕರಿಸಿರುವುದು ಸಂವಿಧಾನ ಉಲ್ಲಂಘನೆ ಆಗದು. ಮಗುವನ್ನು ಶಾಲೆಗೆ ಸೇರಿಸಿಕೊಂಡರೆ ಮಾತ್ರ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಹಕ್ಕುಗಳನ್ನು ಸಂರಕ್ಷಿಸಲಾಗುತ್ತದೆ ಎಂಬುದು ನಿಜವಲ್ಲ. ಅರ್ಜಿದಾರರು ಬೇರೆ ಶಾಲೆಗೆ ಅರ್ಜಿ ಸಲ್ಲಿಸಿ ಪ್ರವೇಶ ಪಡೆದುಕೊಳ್ಳಬಹುದು’ ಎಂದು ಸೂಚಿಸಿದೆ.

ADVERTISEMENT

ಪ್ರಕರಣವೇನು?: ತಮ್ಮ ಮಗನನ್ನು ಎಲ್‌ಕೆಜಿಗೆ ಸೇರಿಸಲು ಅರ್ಜಿದಾರರು ಶಾಲೆಗೆ ಅರ್ಜಿ ಸಲ್ಲಿಸಿದ್ದರು. ‘ಮಗು ಆಯ್ಕೆಯಾಗಿದೆ. ಬಂದು ಪ್ರಾಂಶುಪಾಲರ ಜತೆ ಮಾತನಾಡಿ ಸೀಟು ಖಾತ್ರಿಪಡಿಸಿಕೊಳ್ಳಬೇಕು’ ಎಂದು ಶಾಲೆಯ ವತಿಯಿಂದ ಪೋಷಕರಿಗೆ 2025ರ ಫೆಬ್ರುವರಿ 28ರಂದು ಸಂದೇಶ ರವಾನಿಸಲಾಗಿತ್ತು. ಆದರೆ ನಂತರದಲ್ಲಿ ‘ನಿಮ್ಮ ಅರ್ಜಿ ಪರಿಶೀಲನೆಗೆ ಬಾಕಿ ಇದೆ’ ಎಂದು ತಿಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.