ADVERTISEMENT

ಬೇರೆ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳಿಗೆ ಸಾಲ: ಆಕ್ಷೇಪ

ಡಿಸಿಸಿ ಬ್ಯಾಂಕ್‌ಗಳಿಗೆ ಸಚಿವ ಸೋಮಶೇಖರ್ ತಾಕೀತು

​ಪ್ರಜಾವಾಣಿ ವಾರ್ತೆ
Published 21 ಮೇ 2020, 5:50 IST
Last Updated 21 ಮೇ 2020, 5:50 IST
ಎಸ್‌.ಟಿ. ಸೋಮಶೇಖರ್
ಎಸ್‌.ಟಿ. ಸೋಮಶೇಖರ್   

ಬೆಂಗಳೂರು: ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್‌ಗಳು ಬೇರೆ ಬೇರೆ ಜಿಲ್ಲೆಗಳಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡುತ್ತಿ
ರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್, ಆದ್ಯತೆ ಮೇರೆಗೆ ರೈತರಿಗೆ ಸಾಲ ನೀಡಬೇಕು ಎಂದು ತಾಕೀತು ಮಾಡಿದ್ದಾರೆ.

ಸಹಕಾರ ಇಲಾಖೆಯಬೆಂಗಳೂರು ವಿಭಾಗದ ಪ್ರಗತಿಪರಿಶೀಲನಾ ಸಭೆಯಲ್ಲಿ ಸಚಿವರು ಸಕ್ಕರೆ ಕಾರ್ಖಾನೆಗಳಿಗೆ
ಸಾಲ ನೀಡುವ ವೈಖರಿಯ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಸಕ್ಕರೆ ಕಾರ್ಖಾನೆಗಳಿಗೆ ಬೇರೆ ಜಿಲ್ಲೆಗಳ ಡಿಸಿಸಿ ಬ್ಯಾಂಕ್‌ಗಳು ಯಾವ ಆಧಾರದಲ್ಲಿ ಸಾಲ ನೀಡುತ್ತಿವೆ? ಈವರೆಗೆ ಎಷ್ಟು ಸಕ್ಕರೆ ಕಾರ್ಖಾನೆಗಳಿಗೆ ಸಾಲ ಕೊಟ್ಟಿವೆ? ಸಕ್ಕರೆ ಕಾರ್ಖಾನೆ ಪಡೆದಿರುವ ಸಾಲ ಮರುಪಾವತಿ ಮಾಡಿವೆಯೇ? ಒಂದು ರೂಪಾಯಿ ಸಾಲ ಮರು ಪಾವತಿ ಮಾಡದ ಕಾರ್ಖಾನೆಗಳು ಎಷ್ಟು ಇವೆ ಎಂಬ ಮಾಹಿತಿ ನೀಡಿ. ಇನ್ನು ಮುಂದೆ ಈ ಪ್ರವೃತ್ತಿಗೆ ಕಡಿವಾಣ ಹಾಕಬೇಕು’ ಎಂದು ಸೋಮಶೇಖರ್‌ ಕಟ್ಟುನಿಟ್ಟಾಗಿ ಸೂಚಿಸಿದರು.

ADVERTISEMENT

ಬೇರೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಸಾಲ ಕೊಡುವುದಕ್ಕಿಂತ ಹೆಚ್ಚಿನ ಸಂಖ್ಯೆಯ ರೈತರಿಗೆ ಸಾಲ ನೀಡಬೇಕು. ಅಲ್ಪಾವಧಿ ಸಾಲವನ್ನು ಹೊಸಫಲಾನುಭವಿಗಳಿಗೆ ನೀಡಬೇಕು. ಸಾಲ ವಿತರಣೆಯಲ್ಲಿ ಯಾವುದೇ ತೊಂದರೆ ಆಗಬಾರದು ಎಂದು ಅವರು ಹೇಳಿದರು.

ನಬಾರ್ಡ್‌ನಿಂದ ಹೆಚ್ಚುವರಿ ಅನುದಾನ: ನಬಾರ್ಡ್‌ ಈ ಬಾರಿ ₹1,750 ಕೋಟಿ ಹೆಚ್ಚುವರಿ ಅನುದಾನ ನೀಡಿದೆ. ಈ ಹಿನ್ನೆಲೆಯಲ್ಲಿ ಈ ವರ್ಷ ₹14,500 ಕೋಟಿ ಸಾಲ ವಿತರಣೆ ಗುರಿ ಹಾಕಿಕೊಳ್ಳಲಾಗಿದೆ. ಈ ಗುರಿ ಮುಟ್ಟಲು ಶ್ರಮಿಸಬೇಕು ಎಂದೂ ಅವರು ಹೇಳಿದರು.

ಹಳೆಯ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳನ್ನು ಡಿಆ್ಯಕ್ಟಿವೇಟ್‌ ಆಗಿದ್ದು, ಅವುಗಳನ್ನು ಮತ್ತೆ ಆ್ಯಕ್ಟಿವೇಟ್‌ ಮಾಡಬೇಕು. ಈ ಸಮಸ್ಯೆಯಿಂದ ರೈತರಿಗೆ ಸಿಗುತ್ತಿರುವ ಸಹಾಯಧನಗಳು ತಲುಪುತ್ತಿಲ್ಲ. ಕಾರ್ಡ್‌ ಹೊಂದಿದ್ದ ರೈತ ಮೃತಪಟ್ಟರೆ ಕಾರ್ಡ್‌ಗಳು ನಿಷ್ಕ್ರಿಯ
ವಾಗುತ್ತವೆ. ಅಂತಹ ಸಂದರ್ಭದಲ್ಲಿ ಕ್ಷೇತ್ರ ಮೇಲುಸ್ತುವಾರಿ ನೋಡಿಕೊಳ್ಳುವವರು ಖಾತೆ ಬದಲಾವಣೆ ಮಾಡಿಸಿ ಸಹಾಯ ಮಾಡಬೇಕು ಎಂದೂ ಸೋಮಶೇಖರ್‌ ಸೂಚನೆ ನೀಡಿದರು.

₹916 ಕೋಟಿ ಸಾಲ ವಿತರಣೆ

‘ಮುಂಗಾರು ಆರಂಭ ಆಗುವುದರೊಳಗೆ ರೈತರಿಗೆ ಸಾಲ ನೀಡಬೇಕು ಎಂಬ ಉದ್ದೇಶದಿಂದ ಸಾಲ ವಿತರಣೆ ಕಾರ್ಯ ಆರಂಭಿಸಿದ್ದು, ಈಗಾಗಲೇ 1,35,977 ರೈತರಿಗೆ ₹ 916 ಕೋಟಿ ರೂಪಾಯಿ ಸಾಲ ವಿತರಿಸಲಾಗಿದೆ’ ಎಂದು ಸೋಮಶೇಖರ್‌ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಕಳೆದ ವರ್ಷ ಮುಂಗಾರು ಆರಂಭಕ್ಕೆ ಮುನ್ನ 94,241 ರೈತರಿಗೆ ₹712 ಕೋಟಿ ಸಾಲ ನೀಡಲಾಗಿತ್ತು. ರೈತರಿಗೆ ಬೆಳೆ ಸಾಲ ಒಟ್ಟು ₹13,000 ಕೋಟಿ ನೀಡಲಾಗಿತ್ತು. ಈ ವರ್ಷ ಸುಮಾರು ₹14,500 ಕೋಟಿ ಸಾಲ ವಿತರಿಸಲಾಗುವುದು ಎಂದು ತಿಳಿಸಿದರು.

ಅಲ್ಪಾವಧಿ ಬೆಳೆ ಸಾಲ ಪಡೆದವರಲ್ಲಿ ಶೇ94 ರಷ್ಟು ರೈತರು ಮರುಪಾವತಿ ಮಾಡಿದ್ದಾರೆ. ಉಳಿದವರು ಮೇ 31 ರೊಳಗೆ ಪಾವತಿಸಿದರೆ ಕೇಂದ್ರ ಸರ್ಕಾರದಿಂದ ಶೇ 2 ರ ವರೆಗೆ ಸಹಾಯಧನ ವಾಪಸ್ ಬರಲಿದೆ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.