ADVERTISEMENT

ರಾಜ್ಯದ ಸಾಲ ಸೌಲಭ್ಯ ಮೊತ್ತ ₹ 12,400 ಕೋಟಿಗೆ ಹೆಚ್ಚಳ: ಸಚಿವ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 19:39 IST
Last Updated 5 ಅಕ್ಟೋಬರ್ 2020, 19:39 IST

ಬೆಂಗಳೂರು: ‘ಸಾಲದ ಮೊತ್ತ ಲೆಕ್ಕಾಚಾರ ಮಾಡುವಾಗ ವೃದ್ಧಿ ದರ ಶೇ 7ಕ್ಕೆ ಇಳಿಸಲು ಕೇಂದ್ರ ಸರ್ಕಾರ ಒಪ್ಪಿರುವುದರಿಂದ ವಿಶೇಷ ಗವಾಕ್ಷಿ ಮೂಲಕ ರಾಜ್ಯಕ್ಕೆ ಸಾಲ ಸೌಲಭ್ಯ ಮೊತ್ತ ₹ 11,324 ಕೋಟಿಯಿಂದ ₹ 12,400 ಕೋಟಿಗೆ ಹೆಚ್ಚಳವಾಗಲಿದೆ’ ಎಂದು ಜಿಎಸ್‌ಟಿ ಪರಿಷತ್ತಿನ 42ನೇ ಸಭೆಯಲ್ಲಿ ಭಾಗವಹಿಸಿದ ರಾಜ್ಯದ ಪ್ರತಿನಿಧಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಜಿಎಸ್‌ಟಿ ನಷ್ಟ ಪರಿಹಾರದ ಅಲಭ್ಯತೆಯಿಂದಾಗಿ ಉಂಟಾಗಿರುವ ಆದಾಯ ಕೊರತೆ ತುಂಬಿಕೊಳ್ಳಲು ಕೇಂದ್ರ ಸರ್ಕಾರ ಮುಂದಿಟ್ಟಿದ್ದ ಎರಡು ಆಯ್ಕೆಗಳಲ್ಲಿ, ಜಿಎಸ್‌ಟಿ ಸೆಸ್ ಹಾಗೂ ವಿಶೇಷ ರೂಪದ ಸಾಲ ಪಡೆಯುವ ವಿಧಾನವನ್ನು ಆಯ್ಕೆ ಮಾಡಿಕೊಳ್ಳಲು ಸರ್ಕಾರ ಈಗಾಗಲೇ ನಿರ್ಧರಿಸಿದೆ.

‘ಆಯ್ಕೆ 1ರ (ಸೆಸ್‌ ಹಾಗೂ ಕೇಂದ್ರ ಸರ್ಕಾರವೇ ವಿಶೇಷ ಗವಾಕ್ಷಿ(ವಿಂಡೋ) ಮೂಲಕ ಕೊಡಿಸುವ ಸಾಲ ಪಡೆಯು
ವುದು) ಅಡಿಯಲ್ಲಿ ಸಾಲ ಮೊತ್ತವನ್ನು ಲೆಕ್ಕಾಚಾರ ಮಾಡುವಾಗ ಶೇ 10ರ ವೃದ್ಧಿ ದರ ಪ್ರಸ್ತಾವನೆಯನ್ನು ಹಿಂದಿನ ಸಭೆ
ಯಲ್ಲಿ ಪರಿಗಣಿಸಲಾಗಿತ್ತು. ವೃದ್ಧಿ ದರ ಕಡಿಮೆ ಮಾಡುವಂತೆ ರಾಜ್ಯ ಸರ್ಕಾರ ಸಲಹೆ ನೀಡಿತ್ತು. ವೃದ್ಧಿ ದರ ಇಳಿಸಿದ್ದ
ರಿಂದ ಎಲ್ಲ ರಾಜ್ಯಗಳಿಗೆ ಲಭ್ಯವಿರುವ ಸಾಲದ ಮೊತ್ತ ₹ 97 ಸಾವಿರ ಕೋಟಿಯಿಂದ ₹1.10 ಲಕ್ಷ ಕೋಟಿಗಳಿಗೆ ಹೆಚ್ಚಳ
ವಾಗಲಿದೆ’ ಎಂದೂ ಅವರು ಹೇಳಿದ್ದಾರೆ.

ADVERTISEMENT

‘ರಾಜ್ಯಗಳಿಗಾಗಿ ವಿಶೇಷ ಕಡಿಮೆ ದರದ ಬಡ್ಡಿ ವಿಧಿಸಬೇಕು. ಅಗತ್ಯಬಿದ್ದರೆ ಮುಂದಿನ ವರ್ಷಕ್ಕೂ ವಿಸ್ತರಣೆಯಾಗುವಂತೆ ಮತ್ತು ರಾಜ್ಯದ ಅವಶ್ಯಕತೆಗೆ ಅನುಗುಣವಾಗಿ ಸಾಲ ಸೌಲಭ್ಯ ಪಡೆಯಲು ಅವಕಾಶ ಮಾಡಿಕೊಡಬೇಕು’ ಎಂದೂ ಸಭೆಯಲ್ಲಿ ಬೊಮ್ಮಾಯಿ ಮನವಿ ಮಾಡಿದರು.

‘ರಾಜ್ಯಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವುದರಿಂದ ಸೆಪ್ಟೆಂಬರ್‌ 2020ರವರೆಗೆ ಸಂಗ್ರಹಿಸಿದಸುಮಾರು ₹ 25 ಸಾವಿರ ಕೋಟಿ ಸೆಸ್‌ ಮೊತ್ತವನ್ನು ಕೇಂದ್ರ ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ. ಈಗಾಗಲೇ ಸೆಸ್‌ ಮೊತ್ತವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

‘ಬಡ್ಡಿಯೂ ಸೇರಿದಂತೆ ರಾಜ್ಯಗಳ ನಷ್ಟ ಪರಿಹಾರದ ಅರ್ಹತೆಗೆ ಸಮನಾದ ಪೂರ್ಣ ಮೊತ್ತವನ್ನು ಎಲ್ಲ ರಾಜ್ಯಗಳಿಗೆ ನೀಡಲು 2022ರ ನಂತರವೂ ಸೆಸ್‌ ಸಂಗ್ರಹ ವಿಸ್ತರಿಸುವಂತೆ ಈ ಹಿಂದಿನ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ರಾಜ್ಯ ಸರ್ಕಾರ ಮಾಡಿದ್ದ ಸಲಹೆಯನ್ನು ಕೇಂದ್ರ ಸರ್ಕಾರ ಒಪ್ಪಿದೆ’ ಎಂದೂ ತಿಳಿಸಿದ್ದಾರೆ.

‘ಕೋವಿಡ್‌ನಿಂದ ಕರ್ನಾಟಕ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ರಾಜ್ಯದ ಬಂಡವಾಳ ವೆಚ್ಚ ಮತ್ತು ಚಾಲ್ತಿ ವೆಚ್ಚದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಯೋಜನೆಗಳನ್ನು ತಕ್ಷಣದಿಂದ ಜಾರಿಗೊಳಿಸಬೇಕಿದೆ’ ಎಂದೂ ಬೊಮ್ಮಾಯಿ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.