ADVERTISEMENT

ಅವಧಿ ಮುಗಿದರೂ ಚುನಾವಣೆಯಿಲ್ಲ: ಹೈಕೋರ್ಟ್ ಎದುರು ಅಸಹಾಯಕತೆ ವ್ಯಕ್ತಪಡಿಸಿದ ಆಯೋಗ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 16:37 IST
Last Updated 29 ಅಕ್ಟೋಬರ್ 2025, 16:37 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಅವಧಿಯಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುವಂತಾಗಬೇಕು ಎಂದು ಕಳೆದ ನಾಲ್ಕೈದು ವರ್ಷಗಳಿಂದ ಸತತವಾಗಿ ಕಾನೂನು ಹೋರಾಟ ನಡೆಸಲಾಗುತ್ತಿದೆ. ಆದರೂ, ಪ್ರಯೋಜನವಾಗುತ್ತಿಲ್ಲ’ ಎಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ತನ್ನ ಅಸಹಾಯಕತೆ ವ್ಯಕ್ತಪಡಿಸಿದೆ.

‘ಅವಧಿ ಮುಗಿಯಲಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ ಮಾಡದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ 40ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠ, ‘ಅವಧಿ ಮುಗಿಯುವ ಮುನ್ನವೇ ಏಕೆ ಚುನಾವಣೆ ನಡೆಸಿಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಆಯೋಗದ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ, ‘ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಿಗದಿತ ಅವಧಿಯಲ್ಲಿ ನಡೆಯುವಂತಾಗಬೇಕು ಎಂಬುದೇನೊ ಸರಿ. ಆದರೆ, ಇದಕ್ಕೆಲ್ಲಾ ಸರ್ಕಾರವೇ ಅನುವು ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಕಳೆದ ನಾಲ್ಕೈದು ವರ್ಷಗಳಿಂದ ಸತತವಾಗಿ ಸುಪ್ರೀಂ ಕೋರ್ಟ್ ಮತ್ತು‌ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸತ್ತಲೇ ಬರು‌ತ್ತಿದೆ’ ಎಂದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಮೀಸಲು ನಿಗದಿ ಹಾಗೂ ಕ್ಷೇತ್ರ ಪುನರ್ವಿಂಗಡಣೆಯನ್ನು ಯಾವಾಗ ಮುಗಿಸಿ ಅದರ ಪಟ್ಟಿ ನೀಡುತ್ತೀರಿ ಎಂಬುದನ್ನು ಇದೇ 3ರೊಳಗೆ ತಿಳಿಸಿ’ ಎಂದು ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಪ್ರತಿಮಾ ಹೊನ್ನಾಪುರ ಅವರಿಗೆ ನಿರ್ದೇಶಿಸಿ ವಿಚಾರಣೆಯನ್ನು ನವೆಂಬರ್‌ 3ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.