ಸಚಿವ ಸಂಪುಟ ಸಭೆ
– ಪ್ರಜಾವಾಣಿ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ‘ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ’ ಆರಂಭಿಸಲು ವರ್ಷಕ್ಕೆ ತಲಾ ₹200 ಕೋಟಿಯಂತೆ 5 ವರ್ಷಗಳಿಗೆ ₹1,000 ಕೋಟಿ ಅನುದಾನ ನೀಡಲು ಗುರುವಾರ ನಡೆದ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಸಭೆ ಬಳಿಕ, ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.
ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮದಡಿ ರಾಜ್ಯದಲ್ಲಿ ಉದಯೋನ್ಮುಖ ನವೋದ್ಯಮಗಳಿಗೆ ಪರಿಸರ ವ್ಯವಸ್ಥೆ ನಿರ್ಮಿಸಲಾಗುವುದು. ಈ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಮತ್ತು ಮುಂಬರುವ ನವೋದ್ಯಮಗಳಿಗೆ ನಿರ್ಣಾಯಕ ಹಾಗೂ ಅಗತ್ಯ ಬೆಂಬಲವನ್ನು ಒದಗಿಸಲಾಗುವುದು. ಈ ಮೂಲಕ ಕರ್ನಾಟಕವನ್ನು ಜಗತ್ತಿಗೆ ಭವಿಷ್ಯದ ಸಿದ್ಧ ನವೋದ್ಯಮ ನಾಯಕನನ್ನಾಗಿಸಲು ಮುಂದಿನ 5 ವರ್ಷಗಳಲ್ಲಿ ₹1,000 ಕೋಟಿ ಬಂಡವಾಳ ಹೂಡಲಾಗುವುದು ಎಂದು ಹೇಳಿದರು.
ಸ್ಪೇಸ್‌ಟೆಕ್ ಉತ್ಕೃಷ್ಟತಾ ಕೇಂದ್ರ: ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕಾಗಿ ‘ಸ್ಪೇಸ್‌ಟೆಕ್ ಉತ್ಕೃಷ್ಟತಾ ಕೇಂದ್ರ’ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಐದು ವರ್ಷಗಳ ಅವಧಿಗೆ ₹10 ಕೋಟಿ ವೆಚ್ಚ ಮಾಡಲಾಗುವುದು ಎಂದು ಎಚ್.ಕೆ.ಪಾಟೀಲ ತಿಳಿಸಿದರು.
ಇಸ್ರೊ, ಡಿಆರ್‌ಡಿಒ ಮತ್ತು ಇತರ ಸರ್ಕಾರಿ ಪರೀಕ್ಷಾ ಸೌಲಭ್ಯಗಳು ಸಂಪೂರ್ಣ ಸಾಮರ್ಥ್ಯ ತಲುಪಿವೆ. ನವೋದ್ಯಮ ವಲಯವು ಪ್ರತಿ ತಿಂಗಳು ಕನಿಷ್ಠ 30 ಕಾರ್ಯ ನಿರತ ಮಾದರಿಗಳನ್ನು ಪರೀಕ್ಷೆಗೆ ಸಿದ್ಧವಾಗಿ ಹೊರತರುತ್ತಿದೆ. ನವೋದ್ಯಮ ವಲಯಗಳಿಂದ ಪರೀಕ್ಷಾ ಸೌಲಭ್ಯಗಳಿಗೆ ವ್ಯಾಪಕ ಬೇಡಿಕೆ ಇದೆ ಎಂದು ಹೇಳಿದರು.
ಬಾಲ್ಯ ವಿವಾಹ: ನಿಶ್ಚಿತಾರ್ಥವೂ ಶಿಕ್ಷಾರ್ಹ
ಬಾಲ್ಯ ವಿವಾಹ ನಿಷೇಧ(ಕರ್ನಾಟಕ ತಿದ್ದುಪಡಿ) ಮಸೂದೆ 2025 ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ನಿಶ್ಚಿತಾರ್ಥವೂ ಶಿಕ್ಷಾರ್ಹ ಎಂಬ ಅಂಶವನ್ನು ಸೇರಿಸಲಾಗಿದೆ.
lರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 46 ಜೀವಾವಧಿ ಶಿಕ್ಷಾ ಬಂದಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ.
lಶಂಕರ್‌ನಾಗ್ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ‘ರಂಗಶಂಕರ’ ಸಂಸ್ಥೆ ಲಾಭರಹಿತ ಸಂಸ್ಥೆಯಾಗಿರುವುದರಿಂದ ಅದರ ಜಾಗದ ಗುತ್ತಿಗೆ ಅವಧಿಯನ್ನು ನವೀಕರಿಸಲು ಒಪ್ಪಿಗೆ. ಗುತ್ತಿಗೆ ನವೀಕರಣ ಮೊತ್ತದಲ್ಲಿ ಶೇ 10 ಮಾತ್ರ ಪಾವತಿಸಿಕೊಳ್ಳಲು ಸಹಮತಿ.
ಕೆರೆಗಳ ವಿಸ್ತೀರ್ಣಕ್ಕೆ ಬಫರ್ ಝೋನ್ ತಿದ್ದುಪಡಿ
ಕೆರೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಬಫರ್ ಝೋನ್ ನಿಗದಿಪಡಿಸಲು, ಕೆರೆಯ ಬಫರ್ ಝೋನ್‌ನಲ್ಲಿ ಹಾಗೂ ಕೆರೆಯಲ್ಲಿ ಸಾರ್ವಜನಿಕ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿ ಕೈಗೊಳ್ಳಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಇದಕ್ಕಾಗಿ ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2014’ ಕ್ಕೆ ತಿದ್ದುಪಡಿ ಮಾಡಲಾಗಿದ್ದು, ಇದನ್ನು ವಿಧಾನ ಮಂಡಲದಲ್ಲಿ ಮಂಡಿಸಲಾಗುವುದು ಎಂದು ಎಚ್.ಕೆ.ಪಾಟೀಲ ತಿಳಿಸಿದರು.
ಏಳು ಪ್ರಾಧಿಕಾರಗಳಿಗೆ ಕಂದಾಯ ಸಚಿವರು ಅಧ್ಯಕ್ಷರು
ಕಂದಾಯ ಇಲಾಖೆಯಡಿ ಕಾರ್ಯನಿರ್ವಹಿಸುವ 7 ಪ್ರಾಧಿಕಾರಗಳ ಅಧ್ಯಕ್ಷತೆಯನ್ನು ಮುಖ್ಯಮಂತ್ರಿಯವರಿಗೆ ನೀಡಲಾಗಿತ್ತು. ಮುಖ್ಯಮಂತ್ರಿ ಸ್ಥಾನದ ಕಾರ್ಯಭಾರದ ಜತೆಗೆ ಮಂಡಳಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷ ಸ್ಥಾನದ ಸ್ಥಾನ ನಿರ್ವಹಿಸುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಕಂದಾಯ ಸಚಿವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಅಧಿಸೂಚನೆ ಹೊರಡಿಸಲಾಗಿದೆ. ಈ ಸಂಬಂಧ ಮಸೂದೆಗಳಿಗೆ ತಿದ್ದುಪಡಿ ಮಾಡಿದ್ದು, ಸಚಿವ ಸಂಪುಟ ಒಪ್ಪಿಗೆ ನೀಡಿದೆ. ವಿಧಾನಮಂಡಲದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲಾಗುವುದು.
ಪ್ರಾಧಿಕಾರಗಳು: ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ, ಬನವಾಸಿ ಅಭಿವೃದ್ಧಿ ಪ್ರಾಧಿಕಾರ, ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ.
ಸುಗ್ರೀವಾಜ್ಞೆ ಮಸೂದೆಯಾಗಿ ಪರಿವರ್ತನೆ: ಸುಗ್ರೀವಾಜ್ಞೆ ರೂಪದಲ್ಲಿದ್ದ ‘ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ(ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ)ಮಸೂದೆ–2025’ಯನ್ನು ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.