ADVERTISEMENT

ಕೋವಿಡ್‌: ಕಾಡಲಿದೆ ವಿದ್ಯುತ್‌ ಕೊರತೆ ?

ಅಗತ್ಯ ಸೇವೆ ಸಿಬ್ಬಂದಿ ಎಂದು ಪರಿಗಣಿಸಿ: ಒತ್ತಾಯ

ಗುರು ಪಿ.ಎಸ್‌
Published 28 ಮಾರ್ಚ್ 2020, 4:17 IST
Last Updated 28 ಮಾರ್ಚ್ 2020, 4:17 IST
   

ಬೆಂಗಳೂರು: ಲಾಕ್‌ಡೌನ್‌ ಪರಿಣಾಮ ಸೌರ ಮತ್ತು ಪವನ ವಿದ್ಯುತ್‌ ಉತ್ಪಾದನೆ ಘಟಕಗಳ ಮೇಲೂ ಉಂಟಾಗಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ವಿದ್ಯುತ್ ಪೂರೈಕೆಯ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಘಟಕಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಅಗತ್ಯ ಸೇವೆಯ ಸಿಬ್ಬಂದಿ ಎಂದು ಪರಿಗಣಿಸಿಲ್ಲದ ಪರಿಣಾಮ, ಈ ಘಟಕಗಳಲ್ಲಿ ವಿದ್ಯುತ್‌ ಉತ್ಪಾದನೆ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

‘ಪವನ ಮತ್ತು ಸೌರವಿದ್ಯುತ್‌ ಉತ್ಪಾದನೆ ಘಟಕಗಳಲ್ಲಿ ಕೆಲಸ ಮಾಡುವವರನ್ನೂ ಅಗತ್ಯ ಸೇವೆಗಳ ಸಿಬ್ಬಂದಿ ಎಂದು ಪರಿಗಣಿಸುವ ಅಗತ್ಯವಿದೆ. ಇಲ್ಲದಿದ್ದರೆ, ಭವಿಷ್ಯದಲ್ಲಿ ರಾಜ್ಯಕ್ಕೆ ವಿದ್ಯುತ್‌ ಕೊರತೆ ಕಾಡಬಹುದು’ ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಉತ್ಪಾದಕರ ಸಂಘದ ಅಧ್ಯಕ್ಷ ರಮೇಶ್‌ ಶಿವಣ್ಣ ಆತಂಕ ವ್ಯಕ್ತಪಡಿಸುತ್ತಾರೆ.

ADVERTISEMENT

‘ಈ ಘಟಕಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸಂಚಾರ ಪಾಸ್ ನೀಡಬೇಕು ಅಥವಾ ಈ ಅವಧಿಯಲ್ಲಿ ಆದ ನಷ್ಟದ ಪರಿಹಾರವನ್ನಾದರೂ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ’ ಎಂದು ಅವರು ತಿಳಿಸಿದರು.

ಎಷ್ಟು ಅಗತ್ಯ ?: ಪರ್ಯಾಯ ಶಕ್ತಿ ಸಂಪನ್ಮೂಲ ಅಗತ್ಯವಿರುವ ಈ ಸಂದರ್ಭದಲ್ಲಿ, ಈ ಘಟಕಗಳಲ್ಲಿ ವಿದ್ಯುತ್‌ ಉತ್ಪಾದನೆ ನಿಯಮಿತ
ವಾಗಿ ಆಗುವಂತೆ ನೋಡಿ
ಕೊಳ್ಳಬೇಕಾದ ಅಗತ್ಯವಿದೆ.

ಬೇರೆ–ಬೇರೆ ಸಾಮರ್ಥ್ಯದ ವಿದ್ಯುತ್‌ ಉತ್ಪಾದನ ಘಟಕಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. 30 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆಯ ಸಾಮರ್ಥ್ಯ ಹೊಂದಿರುವ ಒಂದು ಘಟಕ ಕನಿಷ್ಠ 200 ಎಕರೆ ವಿಸ್ತಾರದಲ್ಲಿದ್ದು, ಕನಿಷ್ಠ ನಾಲ್ವರು ಎಂಜಿನಿಯರ್‌ಗಳು, ಹತ್ತು ಜನ ಸಿಬ್ಬಂದಿ ಬೇಕಾಗುತ್ತದೆ.

ಈ ಘಟಕಗಳಿಗೆ ಭದ್ರತೆ ಒದಗಿಸಲು ಮತ್ತು ಸೌರಫಲಕಗಳನ್ನು ಸ್ವಚ್ಛಗೊಳಿಸಲು, ಪವನ ವಿದ್ಯುತ್‌ ಟರ್ಬೈನ್‌ಗಳನ್ನು ನಿರ್ವಹಿಸಲು ಸಿಬ್ಬಂದಿ ಇರಲೇಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.