ADVERTISEMENT

ಆಸ್ತಿ ತೆರಿಗೆ: ₹694 ಕೋಟಿ ಸಂಗ್ರಹ– ಯಶಸ್ವಿ 13ನೇ ಲೋಕ ಅದಾಲತ್‌

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 15:56 IST
Last Updated 15 ಜುಲೈ 2024, 15:56 IST
ಇದೇ 13ರಂದು ನಡೆದ ರಾಷ್ಟ್ರೀಯ ಲೋಕ್‌ ಅದಾಲತ್‌ನ ವಿವರಗಳನ್ನು ಹೈಕೋರ್ಟ್‌ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಮತ್ತು  ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್‌ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಇದೇ 13ರಂದು ನಡೆದ ರಾಷ್ಟ್ರೀಯ ಲೋಕ್‌ ಅದಾಲತ್‌ನ ವಿವರಗಳನ್ನು ಹೈಕೋರ್ಟ್‌ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಮತ್ತು  ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್‌ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.   

ಬೆಂಗಳೂರು: ‘ಆಸ್ತಿ ತೆರಿಗೆ ಪಾವತಿಯ ರಿಯಾಯಿತಿ ಗಡುವು ವಿಸ್ತರಿಸಿ; ರಾಷ್ಟ್ರೀಯ ಲೋಕ ಅದಾಲತ್‌ನಲ್ಲೂ ಇಂತಹ ಪ್ರಕರಣಗಳ ರಾಜಿ ಸಂಧಾನ ನಡೆಸಿದ ಪರಿಣಾಮ ಈ ಬಾರಿ ಒಟ್ಟು 9 ಲಕ್ಷಕ್ಕೂ ಹೆಚ್ಚು ಪ್ರಕರಣಗಳಲ್ಲಿ ತೆರಿಗೆ ಪಾವತಿದಾರರಿಂದ ರಾಜ್ಯ ಸರ್ಕಾರ ₹694 ಕೋಟಿಯಷ್ಟು ಬೃಹತ್‌ ಮೊತ್ತವನ್ನು ಸಂಗ್ರಹಿಸಲು ಸಾಧ್ಯವಾಗಿದೆ’ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ವಿ.ಕಾಮೇಶ್ವರ ರಾವ್‌ ತಿಳಿಸಿದರು.

ಇದೇ 13ರಂದು ನಡೆದ ರಾಷ್ಟ್ರೀಯ ಲೋಕ್‌ ಅದಾಲತ್‌ನ ವಿವರಗಳನ್ನು ಸೋಮವಾರ ಹೈಕೋರ್ಟ್‌ನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ವಿವರಿಸಿದ ಅವರು, ‘ಈ ಬಾರಿಯ ಲೋಕ ಅದಾಲತ್‌ನಲ್ಲಿ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳೂ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ನಡೆಸಲಾದ ಅದಾಲತ್‌ನಲ್ಲಿ ಒಟ್ಟು 40 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಪರಿಹಾರದ ಮೊತ್ತ ₹2,640 ಕೋಟಿಯಷ್ಟಾಗಿದೆ’ ಎಂದು ತಿಳಿಸಿದರು. 

‘1,550 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇವುಗಳಲ್ಲಿ 259 ದಂಪತಿ ರಾಜಿ ಸಂಧಾನದಿಂದ ಪುನಃ ಒಂದಾಗಿ ಜೀವನ ನಡೆಸಲು ತೀರ್ಮಾನಿಸಿದ್ದಾರೆ. ವಿಭಾಗ ದಾವೆಗಳಲ್ಲಿ 3,356 ಪ್ರಕರಣ ಇತ್ಯರ್ಥಗೊಳಿಸಲಾಗಿದೆ. ಎಕ್ಸಿಕ್ಯೂಷನ್‌ ಪ್ರಕರಣಗಳಲ್ಲಿ ಒಟ್ಟು 3,769 ಪ್ರಕರಣ ಇತ್ಯರ್ಥಪಡಿಸಲಾಗಿದೆ. ಇವುಗಳಲ್ಲಿ ₹118 ಕೋಟಿ ಮೊತ್ತ ನೀಡಲಾಗಿದೆ’ ಎಂದು ವಿವರಿಸಿದರು.

ADVERTISEMENT

‘15 ರೇರಾ ಪ್ರಕರಣಗಳನ್ನು (ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ) ಇತ್ಯರ್ಥಪಡಿಸಲಾಗಿದ್ದು ₹1 ಕೋಟಿ ₹22 ಲಕ್ಷ ಹಾಗೂ ಗ್ರಾಹಕರ ವ್ಯಾಜ್ಯಗಳಲ್ಲಿ 69 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು ₹3 ಕೋಟಿ ₹92 ಲಕ್ಷ ಮೊತ್ತವನ್ನು ಇತ್ಯರ್ಥದ ಮೊತ್ತವಾಗಿ ನೀಡಲಾಗಿದೆ’ ಎಂದರು.

‘ಬೆಂಗಳೂರಿನ ಲಘು ವ್ಯಾಜ್ಯಗಳ ನ್ಯಾಯಾಲಯದಲ್ಲಿ (ಎಸ್‌ಸಿಸಿಎಚ್‌–24) ಮೋಟಾರು ವಾಹನ ಪ್ರಕರಣಗಳಲ್ಲಿ ವಿಶಾಖ ಈಶ್ವರ ಪ್ರಸಾದ್‌ ವಿರುದ್ಧದ ಐಸಿಐಸಿಐ ವಿಮಾ ಕಂಪನಿಯ ಪ್ರಕರಣವನ್ನು ₹4.05 ಕೋಟಿಗೆ ಇತ್ಯರ್ಥಪಡಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಹಿರಿಯ ಸಿವಿಲ್‌ ನ್ಯಾಯಾಲಯದಲ್ಲಿ 40 ವರ್ಷಗಳಷ್ಟು ಹಳೆಯದಾದ ಶಾಶ್ವತ ಪ್ರತಿಬಂಧಕಾಜ್ಞೆ ಪ್ರಕರಣವೊಂದನ್ನು ಇತ್ಯರ್ಥಪಡಿಸಲಾಗಿದೆ’ ಎಂದು ವಿವರಿಸಿದರು.

ಹೈಕೋರ್ಟ್‌ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್, ಪ್ರಾಧಿಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ ಪಿ.ಎಂ.ಬಾಲಸುಬ್ರಮಣಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.