ಬೆಂಗಳೂರು: ‘ಚುನಾವಣೆ ವೇಳೆ ಮತದಾರರಿಗೆ ಆಮಿಷ ಒಡ್ಡುವ ಕುಕ್ಕರ್ ಹಂಚಿಕೆ ಪದ್ಧತಿ ಹಳೆಯದು. ಈಗೆಲ್ಲಾ ಇವುಗಳ ವಿಧಾನ ಬದಲಾಗಿದೆ...!’ ಎಂದು ಹೈಕೋರ್ಟ್ ಕಟಕಿಯಾಡಿದೆ.
‘ವರುಣ ಕ್ಷೇತ್ರದ ಶಾಸಕರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಗೂ ಮುನ್ನ ಮತದಾರರಿಗೆ ಗ್ಯಾರಂಟಿ ಆಮಿಷಗಳನ್ನು ಒಡ್ಡಿ ಗೆದ್ದಿದ್ದಾರೆ’ ಎಂದು ಆರೋಪಿಸಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಮೈಸೂರಿನ ವರುಣ ಹೋಬಳಿಯ ಕೂಡನಹಳ್ಳಿಯ ಕೆ.ಎಂ.ಶಂಕರ್ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸಿದ್ದರಾಮಯ್ಯ ಪರ ವಾದ ಮಂಡಿಸಿದ ಹಿರಿಯ ವಕೀಲ ರವಿವರ್ಮ ಕುಮಾರ್, ‘ಸಿದ್ದರಾಮಯ್ಯ ತಮ್ಮ ಕ್ಷೇತ್ರದಲ್ಲಿ ಯಾರಿಗೆ ಯಾವತ್ತು, ಎಲ್ಲಿ, ಎಷ್ಟು ಹೊತ್ತಿಗೆ, ಏನು ಆಮಿಷ ಒಡ್ಡಿದರು ಎಂಬುದಕ್ಕೆ ಅರ್ಜಿದಾರರ ಬಳಿ ಯಾವುದೇ ಪುರಾವೆಗಳಿಲ್ಲ. ಅರ್ಜಿಯಲ್ಲಿ ವಿವರಿಸಲಾಗಿರುವ ಅಂಶಗಳೆಲ್ಲಾ ತಪ್ಪುತಪ್ಪಾಗಿವೆ’ ಎಂದು ಆಕ್ಷೇಪಿಸಿದರು.
ಇದನ್ನು ಮಧ್ಯದಲ್ಲೇ ತಡೆದು ಮೌಖಿಕವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಹಂಚಿದ ಕುಕ್ಕರ್‌ಗಳನ್ನು ಜಪ್ತಿ ಮಾಡಲಾಗಿದೆಯಲ್ಲವೇ? ಆದಾಗ್ಯೂ, ಇಂತಹ ವಿಧಾನಗಳೆಲ್ಲಾ ಈಗ ಹಳೆಯದಾಗಿವೆಯಲ್ಲಾ’ ಎಂದು ಚುಚ್ಚಿದರು. ವಾದ ಮುಂದುವರಿಸಿದ ರವಿವರ್ಮ ಕುಮಾರ್, ‘ಅರ್ಜಿದಾರರ ಕ್ಷೇತ್ರದಲ್ಲಿ ಅಂತಹ ಯಾವುದೇ ಕುಕ್ಕರ್ ಹಂಚಿಲ್ಲ’ ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು.
‘ಚುನಾವಣಾ ಪ್ರಣಾಳಿಕೆಗಳು ಭವಿಷ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವ ಸರ್ಕಾರದ ನೀತಿಗಳ ಘೋಷಣೆ. ಇವುಗಳಲ್ಲಿ ನೀಡಲಾದ ಭರವಸೆಗಳು ಮತ್ತು ಗ್ಯಾರಂಟಿಗಳನ್ನು ಚುನಾವಣಾ ಅಕ್ರಮ ಅಥವಾ ಭ್ರಷ್ಟಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಸುದೀರ್ಘವಾಗಿ ವಿವರಿಸಿದರು. ಕಲಾಪದ ಅವಧಿ ಮುಗಿದ ಕಾರಣ ವಿಚಾರಣೆಯನ್ನು ಮುಂದೂಡಲಾಯಿತು. ಅರ್ಜಿದಾರರ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.