ಬೆಂಗಳೂರು: ಲೋಕಾಯುಕ್ತ ಕಾರ್ಯವೈಖರಿ ಮತ್ತು ನ್ಯಾಯದಾನದಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ವಿಧಾನಪರಿಷತ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಲೋಕಾಯುಕ್ತಕ್ಕೆ ಸಲ್ಲಿಕೆಯಾಗುವ ದೂರುಗಳನ್ನು ಇತ್ಯರ್ಥಪಡಿಸಲು ಕಾಲಮಿತಿ ನಿಗದಿಗೆ ತಂದ ಕಾಯ್ದೆ ತಿದ್ದುಪಡಿ ಮಸೂದೆ ಮೇಲೆ ನಡೆದ ಚರ್ಚೆ ವೇಳೆ ಮಾತನಾಡಿದ ಪರಿಷತ್ ಸದಸ್ಯರು, ‘ಈ ತಿದ್ದುಪಡಿ ಮೊದಲೇ ಆಗಬೇಕಿತ್ತು’ ಎಂದರು.
ಮಸೂದೆ ಮಂಡಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ಲೋಕಾಯುಕ್ತಕ್ಕೆ ದೂರು ಬಂದಿದ್ದರೆ 90 ದಿನಗಳ ಒಳಗೆ ಪರಿಹರಿಸಬೇಕು. ಸಾಧ್ಯವಾಗದೇ ಇದ್ದರೆ, ಕಾರಣ ನಮೂದಿಸಿ ಹೆಚ್ಚುವರಿ 90 ದಿನ ಕಾಲಾವಕಾಶ ಪಡೆಯಬಹುದು. 6 ತಿಂಗಳಲ್ಲಿಯೂ ಇತ್ಯರ್ಥವಾಗದೇ ಇದ್ದರೆ ಮತ್ತೆ 6 ತಿಂಗಳ ಹೆಚ್ಚುವರಿ ಅವಧಿ ಪಡೆಯಲು ಅವಕಾಶವಿದೆ. ಪ್ರಾಥಮಿಕ ತನಿಖೆ, ಅಂತಿಮ ವರದಿ ವಿಳಂಬ ಆಗಬಾರದು ಎಂಬ ಕಾರಣಕ್ಕೆ ಕಾಲಮಿತಿ ನಿಗದಿಪಡಿಸಲು ತಿದ್ದುಪಡಿ ತರಲಾಗುತ್ತಿದೆ’ ಎಂದರು.
ಜೆಡಿಎಸ್‌ನ ಮರಿತಿಬ್ಬೇಗೌಡ, ‘ನ್ಯಾಯದಾನದಲ್ಲಿ ವಿಳಂಬ ತಪ್ಪಿಸಲು ಒಳ್ಳೆಯ ತಿದ್ದುಪಡಿ ಇದು. ಲೋಕಾಯುಕ್ತಕ್ಕೆ ಸಿಬ್ಬಂದಿ ನೇಮಿಸುವಾಗ ಹಣ ಕೊಟ್ಟವರಿಗೆ ಅವಕಾಶ ನೀಡಲಾಗುತ್ತದೆ. ಭ್ರಷ್ಟ ಅಧಿಕಾರಿಗಳನ್ನು ನೇಮಿಸಿದರೆ ತನಿಖೆ ವಿಳಂಬ ಆಗಲಿದೆ, ನ್ಯಾಯವೂ ಸಿಗುವುದಿಲ್ಲ’ ಎಂದರು.
‘ಲೋಕಾಯುಕ್ತ ಎಂದರೆ ಹಿಂದೆ ಭಯ ಇತ್ತು. ಈಗ ಏನೂ ಉಳಿದಿಲ್ಲ. ದೂರುಗಳ ಆಧಾರದಲ್ಲಿ ಕಾಲಾವಕಾಶ ವರ್ಗೀಕರಣ ಮಾಡಬೇಕು. ಕಾಲಮಿತಿಯ ನಂತರವೂ ತನಿಖೆ ಮುಗಿಯದಿದ್ದರೆ ಏನು ಕ್ರಮ’ ಎಂದು ಜೆಡಿಎಸ್‌ನ ಬಸವರಾಜ ಹೊರಟ್ಟಿ ಪ್ರಶ್ನಿಸಿದರು.
‘ದೂರುದಾರರು ಹೈಕೋರ್ಟ್‌ಗೆ ಹೋಗಲು ಅವಕಾಶವಿದೆ. ಸದ್ಯದ ಸ್ಥಿತಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ಬಾಕಿ ಇರುವುದರಿಂದ ಹೈಕೋರ್ಟ್‌ಗೆ ಹೋಗಲು ಅಡ್ಡಿ ಆಗುತ್ತಿತ್ತು. ಇನ್ನು ಆ ಸಮಸ್ಯೆ ಇರುವುದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.