ADVERTISEMENT

ಝಳಕಿ ತನಿಖಾ ಠಾಣೆ: ಎಂವಿಐಗಳ ದರ್ಬಾರು!

ಸ್ವಯಂಪ್ರೇರಿತ ‍ಪ್ರಕರಣ ದಾಖಲಿಸಿ, ವಿಚಾರಣೆ ಆರಂಭಿಸಿದ ಲೋಕಾಯುಕ್ತ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 19:30 IST
Last Updated 9 ಜುಲೈ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಿಜಯಪುರ ಜಿಲ್ಲೆಯ ಝಳಕಿಯಲ್ಲಿರುವ ಅಂತರರಾಜ್ಯ ಸಾರಿಗೆ ತನಿಖಾ ಠಾಣೆಯಲ್ಲಿ ಮೋಟಾರು ವಾಹನ ಇನ್‌ಸ್ಪೆಕ್ಟರ್‌ಗಳು (ಎಂವಿಐ) ಯಾರ ಅಂಕೆಗೂ ಸಿಗದೆ ಸ್ವೇಚ್ಛಾಚಾರದಿಂದ ದರ್ಬಾರು ನಡೆಸುತ್ತಿರುವುದನ್ನು ಕಣ್ಣಾರೆ ಕಂಡುಬಂದಿರುವ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ, ಈ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ.

ನೂತನ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜೂನ್‌ 24ರಂದು ವಿಜಯಪುರ ಜಿಲ್ಲೆಗೆ ಭೇಟಿ ನೀಡಿದ್ದ ಪಾಟೀಲ, ಸಾರ್ವಜನಿಕರ ಅಹವಾಲು ಆಲಿಸಿದ್ದರು. ಸಾರಿಗೆ ಇಲಾಖೆಯ ಕಾರ್ಯವೈಖರಿ ಕುರಿತು ಹೆಚ್ಚು ದೂರುಗಳು ಕೇಳಿಬಂದ ಕಾರಣದಿಂದ ಖುದ್ದಾಗಿ ಝಳಕಿಯಲ್ಲಿರುವ ಅಂತರರಾಜ್ಯ ಸಾರಿಗೆ ತನಿಖಾ ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದ್ದರು.

‘ಝಳಕಿ ತನಿಖಾ ಠಾಣೆಯಲ್ಲಿ ಒಂಬತ್ತು ಮೋಟಾರು ವಾಹನ ಇನ್‌ಸ್ಪೆಕ್ಟರ್‌ಗಳಿದ್ದಾರೆ. ಪ್ರತಿ ಪಾಳಿಯಲ್ಲಿ ತಲಾ ಮೂವರು ಕಾರ್ಯನಿರ್ವಹಿಸುತ್ತಿದ್ದಾರೆ. ಎಂವಿಐಗಳ ಹಾಜರಾತಿ, ಅವರು ಯಾವ ರೀತಿ ಕೆಲಸ ಮಾಡುತ್ತಾರೆ? ಕೆಲಸದ ಸ್ವರೂಪ ಕುರಿತು ನಿಗಾ ಮತ್ತು ನಿಯಂತ್ರಣ ವ್ಯವಸ್ಥೆಯೇ ಇಲ್ಲ. ಎಂವಿಐಗಳ ವಿರುದ್ಧ ದೂರು ಸ್ವೀಕರಿಸುವ ಮತ್ತು ಅವುಗಳನ್ನು ವಿಲೇವಾರಿ ಮಾಡುವುದಕ್ಕೂ ಒಂದು ವ್ಯವಸ್ಥೆ ಇಲ್ಲ’ ಎಂದು ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್‌ 7(2) ಮತ್ತು ಸೆಕ್ಷನ್‌ 9(3)(ಎ) ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ಆರಂಭಿಸಲು ಜೂನ್‌ 30ರಂದು ಹೊರಡಿಸಿರುವ ಆದೇಶದಲ್ಲಿ ಲೋಕಾಯುಕ್ತರು ಉಲ್ಲೇಖಿಸಿದ್ದಾರೆ.

ADVERTISEMENT

ಸಾರಿಗೆ ಇಲಾಖೆ ಕಾರ್ಯದರ್ಶಿ, ಸಾರಿಗೆ ಆಯುಕ್ತರು, ಬೆಳಗಾವಿ ವಿಭಾಗ ಜಂಟಿ ಸಾರಿಗೆ ಆಯುಕ್ತರು, ವಿಜಯಪುರ ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಪಾರ್ಥನಹಳ್ಳಿ ಮತ್ತು ಝಳಕಿ ತನಿಖಾ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂಬತ್ತು ಎಂವಿಐಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ತನಿಖಾ ಠಾಣೆಯಲ್ಲಿ ಅಧಿಕಾರಿಗಳ ಕಾರ್ಯನಿರ್ವಹಣೆ ಮೇಲೆ ನಿಯಂತ್ರಣ ಮತ್ತು ನಿಗಾ ಇರಿಸಲು ಕೈಗೊಂಡ ಕ್ರಮಗಳ ಕುರಿತು ವರದಿ ನೀಡುವಂತೆ ಮೊದಲ ನಾಲ್ಕು ಪ್ರತಿವಾದಿಗಳಿಗೆ ನಿರ್ದೇಶನ ನೀಡಿದ್ದಾರೆ.

ತನಿಖಾ ಠಾಣೆಯಲ್ಲಿ ಕಾರ್ಯನಿರ್ವಹಿಸುವಾಗ ನಿಯಮ ಪಾಲಿಸದೇ ಇರುವ ಆರೋಪ ಕುರಿತಂತೆ ಉತ್ತರ ನೀಡುವಂತೆ ಒಂಬತ್ತು ಎಂವಿಐಗಳಿಗೆ ಸೂಚಿಸಲಾಗಿದೆ. ಆಗಸ್ಟ್‌ 19ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದೆ.

2,437 ಅರ್ಜಿ ವಿಲೇವಾರಿ ಬಾಕಿ

ವಿಜಯಪುರ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ 2,437 ಅರ್ಜಿಗಳನ್ನು ದೀರ್ಘ ಕಾಲದಿಂದ ವಿಲೇವಾರಿ ಮಾಡದೆ ಬಾಕಿ ಇರಿಸಿಕೊಂಡಿರುವುದನ್ನು ಲೋಕಾಯುಕ್ತರು ಪತ್ತೆಮಾಡಿದ್ದಾರೆ. ಈ ಬಗ್ಗೆಯೂ ವಿಚಾರಣೆ ಕೈಗೆತ್ತಿಕೊಂಡಿದ್ದು, ಅರ್ಜಿಗಳನ್ನು ಬಾಕಿ ಇಡಲು ಕಾರಣವಾದ ಅಂಶಗಳ ಕುರಿತು ವರದಿ ಸಲ್ಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ತೀರ್ಥನಹಳ್ಳಿ ಅವರಿಗೆ ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.