ADVERTISEMENT

ಲೋಕಾಯುಕ್ತ ಕಾಯ್ದೆ ತಿದ್ದುಪಡಿಗೆ ನಿರಾಸಕ್ತಿ: 6 ತಿಂಗಳಾದರೂ ಆರಂಭವಾಗದ ಪ್ರಕ್ರಿಯೆ

ವಿ.ಎಸ್.ಸುಬ್ರಹ್ಮಣ್ಯ
Published 7 ಫೆಬ್ರುವರಿ 2023, 21:29 IST
Last Updated 7 ಫೆಬ್ರುವರಿ 2023, 21:29 IST
   

ಬೆಂಗಳೂರು: ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರು ಸರ್ಕಾರಿ ಹಾಗೂ ಸಾರ್ವಜನಿಕ ನೌಕರರ ವಿರುದ್ಧ ವಿಚಾರಣೆ ನಡೆಸಿ ಸಲ್ಲಿಸುವ ವರದಿಗಳನ್ನು ಅಂಗೀಕರಿಸಿ, ಕ್ರಮ ಜರುಗಿಸುವುದನ್ನು ಕಡ್ಡಾಯಗೊಳಿಸುವುದಕ್ಕೆ ಪೂರಕವಾಗಿ ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರುವಂತೆ ಹೈಕೋರ್ಟ್‌ ವಿಭಾಗೀಯ ಪೀಠ ಶಿಫಾರಸು ಮಾಡಿ ಆರು ತಿಂಗಳು ಕಳೆದರೂ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ.

ಕರ್ನಾಟಕ ಲೋಕಾಯುಕ್ತ ಕಾಯ್ದೆ–1984ರ ಸೆಕ್ಷನ್‌ 12(4)ರ ಪ್ರಕಾರ, ಸರ್ಕಾರಿ ಹಾಗೂ ಸಾರ್ವಜನಿಕ ನೌಕರರ ವಿರುದ್ಧದ ಆರೋಪಗಳ ಕುರಿತು ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರು ವಿಚಾರಣೆ ನಡೆಸಿ ಸೆಕ್ಷನ್‌ 12(3)ರ ಅಡಿಯಲ್ಲಿ ಸಲ್ಲಿಸುವ ವರದಿಗಳನ್ನು ಅಂಗೀಕರಿಸುವ ಇಲ್ಲವೇ ತಿರಸ್ಕರಿಸುವ ಅಧಿಕಾರ ಸರ್ಕಾರಕ್ಕೆ ಇದೆ.

ಇದರಿಂದಾಗಿ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರು ಸಲ್ಲಿಸುವ ವಿಚಾರಣಾ ವರದಿಗಳಲ್ಲಿ ಹೆಚ್ಚಿನವು ತಿರಸ್ಕೃತವಾಗುತ್ತಿವೆ. ನೂರಾರು ಸಂಖ್ಯೆಯ ವರದಿಗಳಿಗೆ ಸಂಬಂಧಿಸಿದಂತೆ ಯಾವುದೇ ತೀರ್ಮಾನ ಕೈಗೊಳ್ಳದೆ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದುಗೊಳಿಸಿ ಲೋಕಾಯುಕ್ತಕ್ಕೆ ಮರಳಿ ತನಿಖಾ ಅಧಿಕಾರ ನೀಡುವಂತೆ ಕೋರಿದ್ದ ಅರ್ಜಿಗಳ ವಿಚಾರಣೆ ವೇಳೆ ಈ ಬಗ್ಗೆಯೂ ಹೈಕೋರ್ಟ್‌ ಪರಿಶೀಲನೆ ನಡೆಸಿತ್ತು.

ADVERTISEMENT

ಚಿದಾನಂದ ಅರಸ್‌ ಬಿ.ಜಿ. ಹಾಗೂ ಇತರರು ಮತ್ತು ಕರ್ನಾಟಕ ಸರ್ಕಾರದ ಮಧ್ಯದ ಪ್ರಕರಣಗಳ ವಿಚಾರಣೆ ನಡೆಸಿ 2022ರ ಆಗಸ್ಟ್‌ 11ರಂದು ತೀರ್ಪುನೀಡಿದ್ದ ನ್ಯಾಯಮೂರ್ತಿ ಬಿ. ವೀರಪ್ಪ ಮತ್ತು ಕೆ.ಎಸ್‌. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ, ಎಸಿಬಿ ರಚನೆಯನ್ನು ರದ್ದುಗೊಳಿಸಿತ್ತು. ಲೋಕಾಯುಕ್ತ ಸಂಸ್ಥೆಗೆ 2014ರ ಮಾರ್ಚ್‌ಗೂ ಮೊದಲು ಇದ್ದ ಎಲ್ಲ ಅಧಿಕಾರಗಳನ್ನು ಮರುಸ್ಥಾಪಿಸಿ ಆದೇಶ ಹೊರಡಿಸಿತ್ತು.

ಹೈಕೋರ್ಟ್‌ ಶಿಫಾರಸಿನಲ್ಲೇನಿದೆ?: ‘ಕರ್ನಾಟಕ ಲೋಕಾಯುಕ್ತ ಕಾಯ್ದೆ–1984ರ ಸೆಕ್ಷನ್‌ 12(3)ರ ಅಡಿಯಲ್ಲಿ ಸಲ್ಲಿಸುವ ವರದಿಗಳನ್ನು ಸರ್ಕಾರ ಒಪ್ಪಿಕೊಳ್ಳುವುದನ್ನು ಕಡ್ಡಾಯಗೊಳಿಸಲು ಇದೇ ಕಾಯ್ದೆಯ ಸೆಕ್ಷನ್‌ 12(4)ಕ್ಕೆ ತಕ್ಷಣವೇ ತಿದ್ದುಪಡಿ ತರುವ ಅಗತ್ಯವಿದೆ’ ಎಂದು ಹೈಕೋರ್ಟ್‌ ಶಿಫಾರಸು ಮಾಡಿತ್ತು.

ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಹೆಚ್ಚಿನ ಸಿಬ್ಬಂದಿ ಒದಗಿಸುವುದು, ಲೋಕಾಯುಕ್ತಕ್ಕೆ ನಿಯೋಜಿತರಾದ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕನಿಷ್ಠ ಮೂರು ವರ್ಷಗಳವರೆಗೆ ವರ್ಗಾವಣೆ ಮಾಡದೇ ಇರುವುದು ಸೇರಿದಂತೆ ಐದು ಶಿಫಾರಸುಗಳು ಹೈಕೋರ್ಟ್‌ ತೀರ್ಪಿನಲ್ಲಿವೆ. ಅದರಲ್ಲಿ ಮೊದಲ ಅಂಶವೇ ಸೆಕ್ಷನ್‌ 12(4)ರ ತಿದ್ದುಪಡಿ. ಉಳಿದ ಶಿಫಾರಸುಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಹಲವು ಕ್ರಮ ಕೈಗೊಂಡಿದೆ.

‘ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರುವುದಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ. ಈಗಿನ ಸ್ಥಿತಿಯಲ್ಲಿ ಕಾಯ್ದೆಗೆ ತಿದ್ದುಪಡಿ ತರುವ ಸಾಧ್ಯತೆ ಇಲ್ಲ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ತಿದ್ದುಪಡಿ ತರದಿದ್ದರೆ ವಿಚಾರಣೆಗೆ ಅರ್ಥವಿಲ್ಲ’

‘ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರಬೇಕೆಂಬ ಹೈಕೋರ್ಟ್‌ ಶಿಫಾರಸು ಜಾರಿಗೆ ಬಂದರೆ ಮಾತ್ರ
ನಾವು ನಡೆಸುವ ವಿಚಾರಣೆಗಳಿಗೆ ಅರ್ಥವಿರುತ್ತದೆ. ಇಲ್ಲವಾದರೆ, ಲೋಕಾಯುಕ್ತ ಸಂಸ್ಥೆ ಕಳಿಸುವ ವಿಚಾರಣಾ ವರದಿಗಳನ್ನು ಸರ್ಕಾರ ತನ್ನ ಬಳಿ ಇರಿಸಿಕೊಂಡು ಸುಮ್ಮನಾಗುವುದು ಮುಂದುವರಿಯುತ್ತದೆ. ಇದರಿಂದ ವಿಚಾರಣೆಯ ಉದ್ದೇಶವೇ ಈಡೇರುವುದಿಲ್ಲ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಹೇಳುತ್ತಾರೆ.

‘ಲೋಕಾಯುಕ್ತದ ವರದಿಗಳನ್ನು ಒಪ್ಪಿಕೊಳ್ಳುವುದು ಕಡ್ಡಾಯವಾಗಬೇಕು. ವರದಿಗಳಲ್ಲಿ ಲೋಪವಿದ್ದರೆ ನ್ಯಾಯಾಂಗದಲ್ಲಿ ಪ್ರಶ್ನಿಸಲು ಅವಕಾಶ ಇರುತ್ತದೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕಾಯ್ದೆ ತಿದ್ದುಪಡಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.