ADVERTISEMENT

‘ಭ್ರಷ್ಟಾಚಾರ ಮುಚ್ಚಿ ಹಾಕಲು ಲೋಕಾಯುಕ್ತ ಬಂದ್‌’

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 9:54 IST
Last Updated 25 ಅಕ್ಟೋಬರ್ 2018, 9:54 IST
   

ಹೊಸಪೇಟೆ: ‘ಶಾಸಕ ಬಿ. ಶ್ರೀರಾಮುಲು ಅವರನ್ನು 420 ಎಂದು ಗೇಲಿ ಮಾಡುತ್ತಿರುವ ಸಿದ್ದರಾಮಯ್ಯನವರು ತಮ್ಮ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಿ ಹಾಕಲು ಲೋಕಾಯುಕ್ತ ಬಂದ್‌ ಮಾಡಿಸಿದರು’ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಗುರುವಾರ ಇಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಭಯದಿಂದ ಲೋಕಾಯುಕ್ತ ಮುಚ್ಚಿದರಲ್ಲದೇ ತಮ್ಮ ಪಕ್ಷದವರ ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಿ ಹಾಕಲು ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ.) ರಚಿಸಿದರು. ಅಷ್ಟೇ ಅಲ್ಲ, ಅದನ್ನು ಹಲ್ಲು ಕಿತ್ತ ಹಾವಿನಂತೆ ಮಾಡಿದರು. ತಮ್ಮ ವಿರೋಧಿಗಳ ಮೇಲೆ ಎ.ಸಿ.ಬಿ. ದಾಳಿ ಮಾಡಿಸಿದರು’ ಎಂದು ಹೇಳಿದರು.

ಮಹರ್ಷಿ ವಾಲ್ಮೀಕಿಗೆ ಅಪಮಾನ:‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರು ಬೆಂಗಳೂರಿನಲ್ಲೇ ಇದ್ದರೂ ಮಹರ್ಷಿ ವಾಲ್ಮೀಕಿ ಅವರ ಜಯಂತಿಯಲ್ಲಿ ಪಾಲ್ಗೊಳ್ಳದೇ ಅಪಮಾನ ಮಾಡಿದ್ದಾರೆ. ವಾಲ್ಮೀಕಿ ಪ್ರಶಸ್ತಿಯನ್ನು ಆ ಸಮಾಜದ ಯಾರಿಗಾದರೂ ಕೊಡಬೇಕಿತ್ತು. ಆದರೆ, ಪ್ರಶಸ್ತಿಗೆ ಮಾಜಿಪ್ರಧಾನಿ ಎಚ್‌.ಡಿ. ದೇವೇಗೌಡ ಅವರನ್ನು ಆಯ್ಕೆ ಮಾಡಲಾಯಿತು. ಅವರು ಸೌಜನ್ಯಕ್ಕೂ ಪ್ರಶಸ್ತಿ ಸ್ವೀಕರಿಸಲು ಹೋಗಲಿಲ್ಲ’ ಎಂದರು.

ADVERTISEMENT

‘ಶ್ರೀರಾಮುಲು ಅವರ ಸಹೋದರಿ ಜೆ. ಶಾಂತಾ ಅವರನ್ನು ಸೋಲಿಸಲು ಇಡೀ ಸಚಿವ ಸಂಪುಟ ಬಳ್ಳಾರಿಗೆ ಬಂದಿದೆ. ಅವರಿಗೆ ನಾಚಿಕೆಯಾಗಬೇಕು. ಇದನ್ನೆಲ್ಲ ನೋಡಿದರೆ ಶ್ರೀರಾಮುಲು ಅವರ ಶಕ್ತಿ ಎಂತಹುದು ಎಂಬುದು ಗೊತ್ತಾಗುತ್ತದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಎಲ್ಲ ಜಾತಿಯವರಿಗೂ ಅನುಕೂಲವಾಗುವಂತೆ ಭಾಗ್ಯಲಕ್ಷ್ಮಿ, ಸಂಧ್ಯಾ ಸುರಕ್ಷಾ ಯೋಜನೆ ಜಾರಿಗೆ ತರಲಾಗಿತ್ತು. ಆದರೆ, ಸಿದ್ದರಾಮಯ್ಯನವರು ಕೇವಲ ಮುಸ್ಲಿಂರಿಗಾಗಿ ಶಾದಿಭಾಗ್ಯ ಯೋಜನೆ ಜಾರಿಗೆ ತಂದರು. ಸ್ವತಃ ಮುಸ್ಲಿಂ ಸಮುದಾಯದವರು ಕೇಳದಿದ್ದರೂ ಟಿಪ್ಪು ಜಯಂತಿ ಆಚರಿಸುವ ನಿರ್ಧಾರ ತೆಗೆದುಕೊಂಡರು. ಇದರಿಂದ ಹಲವು ಕಡೆ ಹಿಂದೂ–ಮುಸ್ಲಿಂರು ಹೊಡೆದಾಡಿದ್ದು, ಅನೇಕ ಪ್ರಕರಣಗಳು ದಾಖಲಾಗಿವೆ. ಈ ಜಯಂತಿಯಿಂದ ಯಾರಿಗೆ ಲಾಭವಾಗಿದೆ ಎನ್ನುವುದನ್ನು ಸಿದ್ದರಾಮಯ್ಯನವರೇ ಹೇಳಬೇಕು. ಜಾತಿ ಹೆಸರಿನಲ್ಲಿ ಜನರನ್ನು ಒಡೆಯುತ್ತಿರುವವರು ಕಾಂಗ್ರೆಸ್ಸಿಗರು ಹೊರತು ಬಿಜೆಪಿಯವರಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.