ADVERTISEMENT

ಪೌರಾಡಳಿತ ಇಲಾಖೆಯಲ್ಲಿ ಖಾಲಿ ಹುದ್ದೆ: ತನಿಖೆಗೆ ‘ಲೋಕಾ’ ಆದೇಶ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2025, 20:03 IST
Last Updated 17 ಏಪ್ರಿಲ್ 2025, 20:03 IST
<div class="paragraphs"><p>‘ಲೋಕಾ’</p></div>

‘ಲೋಕಾ’

   

ಬೆಂಗಳೂರು: ನಗರಾಭಿವೃದ್ಧಿ ಇಲಾಖೆಯ ಅಧೀನದ ಪೌರಾಡಳಿತ ಇಲಾಖೆಯಲ್ಲಿ ಶೇ 50ರಷ್ಟು ಹುದ್ದೆಗಳು ಖಾಲಿ ಇದ್ದು, ಅಧಿಕಾರಿಗಳನ್ನು ಅನಗತ್ಯವಾಗಿ ಸ್ಥಳ ನಿರೀಕ್ಷಣೆಯಲ್ಲಿ ಇರಿಸಿರುವ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ ಅವರು ಆದೇಶಿಸಿದ್ದಾರೆ.

ಮಂಡ್ಯದ ಜಗದೀಶ್.ಎಂ.ಎಸ್‌ ಅವರು ಸಲ್ಲಿಸಿದ್ದ ದೂರನ್ನು ಪರಿಶೀಲಿಸಿ, ತನಿಖೆಗೆ ಆದೇಶಿಸಲಾಗಿದೆ ಎಂದು ಲೋಕಾಯುಕ್ತವು ತಿಳಿಸಿದೆ.

ADVERTISEMENT

ಖಾಲಿ ಹುದ್ದೆಗಳಿಗೆ ನಿಯೋಜನೆ ಮಾಡಲು ಪೌರಾಡಳಿತ ಇಲಾಖೆಯಲ್ಲಿ ಅರ್ಹ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರೂ, ಅವರನ್ನು ಕಡ್ಡಾಯ ನಿರೀಕ್ಷಣೆಯಲ್ಲಿ ಇರಿಸಲಾಗಿದೆ. ಒಂದು ವರ್ಷದಿಂದ ಅವರಿಂದ ಯಾವುದೇ ಕೆಲಸ ಮಾಡಿಸಿಕೊಳ್ಳದೆ, ವೇತನ ಪಾವತಿ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯ ವೇಳೆ ಗೊತ್ತಾಗಿದೆ ಎಂದು ಲೋಕಾಯುಕ್ತ ತಿಳಿಸಿದೆ.

ಹಿರಿಯ ಶ್ರೇಣಿಯ ಅಧಿಕಾರಿಗಳು ಲಭ್ಯವಿದ್ದರೂ ಅವರನ್ನು ಸ್ಥಳ ನಿರೀಕ್ಷಣೆಯಲ್ಲಿ ಇರಿಸಿ, ಕಿರಿಯ ಶ್ರೇಣಿಯ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಈ ಸಂಬಂಧ ಜಾರಿಯಲ್ಲಿರುವ ಸರ್ಕಾರದ ನಿರ್ಬಂಧಗಳನ್ನು ಉಲ್ಲಂಘಿಸಲಾಗಿದೆ. ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮಾಡದೇ ಇರುವ ಕಾರಣ ಬೀದಿ ದೀಪ ನಿರ್ವಹಣೆ, ಕಸ ವಿಲೇವಾರಿ, ನೀರು ಸರಬರಾಜು ಮತ್ತಿತರ ಕರ್ತವ್ಯಗಳಿಗೆ ತೊಡಕಾಗಿದೆ ಎಂದು ಲೋಕಾಯುಕ್ತ ತಿಳಿಸಿದೆ.

ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ವರದಿ ತರಿಸಿಕೊಳ್ಳಿ. ಇಲಾಖೆಯ ಕಾರ್ಯದರ್ಶಿ ಮತ್ತು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಂದ ಆಕ್ಷೇಪಣೆಯನ್ನೂ ಪಡೆದುಕೊಳ್ಳಿ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ನಿರ್ದೇಶನ ನೀಡಿದ್ದಾರೆ ಎಂದು ಲೋಕಾಯುಕ್ತ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.