ADVERTISEMENT

ಪ್ರೇಯಸಿಯ ಸಾವಿಗೆ ಕಾರಣವಾದ ಗರ್ಭಪಾತ

ಶವ ಸುಡಲು ತೆಲಂಗಾಣದ ಬಂಕ್‌ನಲ್ಲಿ ಪೆಟ್ರೋಲ್‌ ಖರೀದಿ

ಮನೋಜ ಕುಮಾರ್ ಗುದ್ದಿ
Published 12 ಸೆಪ್ಟೆಂಬರ್ 2019, 15:22 IST
Last Updated 12 ಸೆಪ್ಟೆಂಬರ್ 2019, 15:22 IST
ರವಿಕುಮಾರ್‌
ರವಿಕುಮಾರ್‌   

ಕಲಬುರ್ಗಿ: ತೆಲಂಗಾಣದ ಗಡಿಯಲ್ಲಿ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾದಕಲಬುರ್ಗಿ ವಿದ್ಯಾರ್ಥಿನಿಯ ಶವಕ್ಕೆ ಸಂಬಂಧಪಟ್ಟ ಪ್ರಕರಣದಲ್ಲಿ ಗುರುವಾರ ಮತ್ತಷ್ಟು ಸಂಗತಿಗಳು ಹೊರಬಿದ್ದಿವೆ.

ಆರು ತಿಂಗಳ ಗರ್ಭಿಣಿಯಾಗಿದ್ದ,ಇಲ್ಲಿನ ಕುವೆಂಪು ನಗರದ ಫೈನ್‌ಆರ್ಟ್‌ ವಿದ್ಯಾರ್ಥಿನಿ ಶಿಬಾರಾಣಿ (22) ಅವರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸುವ ಯತ್ನ ನಡೆದಿತ್ತಾದರೂ ಅದು ವಿಫಲವಾಗಿತ್ತು ಎಂಬುದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.

‘ಸೆಪ್ಟೆಂಬರ್‌ 3ರಂದು ಬೆಳಿಗ್ಗೆ ಮನೆಯಿಂದ ಹೊರಹೋಗಿದ್ದಶಿಬಾರಾಣಿ, ಪ್ರಿಯಕರ ರವಿಕುಮಾರ್ ಸೂಚನೆಯಂತೆ ಗರ್ಭಪಾತ ಮಾಡಿಸಿಕೊಳ್ಳಲು ಸಮ್ಮತಿಸಿದ್ದರು. ‌ಖಾಸಗಿ ಆಸ್ಪತ್ರೆಗೆ ತೆರಳಿ ತಾವು ದಂಪತಿ ಎಂದು ಸುಳ್ಳು ಹೇಳಿ ಗರ್ಭಪಾತ ಮಾಡಿಸಿಕೊಳ್ಳಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ನೀಡಿದ ಔಷಧಿ
ಯಿಂದಾಗಿ ಆರೋಗ್ಯದಲ್ಲಿ ಏರುಪೇರಾಗಿತ್ತು. ವಿಪರೀತ ರಕ್ತಸ್ರಾವವೂ ಆಗಿತ್ತು. ಕ್ಷಣದಿಂದ ಕ್ಷಣಕ್ಕೆ ಶಿಬಾರಾಣಿ ಆರೋಗ್ಯ ಹದಗೆಡುತ್ತಿದ್ದುದನ್ನು ಗಮನಿಸಿದ ವೈದ್ಯರು ತಕ್ಷಣವೇ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚನೆ ನೀಡಿದ್ದರು’ ಎಂಬುದು ಪೊಲೀಸ್‌ ಮೂಲಗಳ ಮಾಹಿತಿ.

ADVERTISEMENT

‘ವೈದ್ಯರ ಸೂಚನೆಯನ್ನು ರವಿಕುಮಾರ್‌ ನಿರ್ಲಕ್ಷಿಸಿದ್ದ. ಇದರಿಂದಾಗಿ ಗರ್ಭಪಾತ ಮಾಡುವ ಸಂದರ್ಭದಲ್ಲೇ ಶಿಬಾರಾಣಿ ಕೊನೆಯುಸಿರೆಳೆದಿದ್ದರು. ಹೀಗಾಗಿ ಭ್ರೂಣವನ್ನು ಪೂರ್ಣ ಹೊರತೆಗೆಯಲು ಆಗಿರಲಿಲ್ಲ. ಆದರೆ, ಭ್ರೂಣದ ಸ್ವಲ್ಪ ಭಾಗವಷ್ಟೇ ಹೊರಬಂದಿತ್ತು. ಇದರಿಂದ ಇನ್ನಷ್ಟು ಗಾಬರಿಯಾದ ರವಿಕುಮಾರ್‌, ಶಿಬಾರಾಣಿ ಶವವನ್ನು ಬೇರೆಡೆ ಸಾಗಿಸಲು ನಿರ್ಧರಿಸಿದ. ಅದಕ್ಕಾಗಿ ತನ್ನ ಗೆಳೆಯ ನಂದೂರ ಗ್ರಾಮದ ರಾಕೇಶ ಬನಸೋಡೆಯನ್ನು ಫೋನ್‌ ಮಾಡಿ ಕರೆಸಿಕೊಂಡಿದ್ದ’ ಎಂಬುದು ಪೊಲೀಸರ ಹೇಳಿಕೆ.

‘ಯುವತಿಯ ಶವವನ್ನು ಕೆಂಪು ಕಾರಿನಲ್ಲಿ ಹಾಕಿಕೊಂಡು, ಕಲಬುರ್ಗಿಯಲ್ಲಿಯೇ ಅಂತ್ಯಸಂಸ್ಕಾರ ನಡೆಸಲು ಯತ್ನಿಸಿದ್ದಾರೆ.ಆದರೆ, ಸಾಧ್ಯವಾಗಲಿಲ್ಲ. ದೂರ ಪ್ರದೇಶಕ್ಕೆ ಒಯ್ದು ದಫನ್‌ ಮಾಡಿದರೆ ಯಾರಿಗೂ ಸಂದೇಹ ಬರುವುದಿಲ್ಲ ಎಂಬ ಉದ್ದೇಶದಿಂದ ರವಿಕುಮಾರ್‌ ಹಾಗೂ ರಾಕೇಶ ಕಲಬುರ್ಗಿಯಿಂದ ಸೇಡಂ, ಕೋಸಗಿ ಮಾರ್ಗವಾಗಿ ತೆಲಂಗಾಣದ ಪರಗಿ ಗ್ರಾಮದ ಹೊರವಲಯ ತಲುಪಿದ್ದಾರೆ. ಅಲ್ಲೇ ಸಮೀಪದಲ್ಲಿದ್ದ ಬಂಕ್‌ನಿಂದ ಪೆಟ್ರೋಲ್‌ ಖರೀದಿಸಿದ್ದಾರೆ. ಹೆದ್ದಾರಿ ಪಕ್ಕದ ಕಂದಕದಲ್ಲಿ ಶಿಬಾರಾಣಿ ಶವವನ್ನು ಎಸೆದು ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾರೆ. ಅಲ್ಲಿಂದ ವಾಪಸ್‌ ಕಲಬುರ್ಗಿಗೆ ಬಂದಿದ್ದಾರೆ’ ಎಂಬುದು ಪೊಲೀಸರ ವಿವರಣೆ.

ಎರಡು ದಿನಗಳ ಬಳಿಕ ಅಂತ್ಯಕ್ರಿಯೆ: ಸೆಪ್ಟೆಂಬರ್‌ 5ರಂದು ಪರಗಿ ಹೊರವಲಯದಲ್ಲಿ ಅರೆಬೆಂದ ಶವ ಇರುವುದನ್ನು ಗಮನಿಸಿದ ಸ್ಥಳೀಯರೊಬ್ಬರು ಪರಗಿಯ ಪೊಲೀಸರ ಗಮನಕ್ಕೆ ತಂದಿದ್ದಾರೆ.ಅಪರಿಚಿತ ವ್ಯಕ್ತಿಯ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಅಲ್ಲಿಯಪೊಲೀಸರು ಎರಡು ದಿನ ಕಾಯ್ದಿದ್ದಾರೆ. ವಾರಸುದಾರರು ಯಾರೂ ಬಾರದೇ ಇದ್ದಾಗ ಅಲ್ಲಿಯೇ ಅಂತ್ಯಸಂಸ್ಕಾರ ಮಾಡಿದ್ದಾರೆ.

‘ಶಿಬಾರಾಣಿ ಅವರ ಶವ ಸುಟ್ಟ ಪ್ರಕರಣವನ್ನು ಪರಗಿ ಠಾಣೆಯಿಂದ ಕಲಬುರ್ಗಿಯ ಬ್ರಹ್ಮಪುರ ಠಾಣೆಗೆ ವರ್ಗಾಯಿಸುವಂತೆ ಕಲಬುರ್ಗಿ ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ ಅವರು ತೆಲಂಗಾಣ ಪೊಲೀಸರಿಗೆ ಮನವಿ ಮಾಡಿದ್ದಾರೆ. ಪ್ರಕರಣ ವರ್ಗಾವಣೆಯಾದ ನಂತರ ಮುಂದಿನ ಪ್ರಕ್ರಿಯೆ ನಡೆಯಲಿದೆ’ ಎಂದು ಇಲ್ಲಿಯ ಬ್ರಹ್ಮಪುರ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಶ್ರೀಮಂತ ಇಲ್ಲಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.