ADVERTISEMENT

ಮೇ 23ರ ಮಧ್ಯರಾತ್ರಿ ಸಮ್ಮಿಶ್ರ ಸರ್ಕಾರ ಪತನ: ರೇಣುಕಾಚಾರ್ಯ

ಬಿಜೆಪಿ ಚುನಾವಣಾ ಪ್ರಚಾರ ಸಭೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 14:19 IST
Last Updated 16 ಏಪ್ರಿಲ್ 2019, 14:19 IST
ಹೊನ್ನಾಳಿಯಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಜನ
ಹೊನ್ನಾಳಿಯಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಜನ   

ಹೊನ್ನಾಳಿ: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ಮೇ 23ರಂದು ಮಧ್ಯರಾತ್ರಿ ರಾಜ್ಯದ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ಖಾಸಗಿ ಬಸ್‌ನಿಲ್ದಾಣದ ಎದುರಿನ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಲೋಕಸಭಾ ಚುನಾವಣೆಯಲ್ಲಿ 300 ಸ್ಥಾನಗಳನ್ನು ಗೆಲ್ಲುವ ಮೂಲಕ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ 22 ಸ್ಥಾನಗಳನ್ನು ಗೆಲ್ಲುವುದರಿಂದ ಫಲಿತಾಂಶ ಪ್ರಕಟಗೊಂಡ ಬಳಿಕ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಪರಸ್ಪರ ಹೊಡೆದಾಡಿಕೊಳ್ಳಲಿದ್ದಾರೆ. ಮಧ್ಯ ರಾತ್ರಿ ದೇಶಕ್ಕೆ ಸ್ವಾತಂತ್ರ್ಯ ಬಂದ ರೀತಿಯಲ್ಲೇ ಅಪ್ಪ–ಮಕ್ಕಳು–ಸೊಸೆಯ ಈ ಸರ್ಕಾರ ಪತನಗೊಂಡು, ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಬಿ.ಎಸ್‌. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ. ಸಮ್ಮಿಶ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಚುನಾವಣೆ ಬಳಿಕ ವಾಪಸ್‌ ಪಡೆಯಲಾಗುತ್ತದೆ ಎಂದು ಕಾಂಗ್ರೆಸ್‌ನಲ್ಲಿರುವ ನನ್ನ ಆತ್ಮೀಯ ಮುಖಂಡರು ಸುಳಿವು ನೀಡಿದ್ದಾರೆ’ ಎಂದು ರೇಣುಕಾಚಾರ್ಯ ‘ಪಟಾಕಿ’ ಸಿಡಿಸಿದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌, ‘ಹಿಂದುಳಿದ ವರ್ಗದವರಿಗೆ ಟಿಕೆಟ್‌ ಕೊಡಲಾಗಿದೆ ಎಂದು ಜಿಲ್ಲೆಯ ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ. ಆದರೆ, ಈ ಚುನಾವಣೆಯಲ್ಲಿ ಎಚ್‌.ಬಿ. ಮಂಜಪ್ಪ ಅವರನ್ನು ಹರಕೆಯ ಕುರಿಯನ್ನಾಗಿ ಮಾಡಲಾಗಿದೆ. 1996ರಲ್ಲಿ ಹಿಂದುಳಿದ ವರ್ಗದ ನಾಯಕ ಚನ್ನಯ್ಯ ಒಡೆಯರ್‌ ಅವರ ಬೆನ್ನಿಗೆ ಚೂರಿ ಹಾಕಿ ಸೋಲಿಸಿರುವುದಕ್ಕೆ ಯಾರೂ ಇನ್ನೂ ಉತ್ತರ ಕೊಟ್ಟಿಲ್ಲ. 2013ರ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕ್ಷೇತ್ರದ ಟಿಕೆಟ್‌ ಅನ್ನು ಸೈಯದ್‌ ಸೈಫುಲ್ಲಾ ಅವರಿಗೆ ನೀಡಲಾಗಿತ್ತು. ಅದನ್ನು ವಾಪಸ್‌ ಪಡೆಯುವ ಮೂಲಕ ಕಾಂಗ್ರೆಸ್‌ ಅಭ್ಯರ್ಥಿಯೇ ಇಲ್ಲದಂತೆ ಮಾಡಿದ್ದರು. ಈಗ ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್‌ನವರು ಹಿಂದುಳಿದ ವರ್ಗದ, ಅಲ್ಪಸಂಖ್ಯಾತರ ಮತವನ್ನು ಕೇಳುತ್ತಾರೆ’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಮುಖಂಡರಾದ ಅಜ್ಜಂಪೂರಶೆಟ್ರು ಮೃತ್ಯುಂಜಯ, ಸುರೇಂದ್ರ ಮೊಯಿಲಿ, ಶಾಮನೂರು ಗೀತಾ ಮುರುಗೇಶ್‌ ಅವರು ಅಮಿತ್‌ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಿದರು.

ಶಾಸಕ ಕರುಣಾಕರ ರೆಡ್ಡಿ, ಮಾಜಿ ಶಾಸಕ ಬಿ.ಪಿ. ಹರೀಶ್‌, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎಚ್‌.ಎನ್‌. ಶಿವಕುಮಾರ್‌, ಮುಖಂಡರಾದ ಅಣಬೇರು ಜೀವನಮೂರ್ತಿ, ಗಾಯತ್ರಿ ಸಿದ್ದೇಶ್ವರ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸುರೇಂದ್ರನಾಯ್ಕ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಆರ್‌. ಮಹೇಶ್‌, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಜಿ. ರಾಜಪ್ಪ ಇದ್ದರು. ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಶಾಂತರಾಜ್‌ ಪಾಟೀಲ ನಿರೂಪಿಸಿದರು. ದಿಡಗೂರು ಫಾಲಾಕ್ಷಪ್ಪ ಸ್ವಾಗತಿಸಿದರು.

ಯಕ್ಷಗಾನ ಮಾಡುವ ಸಿದ್ದರಾಮಯ್ಯ: ಆಯನೂರು ವಾಗ್ದಾಳಿ

‘ಅಂಗಚೇಷ್ಟೆ ಮೂಲಕ ಯಕ್ಷಗಾನ ಮಾಡುತ್ತ ನರೇಂದ್ರ ಮೋದಿ ಅವರನ್ನು ಟೀಕಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೇ ಮಾನ–ಮರ್ಯಾದೆ ಇಲ್ಲ’ ಎಂದು ದಾವಣಗೆರೆ ಕ್ಷೇತ್ರದ ಬಿಜೆಪಿ ಚುನಾವಣಾ ಉಸ್ತುವಾರಿ ಮಂಜುನಾಥ ಆಯನೂರು ವಾಗ್ದಾಳಿ ನಡೆಸಿದರು.

‘ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಮೋದಿ ಅವರಿಗೆ ಮಾನ–ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ತೋಪೆದ್ದು ಹೋಗಿದೆ. ಮುಖ್ಯಮಂತ್ರಿಯಾಗಿದ್ದವರಿಗೆ ರಾಜ್ಯದಲ್ಲಿ ಪಕ್ಷವನ್ನು ಗೆಲ್ಲಿಸುವ ಶಕ್ತಿ ಇಲ್ಲವಾಗಿದೆ. ನರೇಂದ್ರ ಮೋದಿ ಮೂರು ಬಾರಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದರು. ಈಗ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಅವರೇ ಹಿಂದುಳಿದವರ ನಿಜವಾದ ನಾಯಕರಾಗಿದ್ದು, ಅವರನ್ನು ಟೀಕಿಸುವ ನೈತಿಕತೆ ಕಾಂಗ್ರೆಸ್‌ ನಾಯಕರಿಗೆ ಇಲ್ಲ’ ಎಂದು ಹೇಳಿದರು.

ರಾಹುಲ್‌ ಗಾಂಧಿ, ದೇವೇಗೌಡರ ಕುಟುಂಬ ರಾಜಕಾರಣದ ಬಗೆಗೂ ಅವರು ಹರಿಹಾಯ್ದರು.

ಮತ ಹಾಕದಿದ್ದರೆ ಜೋಕೆ!

‘ಗೂಂಡಾಗಿರಿಗೆ ಹೆದರುವುದಿಲ್ಲ. ಹೊನ್ನಾಳಿ ಮತದಾರರು ಸಿಂಹದ ಮರಿಗಳಿದ್ದಂತೆ. ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ 245 ಬೂತ್‌ಗಳಿದ್ದು, ಯಾವುದರಲ್ಲಿ ಕಡಿಮೆ ಮತ ಬಂದಿದೆ ಎಂಬುದು ನನಗೆ ತಿಳಿಯುತ್ತದೆ. ಹೀಗಾಗಿ ತಪ್ಪದೇ ಬಿಜೆಪಿಗೆ ಮತ ಹಾಕಿ’ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ಹೊನ್ನಾಳಿ ಕ್ಷೇತ್ರದ ಪ್ರತಿ ಬೂತ್‌ನಲ್ಲೂ ಸಿದ್ದೇಶ್ವರ ಅವರಿಗೆ ಶೇ 70ರಿಂದ 80ರಷ್ಟು ಮತಗಳು ಬರಬೇಕು ಎಂದು ಶಾಸಕರು ಕಾರ್ಯಕರ್ತರಿಗೆ ಫರ್ಮಾನು ಹೊರಡಿಸಿದರು.

ಜನಬಲದಿಂದಲೇ ಗೆಲುವು: ಸಿದ್ದೇಶ್ವರ

‘ನನ್ನ ಬಗ್ಗೆ ಕಾಂಗ್ರೆಸ್‌ ಅಪಪ್ರಚಾರ ನಡೆಸುತ್ತಿದೆ. ಈ ಹಿಂದೆ ಮೂರು ಬಾರಿಯೂ ಜನಬಲದಿಂದ ಗೆದ್ದಿದ್ದೇನೆಯೇ ಹೊರತು ಹಣ ಬಲದಿಂದ ಅಲ್ಲ; ಈ ಬಾರಿಯೂ ಜನ ಬಲದಿಂದಲೇ ಮತ್ತೆ ಗೆಲ್ಲುತ್ತೇನೆ’ ಎಂದು ಬಿಜೆಪಿ ಅಭ್ಯರ್ಥಿ, ಸಂಸದ ಜಿ.ಎಂ. ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಜಿಲ್ಲೆಗೆ ತಂದ ಅನುದಾನಗಳನ್ನು ಪಟ್ಟಿ ಮಾಡಿದ ಸಿದ್ದೇಶ್ವರ, ‘ಚುನಾವಣೆಗೆ ಆರು ದಿನಗಳು ಮಾತ್ರ ಬಾಕಿ ಉಳಿದಿದ್ದು, ಕಾರ್ಯಕರ್ತರು ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ಒಂದು ಗಂಟೆ ಕಾಲ ಮನೆ ಮನೆಗೆ ತೆರಳಿ ಜನರಿಗೆ ಕೇಂದ್ರ ಸರ್ಕಾರದ ಸಾಧನೆಯನ್ನು ಮನವರಿಕೆ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

‘ಚುನಾವಣೆ ಬಂದಾಗ ನಾಟಕ’

‘ಚುನಾವಣೆ ಬಂದಾಗ ಸಚಿವರಾದ ಎಂ.ಬಿ. ಪಾಟೀಲ ಹಾಗೂ ಡಿ.ಕೆ. ಶಿವಕುಮಾರ್‌ ಪರಸ್ಪರ ಟೀಕಿಸುವ ಮೂಲಕ ನಾಟಕ ಆಡುತ್ತಿದ್ದಾರೆ’ ಎಂದು ರೇಣುಕಾಚಾರ್ಯ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಕಾಂಗ್ರೆಸ್‌ ತಪ್ಪು ಮಾಡಿದೆ ಎಂದು ಶಿವಕುಮಾರ್‌ ಈಗ ಕ್ಷಮೆ ಕೇಳುತ್ತಿದ್ದಾರೆ. ಹಿಂದಿನ ಸರ್ಕಾರದಲ್ಲೂ ಸಚಿವರಾಗಿದ್ದ ಅವರು ಆಗಲೇ ಇದನ್ನು ತಡೆಯಬಹುದಾಗಿತ್ತು. ಬಳ್ಳಾರಿ ಉಪ ಚುನಾವಣೆ ಸಂದರ್ಭದಲ್ಲಿ ಹಾಗೂ ಈಗ ಶಿವಕುಮಾರ್‌ ಧರ್ಮದ ವಿಚಾರದಲ್ಲಿ ನಾಟಕ ಮಾಡುತ್ತಿದ್ದಾರೆ. ಸರ್ಕಾರ ಪತನಗೊಂಡು ಅಧಿಕಾರ ಕಳ್ಳೆದುಕೊಳ್ಳುವ ಭೀತಿಯಿಂದ ಎಂ.ಬಿ. ಪಾಟೀಲರು ಹುಚ್ಚರಾಗಿದ್ದಾರೆ’ ಎಂದು ರೇಣುಕಾಚಾರ್ಯ ವ್ಯಂಗ್ಯವಾಡಿದರು.

ಯಾರು ಏನೆಂದರು?

* ಅಪ್ಪ (ಶಾಮನೂರು ಶಿವಶಂಕರಪ್ಪ)– ಮಗನಿಗೆ (ಎಸ್‌.ಎಸ್‌. ಮಲ್ಲಿಕಾರ್ಜುನ) ಟಿಕೆಟ್‌ ಸಿಗದಿದ್ದರೆ ಕಾಂಗ್ರೆಸ್‌ನಲ್ಲಿ ಬೇರೆಯವರು ಹೀನಾಯವಾಗಿ ಸೋಲುತ್ತಾರೆ ಎಂಬುದನ್ನು ತೋರಿಸಲು ಹೊರಟಿದ್ದಾರೆ. ಹೀಗಾಗಿ ಶಾಮನೂರು ಹಾಗೂ ಮಲ್ಲಿಕಾರ್ಜುನ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ.

– ಯಶವಂತರಾವ್‌ ಜಾಧವ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

* ಹದಿನೈದು ಪಕ್ಷಗಳ ನರಿ ಬುದ್ಧಿಯುಳ್ಳವರು ಪ್ರಧಾನಿ ಆಗಲು ಹೊರಟಿದ್ದಾರೆ. ಆದರೆ, ಸಿಂಹದಂತಿರುವ ಪ್ರಧಾನಿ ನರೇಂದ್ರ ಮೋದಿಗೆ ಈ ನರಿಗಳು ಯಾವ ಲೆಕ್ಕಕ್ಕೂ ಅಲ್ಲ.

– ಮಾಡಾಳ್‌ ವಿರೂಪಾಕ್ಷಪ್ಪ, ಚನ್ನಗಿರಿ ಶಾಸಕ

* ತಾಂಡಾ ಅಭಿವೃದ್ಧಿ ನಿಗಮ ರಚಿಸುವ ಮೂಲಕ ಯಡಿಯೂರಪ್ಪ ಸರ್ಕಾರ ಬಂಜಾರ ಸಮುದಾಯದ ಅಭಿವೃದ್ಧಿಗೆ ಮುಂದಾಗಿತ್ತು. ಸೂರಗೊಂಡನಕೊಪ್ಪವನ್ನೂ ಅಭಿವೃದ್ಧಿಗೊಳಿಸಿದೆ. ಹೀಗಾಗಿ ಬಂಜಾರರು ಬಿಜೆಪಿ ಬೆಂಬಲಿಸಬೇಕು.

– ಬಸವರಾಜ ನಾಯ್ಕ, ಮಾಜಿ ಶಾಸಕ

* ಕಾಂಗ್ರೆಸ್‌ ದಲಿತರನ್ನು ವೋಟ್‌ ಬ್ಯಾಂಕ್‌ ಆಗಿ ಬಳಸಿಕೊಂಡಿದೆಯೇ ಹೊರತು, ಅವರನ್ನು ಉದ್ಧಾರ ಮಾಡಿಲ್ಲ. ಯಡಿಯೂರಪ್ಪ ಸರ್ಕಾರದಲ್ಲೇ ಹರಿಜನ ಕೇರಿ, ಗಿರಿಜನ ಪ್ರದೇಶಗಳು ಅಭಿವೃದ್ಧಿಗೊಂಡಿವೆ.

– ಪ್ರೊ. ಎನ್‌. ಲಿಂಗಣ್ಣ, ಮಾಯಕೊಂಡ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.