ADVERTISEMENT

ಮದ್ಯಪಾನ ನಿಷೇಧಕ್ಕೆ ಒತ್ತಾಯ: ಮುಖ್ಯಮಂತ್ರಿಗೆ ಮಾದಾರ ಚನ್ನಯ್ಯ ಸ್ವಾಮೀಜಿ ಪತ್ರ

​ಪ್ರಜಾವಾಣಿ ವಾರ್ತೆ
Published 3 ಮೇ 2020, 14:58 IST
Last Updated 3 ಮೇ 2020, 14:58 IST
ಮಾದಾರ ಚನ್ನಯ್ಯ ಸ್ವಾಮೀಜಿ
ಮಾದಾರ ಚನ್ನಯ್ಯ ಸ್ವಾಮೀಜಿ   

ಚಿತ್ರದುರ್ಗ: ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದ ರಾಜ್ಯ ಸರ್ಕಾರದ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿರುವ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ‘ಶಾಶ್ವತ ಮದ್ಯಪಾನ ನಿಷೇಧ’ಕ್ಕೆ ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಭಾನುವಾರ ಪತ್ರ ಬರೆದಿದ್ದಾರೆ.

ಲಾಕ್‌ಡೌನ್‌ ಕಾರಣಕ್ಕೆ ಅಸಂಘಟಿತ ಕಾರ್ಮಿಕರು ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮದ್ಯ ಖರೀದಿಗೆ ವ್ಯಸನಿಗಳು ಆಹಾರ ಧಾನ್ಯ ಮಾರಾಟ ಮಾಡಲು ಮುಂದಾಗುವ ಸಾಧ್ಯತೆ ಇದೆ. ವಿರೋಧದ ನಡುವೆಯೂ ಮದ್ಯ ಮಾರಾಟಕ್ಕೆ ಮುಂದಾದರೆ ಜನಾಂದೋಲನ ರೂಪುಗೊಳ್ಳಲಿದೆ. ಈ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

‘ಲಾಕ್‌ಡೌನ್‌ ಸಮಯದಲ್ಲಿ ಮದ್ಯ ಮಾರಾಟ ನಿಷೇಧ ಮಾಡಿರುವುದಕ್ಕೆ ಸಾಕಷ್ಟು ಕುಟುಂಬಗಳಲ್ಲಿ ನೆಮ್ಮದಿ ನೆಲೆಸಿದೆ. ದುಶ್ಚಟಗಳ ದಾಸರಾಗಿದ್ದವರು ಕುಡಿತದ ಹಿಡಿತದಿಂದ ಹೊರ ಬಂದಿದ್ದಾರೆ. ಬಡ ಕೂಲಿ ಕಾರ್ಮಿಕರಿಗೆ ದುಡಿಯುವ ಅವಕಾಶಗಳು ಕಡಿಮೆಯಾಗಬಹುದು. ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದರೆ ಹಲವು ಕುಟುಂಬಗಳು ಬೀದಿಗೆ ಬರಲಿವೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಆದಾಯ ಸಂಗ್ರಹದ ನೆಪದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸುವುದು ಸರಿಯಲ್ಲ. ಆದಾಯಕ್ಕಾಗಿ ಸರ್ಕಾರವೇ ಜನರನ್ನು ದುಶ್ಚಟಗಳಿಗೆ ನೂಕುವುದು ತಪ್ಪು. ಜನರ ಆರೋಗ್ಯ, ಸಮಾಜದ ಹಿತದೃಷ್ಟಿಯಿಂದ ಮದ್ಯಪಾನ ನಿಷೇಧವೇ ಸೂಕ್ತ. ನಿಷೇಧದ ಬಳಿಕ ಉಂಟಾಗಬಹುದಾದ ಸವಾಲುಗಳನ್ನು ಎದುರಿಸಲು ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.