ಬೆಂಗಳೂರು: ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಸಾವಿಗೆ ನಿಖರ ಕಾರಣವೇನು ಎಂಬುದನ್ನು ತಿಳಿಯಲು ನಾರಾಯಣ ಹೃದಯಾಲಯದ ಡಾ. ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ತಜ್ಞರ ಸಮಿತಿಯನ್ನು ರಚಿಸಿದೆ.
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರು ಸಂಚಾಲಕರಾಗಿರುವ ಈ ಸಮಿತಿಯಲ್ಲಿ ಆರೋಗ್ಯ ಇಲಾಖೆಯ ನಿರ್ದೇಶಕ, ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ಡಾ. ಸೀತಾರಾಮ್ ಭಟ್, ನಿಮ್ಹಾನ್ಸ್‌ನ ಡಾ. ವಿ. ರವಿ, ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯ ಡಾ. ನಾಗರಾಜ ಇದ್ದಾರೆ. ಎರಡು ವಾರಗಳಲ್ಲಿ ವರದಿ ನೀಡುವಂತೆ ಸಮಿತಿಗೆ ಗಡುವು ನೀಡಲಾಗಿದೆ.
ಈಗಾಗಲೇ ವಿಚಾರಣೆ ಆರಂಭಿಸಿರುವ ಸಮಿತಿಯು ಕಾಂಟಿನೆಂಟಲ್ ಆಸ್ಪತ್ರೆಗೆ ಭೇಟಿ ವೈದ್ಯಕೀಯ ದಾಖಲೆಗಳನ್ನು ಪಡೆದುಕೊಂಡು ಪರಿಶೀಲನೆ ನಡೆಸುತ್ತಿದೆ.
ಹೈದರಾಬಾದ್‌ನ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಉಪ ನಿರ್ದೇಶಕರಾಗಿದ್ದ ಮಧುಕರ್, ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಡಿ. 25ರಂದು ನಿಧನರಾಗಿದ್ದರು. ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂದು ಗುರುತಿಸಿಕೊಂಡಿದ್ದ ಮಧುಕರ್ ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.