ADVERTISEMENT

ಬಿಜೆಪಿ ಹೋರಾಟ ಹಾಸ್ಯಾಸ್ಪದ: ಎಚ್.ಸಿ. ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 15:57 IST
Last Updated 8 ಏಪ್ರಿಲ್ 2025, 15:57 IST
ಎಚ್.ಸಿ. ಮಹದೇವಪ್ಪ
ಎಚ್.ಸಿ. ಮಹದೇವಪ್ಪ   

ಬೆಂಗಳೂರು: ‘ಕೇಂದ್ರ ಸರ್ಕಾರ ಅಡುಗೆ ಸಿಲಿಂಡರ್ ದರವನ್ನು ₹50 ಏರಿಕೆ ಮಾಡಿದೆ. ಈ ಸಂದರ್ಭದಲ್ಲಿ ಬೆಲೆ ಏರಿಕೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತಿರುವುದು ಹಾಸ್ಯಾಸ್ಪದ’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅಭಿಪ್ರಾಯಪಟ್ಟಿದ್ದಾರೆ.

‘ಜನರ ಪರವಾಗಿ ಕೆಲಸ ಮಾಡುವ ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡುವ ಬದಲು ಅಡುಗೆ ಅನಿಲ, ಆಹಾರ ಧಾನ್ಯ ಮತ್ತು ತೈಲ ಬೆಲೆ ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಲಿ. ಜೊತೆಗೆ, ರಾಜ್ಯದ ತೆರಿಗೆ ಪಾಲು ಕೇಳುವ ಮನಸ್ಸು ಮಾಡಲಿ’ ಎಂದು ಒತ್ತಾಯಿಸಿದ್ದಾರೆ.

‘ಹಲವು ಭರವಸೆಗಳನ್ನು ನೀಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ಸರ್ಕಾರ, ಬೆಲೆ ಏರಿಕೆಯ ಪ್ರವಾಹವನ್ನೇ ಹರಿಸಿದೆ. ಕಚ್ಚಾತೈಲದ ಬೆಲೆ ಕಡಿಮೆ ಇದ್ದರೂ ಪೆಟ್ರೋಲ್, ಡೀಸೆಲ್ ಬೆಲೆ ವಿಪರೀತ ಹೆಚ್ಚಿಸಿ ಜನರನ್ನು ಲೂಟಿದೆ. ಅವೈಜ್ಞಾನಿಕ ಜಿಎಸ್‌ಟಿ ಸುಲಿಗೆ, ಅಸಮರ್ಪಕ ತೆರಿಗೆ ನೀತಿಯ ಮೂಲಕ ಸಣ್ಣ ಪುಟ್ಟ ಉದ್ಯಮಿಗಳನ್ನು ಸುಲಿಗೆ ಮಾಡುತ್ತಿರುವ ಬಿಜೆಪಿಯವರಿಗೆ ತೆರಿಗೆ ಸಂಗ್ರಹಣೆ ಮಾಡುವುದು ಜನರಿಗಾಗಿ ಎಂಬ ಸಂಗತಿಯೇ ಮರೆತು ಹೋಗಿದೆ’ ಎಂದೂ ಟೀಕಿಸಿದ್ದಾರೆ.

ADVERTISEMENT

‘ರಾಜ್ಯದಲ್ಲಿ ಹಾಲಿನ ದರ ಏರಿಕೆಯಾದರೂ ಅದರ ಫಲಾನುಭವಿಗಳು ರೈತರೇ ಆಗಿದ್ದಾರೆ. ಅಲ್ಲದೆ, ಬಿಜೆಪಿಗರ ಲೂಟಿ ಮತ್ತು ದುರಾಡಳಿತದಿಂದ ನಲುಗಿ ಹೋಗಿದ್ದ ಜನರಿಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಆರ್ಥಿಕ ಆಸರೆಯಾಗಿದೆ’ ಎಂದೂ ಅವರು ಹೇಳಿದ್ದಾರೆ.

‘ಕೇಂದ್ರದ ವಿರುದ್ಧ ಯಾತ್ರೆ ಮಾಡಲಿ’

‘ಬಿಜೆಪಿಯವರು ಕೇಂದ್ರ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಮಾಡಲಿ. ಮೋದಿಯವರ ವಿರುದ್ಧ ಯಾತ್ರೆ ಮಾಡಲಿ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ‘ಕೇಂದ್ರ ಸರ್ಕಾರ ಅಡುಗೆ ಅನಿಲ ಸಿಲಿಂಡರ್ ದರ ಹೆಚ್ಚಿಸಿದೆ. ಬಿಜೆಪಿಯವರೂ ಜನರ ಪರವಾಗಿ ಕೆಲಸ ಮಾಡಬೇಕಲ್ಲವೇ? ಜನಾಕ್ರೋಶ ಯಾತ್ರೆ ಮುಂದುವರೆಸಬೇಕೊ ಬೇಡವೊ ಎಂದು ಈಗ ಅವರು ನಿರ್ಧರಿಸಲಿ’ ಎಂದರು. ‘ರೈತರಿಗೆ ನೆರವಾಗುವ ಉದ್ದೇಶದಿಂದ ನಾವು (ರಾಜ್ಯ ಸರ್ಕಾರ) ಹಾಲಿನ ದರ ಹೆಚ್ಚಿಸಿದ್ದೇವೆಯೇ ಹೊರತು ಅದರಿಂದ ನಮಗೆ ಯಾವುದೇ ಲಾಭ ಇಲ್ಲ’ ಎಂದೂ ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.