ADVERTISEMENT

ಗೌಡರ ನಡೆ ನೆನಪಿಸಿದ ಮಹಾರಾಷ್ಟ್ರ

2006ರಲ್ಲಿ ಶಾಸಕರನ್ನು ಕರೆದುಕೊಂಡು ಹೋಗಿದ್ದ ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2019, 2:30 IST
Last Updated 24 ನವೆಂಬರ್ 2019, 2:30 IST
   

ಬೆಂಗಳೂರು: ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡಣವೀಸ್ ಹಾಗೂ ಅಜಿತ್ ಪವಾರ್ ಜೋಡಿ ರಾತ್ರೋರಾತ್ರಿ ನಡೆಸಿದ ‘ಕ್ಷಿಪ್ರ ಕ್ರಾಂತಿ’, 2006ರಲ್ಲಿ ಕರ್ನಾಟಕದಲ್ಲಿ ನಡೆದ ರಾಜಕೀಯ ಮೇಲಾಟದ ಬಗೆಗಿನ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

ಅಂದು ಜೆಡಿಎಸ್‌ ವರಿಷ್ಠಎಚ್.ಡಿ.ದೇವೇಗೌಡರ ಪಾತ್ರದಲ್ಲಿ ಇಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್ ಇದ್ದರೆ, ಎಚ್‌.ಡಿ. ಕುಮಾರಸ್ವಾಮಿ ಜಾಗದಲ್ಲಿ ಅಜಿತ್ ಅವರು ನಿಂತಿದ್ದಾರೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಡೆದಿದೆ.

2004ರಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ‘ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು’ ಘೋಷಣೆಯೊಂದಿಗೆ ಕಾಂಗ್ರೆಸ್‌ನ ಎನ್. ಧರ್ಮಸಿಂಗ್ ನೇತೃತ್ವದ ಸರ್ಕಾರಕ್ಕೆ ದೇವೇಗೌಡರು ಬೆಂಬಲ ನೀಡಿದರು. ಆಗ ಜೆಡಿಎಸ್‌ ಪ್ರತಿನಿಧಿಸುತ್ತಿದ್ದ ಸಿದ್ದರಾಮಯ್ಯ ಅವರು ಮೈತ್ರಿ ಸರ್ಕಾರ
ದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು.

ADVERTISEMENT

ಪಕ್ಷದಲ್ಲಿದ್ದೂ ಅಹಿಂದ ಸಂಘಟನೆ ಕಟ್ಟುತ್ತಿದ್ದಾರೆ ಎಂಬ ಮೇಲ್ನೋಟದ ಕಾರಣ ಮುಂದಿಟ್ಟು ಸಿದ್ದರಾಮಯ್ಯ ಅವರ ವಿರುದ್ಧ ಜೆಡಿಎಸ್‌ನಲ್ಲಿ ಟೀಕೆಗಳು ಆರಂಭವಾದವು. ಸಿದ್ದರಾಮಯ್ಯ ಅವರು ಆ ಕಾಲದಲ್ಲಿ ಪಕ್ಷದ ಶಾಸಕರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಆಪಾದನೆಯೂ ಪಕ್ಷದ ಯುವ ನಾಯಕರದ್ದಾಗಿತ್ತು. ಅದನ್ನೇ ತಮ್ಮ ರಾಜ್ಯ ರಾಜಕೀಯ ರಂಗ ಪ್ರವೇಶದ ಹೆದ್ದಾರಿಯಾಗಿ ಮಾಡಿಕೊಂಡ ಕುಮಾರಸ್ವಾಮಿ, ಪಕ್ಷದಲ್ಲಿ ತಮ್ಮದೇ ವರ್ಚಸ್ಸು ಬೆಳೆಸಿಕೊಂಡರು.

ಎಲ್ಲವೂ ಅಂದುಕೊಂಡಂತೆ–ಮಾತುಕತೆಯಂತೆ ನಡೆದಿದ್ದರೆ 30 ತಿಂಗಳ ಬಳಿಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಬೇಕಾಗಿತ್ತು. ಆದರೆ, ಅದಾಗಲಿಲ್ಲ. ಧರ್ಮಸಿಂಗ್‌ ಅವರು 20 ತಿಂಗಳು ಅಧಿಕಾರ ಪೂರೈಸುತ್ತಿದ್ದಂತೆ ಜೆಡಿಎಸ್‌ನಲ್ಲಿ ಕ್ಷಿಪ್ರ ದಂಗೆಗೆ ಕಾರ್ಯತಂತ್ರ ಅಣಿಯಾಗಿತ್ತು. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರ ಜತೆ ಮಾತುಕತೆ ನಡೆಸಿದ್ದ ಕುಮಾರ
ಸ್ವಾಮಿ, ತಮ್ಮ ಪಕ್ಷದ 38 ಶಾಸಕರನ್ನು ಒಗ್ಗೂಡಿಸಿಕೊಂಡು ರಾಜ್ಯಪಾಲರನ್ನು ಭೇಟಿಯಾದರು. ಧರ್ಮಸಿಂಗ್ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆಯುವುದಾಗಿ ಪತ್ರವನ್ನೂ ಕೊಟ್ಟರು.

ರಾಜಭವನದಿಂದ ಶಾಸಕರನ್ನು ಬಸ್ಸಿಗೆ ಹತ್ತಿಸಿಕೊಂಡು ಗೋವಾ ಕಡೆ ನಡೆದುಬಿಟ್ಟರು. ನಂತರ, ಬಿಜೆಪಿ ಶಾಸಕರ ಬೆಂಬಲ ಪಡೆದು ಸರ್ಕಾರವನ್ನು ರಚಿಸಿ ಮುಖ್ಯಮಂತ್ರಿಯೂ ಆದರು.

‘ಮಗ ನನ್ನ ಮಾತು ಕೇಳಲಿಲ್ಲ. ಕೋಮುವಾದಿ ಪಕ್ಷದ ಜತೆ ಕೈಜೋಡಿಸಿದ. ಅದನ್ನು ನಾನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ’ ಎಂದು ಅಲವತ್ತುಕೊಂಡ ದೇವೇಗೌಡರು, ನಾಲ್ಕಾರು ತಿಂಗಳು ಮಗನ ಜೊತೆ ಮಾತು ಬಿಟ್ಟರು. ತಮ್ಮ ಆಣತಿಯಂತೆ ವಿಧಾನಸಭಾಧ್ಯಕ್ಷರಾಗಿದ್ದ ಕೆ.ಆರ್. ಪೇಟೆ ಕೃಷ್ಣ ಅವರಿಗೆ ದೂರೊಂದನ್ನು ಕೊಟ್ಟು, ಬಿಜೆಪಿ ಜತೆ ಕೈಜೋಡಿಸಿದ ತಮ್ಮ ಪಕ್ಷದ ಶಾಸಕರನ್ನು ಅನರ್ಹಗೊಳಿಸುವಂತೆ ಪತ್ರ ಕೊಟ್ಟರು. ಗೌಡರ ಮಾತನ್ನು ಕೇಳುವವರೇ ಆಗಿದ್ದ ಕೃಷ್ಣ ಅವರು‍ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಈ ಶಾಸಕರನ್ನು ಅನರ್ಹಗೊಳಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳಲೇ ಇಲ್ಲ.

20 ತಿಂಗಳ ಬಳಿಕ ಬಿಜೆಪಿ ಅಧಿಕಾರ ಬಿಟ್ಟುಕೊಡಬೇಕಾಗಿದ್ದ ಕುಮಾರಸ್ವಾಮಿ, ‘ಬಿಜೆಪಿ ಜತೆ ಕೈಜೋಡಿಸಿ ನನ್ನ ತಂದೆಗೆ ನೋವುಂಟು ಮಾಡಿದ್ದೇನೆ. ಇನ್ನು ಮುಂದೆ ಅವರ ಹೇಳಿದಂತೆ ನಡೆಯುತ್ತೇನೆ’ ಎಂದು ಪಿತೃಪ್ರೇಮಪ್ರದರ್ಶಿಸಲಾರಂಭಿಸಿದರು.

ಪಿತೃವಾಕ್ಯ ಪರಿಪಾಲನೆ ಮಾಡಿದ ಕುಮಾರಸ್ವಾಮಿ ಬಿಜೆಪಿಗೆ ಅಧಿಕಾರ ಬಿಟ್ಟುಕೊಡಲೇ ಇಲ್ಲ. ಅಲ್ಪ ಅವಧಿಗೆ ಮುಖ್ಯಮಂತ್ರಿಯಾದ ಯಡಿಯೂರಪ್ಪ, ಜೆಡಿಎಸ್‌ ಬೆಂಬಲ ಸಿಗದೇ ಇದ್ದಾಗ ರಾಜೀನಾಮೆ ಕೊಟ್ಟು ಚುನಾವಣೆಗೆ ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.