ADVERTISEMENT

ಕಸ್ತೂರಿ ರಂಗನ್ ವರದಿ ಯಥಾವತ್‌ ಒಪ್ಪಿಕೊಳ್ಳಬೇಡಿ: ಮಲೆನಾಡು ಕರಾವಳಿ ಜನಪರ ಒಕ್ಕೂಟ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 22:34 IST
Last Updated 30 ಜುಲೈ 2023, 22:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕಸ್ತೂರಿ ರಂಗನ್‌ ವರದಿ ಜಾರಿಗೆ ಬದ್ಧ’ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು ನೀಡಿರುವ ಹೇಳಿಕೆಯಿಂದ ಮಲೆನಾಡು ನಿವಾಸಿಗಳಲ್ಲಿ ಆತಂಕ ಆರಂಭವಾಗಿದೆ. ಸಚಿವರು ತಮ್ಮ ಹೇಳಿಕೆಯನ್ನು ಕೂಡಲೇ ವಾಪಸ್‌ ಪಡೆಯಬೇಕು’ ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟ ಆಗ್ರಹಿಸಿದೆ.

‘ಕಸ್ತೂರಿ ರಂಗನ್‌ ವರದಿಗಿಂತ ಮೊದಲು ಮಲೆನಾಡಿಗರ ಬದುಕಿನ ಬಗ್ಗೆ ಸಚಿವರು ಬದ್ಧತೆ ತೋರಿಸಬೇಕು. ಈಗಿರುವ ಅರಣ್ಯ ಕಾನೂನುಗಳೇ ಬಡ ಜನರನ್ನು ಬದುಕಲು ಬಿಡುತ್ತಿಲ್ಲ. ಇನ್ನು ಹೊಸ ಕಾನೂನು
ಜಾರಿಗೆ ಬಂದರೆ ನಮ್ಮ ಬದುಕನ್ನೇ ಕಸಿದುಕೊಳ್ಳಲಿವೆ’ ಎಂದು ಒಕ್ಕೂಟದ ಪ್ರಧಾನ
ಸಂಚಾಲಕ ಅನಿಲ್‌ ಹೊಸಕೊಪ್ಪ ಆತಂಕ
ವ್ಯಕ್ತಪಡಿಸಿದ್ದಾರೆ.

‘ಮಲೆನಾಡನ್ನು ಪರಿಸರ ಸೂಕ್ಷ್ಮ ವಲಯವಾಗಿ ಘೋಷಣೆ ಮಾಡುವುದು ಹಾಗೂ ಕಸ್ತೂರಿ ರಂಗನ್ ವರದಿಯನ್ನು ಯಥಾವತ್‌ ಒಪ್ಪಿಕೊಳ್ಳವುದು ಸರಿಯಲ್ಲ. ಮಲೆನಾಡಿನ ನೆಲವಾಸಿಗಳಿಗೆ ತೊಂದರೆಯಾಗುವ ಎಲ್ಲ ಪ್ರಸ್ತಾವ ಕೈಬಿಡಬೇಕು. ಸಚಿವರು ತಮ್ಮ ಹೇಳಿಕೆ ವಾಪಸ್ ಪಡೆಯಬೇಕು’ ಎಂದು
ಒತ್ತಾಯಿಸಿದ್ದಾರೆ.

ADVERTISEMENT

‘ಈಗಿರುವ ಅರಣ್ಯ ಕಾನೂನುಗಳು ಮಲೆನಾಡು ಜಿಲ್ಲೆಯ ರೈತರನ್ನು ಬದುಕಲು ಬಿಡುತ್ತಿಲ್ಲ. ಅಡಿಕೆಗೆ ರೋಗ, ಮಳೆ ಹಾನಿ ಸಮಸ್ಯೆಗಳಿಂದ ಮಲೆನಾಡಿನ ರೈತರು ಆತಂಕ
ದಲ್ಲಿದ್ದಾರೆ. ಆತ್ಮಹತ್ಯೆಯ ದಾರಿ ತುಳಿಯು
ತ್ತಿದ್ದಾರೆ. ನಮೂನೆ 94‘ಸಿ’, 94ಸಿಸಿ, 50, 53, 57ರ ಅಡಿಯಲ್ಲಿ ಅರ್ಜಿ ಸಲ್ಲಿಸಿರುವರಿಗೆ ಬಡವರಿಗೆ ಶೀಘ್ರವೇ ಮಂಜೂರಾತಿ ನೀಡಬೇಕು ಮತ್ತು ಪ್ರಕ್ರಿಯೆಯನ್ನು ಸರಳೀಕರಣ ಮಾಡಬೇಕು. ಕೇಂದ್ರ ಸರ್ಕಾರದ ಎಲ್ಲ ವರದಿಗಳನ್ನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಅನುಷ್ಠಾನಕ್ಕೆ ತರುತ್ತದೆ ಎಂಬ ಭಯ
ದಿಂದಲೇ ಮಲೆನಾಡಿನ ಜನರು ಈ ಬಾರಿ ಕಾಂಗ್ರೆಸ್‌ ಅನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸ್‌ ಸರ್ಕಾರವಾದರೂ ಮಲೆನಾಡು ಜಿಲ್ಲೆಗಳ ರೈತರ ಪರವಾಗಿ ಕೆಲಸ ಮಾಡಬೇಕು’ ಎಂದು
ಒತ್ತಾಯಿಸಿದ್ದಾರೆ.

‘ಪಾರಂಪರಿಕ ಅರಣ್ಯ ಕಾಯ್ದೆ ಅಡಿ ಭೂ ಮಂಜೂರಾತಿಯ ಕಾಲಮಿತಿ ಹಾಗೂ ಅಗತ್ಯ ದಾಖಲೆಗಳನ್ನು 75 ವರ್ಷದಿಂದ 25 ವರ್ಷಕ್ಕೆ ಇಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.