ADVERTISEMENT

ಮಂಡ್ಯದಲ್ಲಿ ಕಿಡ್ನಿ ಮಾರಾಟ ಜಾಲ: ಸೆರೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 16:57 IST
Last Updated 18 ಜನವರಿ 2019, 16:57 IST
ಕಿಡ್ನಿ ಮಾರಾಟ ಜಾಲದಲ್ಲಿ ಬಂಧಿತರಾಗಿರುವ ಆರೋಪಿಗಳ ಜೊತೆ ಪೊಲೀಸ್‌ ಸಿಬ್ಬಂದಿ ಇದ್ದಾರೆ
ಕಿಡ್ನಿ ಮಾರಾಟ ಜಾಲದಲ್ಲಿ ಬಂಧಿತರಾಗಿರುವ ಆರೋಪಿಗಳ ಜೊತೆ ಪೊಲೀಸ್‌ ಸಿಬ್ಬಂದಿ ಇದ್ದಾರೆ   

ಮಂಡ್ಯ: ಮಳವಳ್ಳಿಯಲ್ಲಿ ಈಚೆಗೆ ನಡೆದ ಕಿಡ್ನಿ ಮಾರಾಟ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ.

ತಾರಾ (28), ಗೋಪಾಲ್ (46), ಜವರಯ್ಯ (41), ರಾಜು (49), ತಿಮ್ಮಯ್ಯ (54) ಬಂಧಿತರು.

‘ಮಳವಳ್ಳಿ ಪಟ್ಟಣದ ವೆಂಕಟಮ್ಮ ಆತ್ಮಹತ್ಯೆ ಮಾಡಿಕೊಂಡ ನಂತರ ಜಾಲ ಬಯಲಾಗಿದೆ. ಆಕೆಯ ಪತಿ ಮಲ್ಲಯ್ಯ ದೂರು ನೀಡಿದ್ದರು. ಕಿಡ್ನಿ ಮಾರಾಟ ಮಾಡಿಸಿ ₹ 30 ಲಕ್ಷ ಹಣ ಕೊಡಿಸುವುದಾಗಿ ಆರೋಪಿ ತಾರಾ ನಂಬಿಸಿದ್ದರು. ಅದಕ್ಕಾಗಿ ₹ 2.80 ಲಕ್ಷ ಮುಂಗಡ ಕಮಿಷನ್ ಹಣ ಪಡೆದಿದ್ದರು. ಮೋಸದ ವಿಚಾರ ತಿಳಿದಾಗ ವೆಂಕಟಮ್ಮ ಹಣ ಪಾಪಸ್‌ ಕೇಳಿದ್ದಾರೆ. ಹಣ ವಾಪಸ್‌ ನೀಡದಿದ್ದಾಗ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜ್‌ ತಿಳಿಸಿದರು.

ADVERTISEMENT

‘ಆತ್ಮಹತ್ಯೆ ಪ್ರಕರಣ ಭೇದಿಸಿದಾಗ ಕಿಡ್ನಿ ಮಾರಾಟ ಜಾಲ ಪತ್ತೆಯಾಗಿದೆ. ಆರೋಪಿಗಳನ್ನು ರಾಮನಗರದ ಗೋಪಾಲ್‌ ಮನೆಯಲ್ಲಿ ಬಂಧಿಸಲಾಗಿದೆ. ಕಿಡ್ನಿ ಮಾರಾಟ ಕುರಿತು ರಾಮನಗರ, ಮಾಗಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಆರೋಪಿ ತಾರಾ, ಪತಿ ನಾಗೇಂದ್ರ, ಆಕೆಯ ಸಹೋದರಿ ಜ್ಯೋತಿ ಕೂಡ 2015ರಲ್ಲಿ ತಮ್ಮ ಕಿಡ್ನಿ ಮಾರಾಟ ಮಾಡಿದ್ದಾರೆ. ಕಿಡ್ನಿ ಮಾರಾಟ ದಂಧೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತದೆ. ಮಾರಾಟ ಹಾಗೂ ಖರೀದಿಗೆ ಹಲವು ಜಾಲಗಳಿವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.