ADVERTISEMENT

ಸಂಕ್ರಾಂತಿ: ಸಾಂಕೇತಿಕವಾದ ನರಿ ಬೇಟೆ

ಸೂಕ್ಷ್ಮ ವಿಷಯವಾಗಿದ್ದ ಕಾವೇಟಿ ರಂಗನಾಥಸ್ವಾಮಿ ದೇವಾಲಯದ ಸಂಪ್ರದಾಯ

ಎಂ.ಎನ್.ಯೋಗೇಶ್‌
Published 13 ಜನವರಿ 2019, 20:30 IST
Last Updated 13 ಜನವರಿ 2019, 20:30 IST
   

ಮಂಡ್ಯ: ನಾಗಮಂಗಲ ತಾಲ್ಲೂಕು, ಕದಬಹಳ್ಳಿ ಕಾವೇಟಿ ರಂಗನಾಥಸ್ವಾಮಿ ದೇವಾಲಯದಲ್ಲಿ ಸಂಕ್ರಾಂತಿ ಅಂಗವಾಗಿ ತಲತಲಾಂತರದಿಂದ ನಡೆದುಕೊಂಡು ಬರುತ್ತಿದ್ದ ‘ನರಿ ಬೇಟೆ’ ಸಂಪ್ರದಾಯ 25 ವರ್ಷಗಳಿಂದೀಚೆಗೆ ಸಾಂಕೇತಿಕವಾಗಿದೆ.

ಒಂದು ಕಾಲದಲ್ಲಿ ನರಿ ಬೇಟೆ ಬಹಳ ಸೂಕ್ಷ್ಮ ವಿಷಯವಾಗಿತ್ತು. ಸುಪ್ರೀಂ ಕೋರ್ಟ್‌ ತೀರ್ಪಿನ ಸ್ಪಷ್ಟ ಉಲ್ಲಂಘನೆ
ಯಾಗಿದ್ದ ಈ ಸಂಪ್ರದಾಯವನ್ನು ತಡೆಯಲು ಪ್ರಾಣಿದಯಾ ಸಂಘ, ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಸಾಕಷ್ಟು ಶ್ರಮಪಟ್ಟಿದ್ದವು.

ಸಂಕ್ರಾಂತಿ ಹಬ್ಬಕ್ಕೂ ಮೂರು ದಿನ ಮೊದಲು ಗ್ರಾಮದಲ್ಲಿ ಮನೆಗೆ ಒಬ್ಬರಂತೆ ನರಿ ಬೇಟೆಗೆ ತೆರಳುತ್ತಿದ್ದರು. ತಮಟೆ, ನಗಾರಿ ಬಾರಿಸುತ್ತಾ, ಆಯುಧ, ಬಲೆ ಹಿಡಿದು ಕಾಡಿನಲ್ಲಿ ಬೇಟೆಯಾಡುತ್ತಿದ್ದರು. ನರಿ ಸಿಕ್ಕಿದ ನಂತರ ಅದನ್ನು ತಂದು ದೇವಾಲಯದ ಆವರಣದಲ್ಲಿ ಬೋನು ಇಟ್ಟು ಕೂಡಿ ಹಾಕಲಾಗುತಿತ್ತು.

ADVERTISEMENT

ಬಾಯಿಗೆ ಮುಖವಾಡ ಹಾಕಿ, ಕಿವಿಗೆ ಓಲೆ ಧರಿಸಿ ಪೂಜೆ ಮಾಡಲಾಗುತ್ತಿತ್ತು. ಆಹಾರವಾಗಿ ಅದಕ್ಕೆ ಕೋಳಿಯನ್ನು ಹಾಕಲಾಗುತಿತ್ತು. ಮೂರನೇ ದಿನ ರಥೋತ್ಸವ, ಉತ್ಸವ ಮೂರ್ತಿ ಮೆರವಣಿಗೆ ವೇಳೆ ನರಿಗೆ ಹಾರ ಹಾಕಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತಿತ್ತು. ಜನರು ಅದಕ್ಕೆ ಪೂಜೆ ಸಲ್ಲಿಸುತ್ತಿದ್ದರು. ಕಡೆಗೆ ನರಿ ಬಾಲಕ್ಕೆ ಪಟಾಕಿ ಕಟ್ಟಿ, ಹಚ್ಚಿ ಓಡಿಸಲಾಗುತ್ತಿತ್ತು. ಪಟಾಕಿ ಸದ್ದಿಗೆ ನರಿ ದಿಕ್ಕಾಪಾಲಾಗುತ್ತಿತ್ತು.

1994ರ ನಂತರ ವಿವಾದ: 1994ರ ವರೆಗೂ ನರಿ ಬೇಟೆ ಆಚರಣೆಗೆ ಯಾವುದೇ ಅಡೆತಡೆ ಇರಲಿಲ್ಲ. 94ರ ನಂತರ ಈ ಪ್ರಕರಣ ವಿವಾದದ ಸ್ವರೂಪ ಪಡೆಯಿತು. ನರಿಯನ್ನು ಹಿಂಸಿಸಲಾಗುತ್ತಿದೆ ಎಂದು ಪ್ರಾಣಿ ದಯಾಸಂಘ ಆರೋಪಿಸಿತು. ಪ್ರತಿ ವರ್ಷ ಅದನ್ನು ತಡೆಯಲು ಪೊಲೀಸರು ಯತ್ನಿಸುತ್ತಿದ್ದರು. 2000ದವರೆಗೆ ಜನರು ನಿಷೇಧದ ನಡುವೆಯೂ ಬೇಟೆಯಾ ಡುತ್ತಿದ್ದರು. ವಿರೋಧ ತೀವ್ರವಾದ ಕಾರಣ ಸಂಪ್ರದಾಯ ನಿಂತು ಹೋಯಿತು.

ಈಗ ಸಾಂಕೇತಿಕ: ನರಿ ಬೇಟೆ ಸಂಪ್ರದಾಯ ಈಗ ಸಾಂಕೇತಿಕವಾಗಿದೆ. ಗ್ರಾಮಸ್ಥರು ತಮಟೆ, ನಗಾರಿ, ಬಲೆಯೊಂದಿಗೆ ದೇವಾಲಯದ ಸುತ್ತಲೂ ಮೆರವಣಿಗೆ ನಡೆಸುತ್ತಾರೆ. ಇದು ನರಿ ಬೇಟೆಯ ಸೂಚಕವಾಗಿದೆ.

‘ಈಗಲೂ ನರಿ ಬೇಟೆ ನಡೆಯುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ, ಅದು ಸುಳ್ಳು, ಈಗ ಕಾಡು, ಬೇಟೆ ಯಾವುದೂ ಇಲ್ಲ. ಇಂದಿನ ಯುವಕರಿಗೆ ಬೇಟೆಯ ಉತ್ಸಾಹವೂ ಉಳಿದಿಲ್ಲ’ ಎಂದು ಕದಬಹಳ್ಳಿ ಗ್ರಾಮದ ಶಿವನಂಜೇಗೌಡ ಹೇಳಿದರು.

**

ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ
ನರಿಬೇಟೆ ಸಂಪ್ರದಾಯ ಆಚರಣೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಕದಬಹಳ್ಳಿ ಗ್ರಾಮದ ಕೆಲವರು 1994ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹಲವು ವರ್ಷ ಪ್ರಕರಣ ನಡೆಯಿತು. ಅರ್ಜಿದಾರರು ಮೃತಪಟ್ಟ ನಂತರ ಪ್ರಕರಣ ಬಿದ್ದು ಹೋಯಿತು ಎಂದು ಗ್ರಾಮಸ್ಥರು ತಿಳಿಸಿದರು.

**
ಮುಖ್ಯಾಂಶಗಳು
1994ರ ನಂತರ ಈ ಪ್ರಕರಣ ವಿವಾದದ ಸ್ವರೂಪ
ಸಂಪ್ರದಾಯ ತಡೆಯಲು ಪ್ರಾಣಿದಯಾ ಸಂಘದ ಶ್ರಮ
ನರಿ ಬೇಟೆ ಸಂಪ್ರದಾಯ ಈಗ ಸಾಂಕೇತಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.