ADVERTISEMENT

ರೋಷನ್‌ ಸಲ್ಡಾನಗೆ ಸಂಬಂಧಿಸಿದ ವಂಚನೆ ಪ್ರಕರಣ: ಇ.ಡಿಯಿಂದ ₹9.5 ಕೋಟಿ ಆಸ್ತಿ ಜಪ್ತಿ

ರೋಷನ್‌ ಸಲ್ಡಾನ, ಪತ್ನಿ ಡಾಫ್ನಿ ನೀತು ಡಿಸೋಜ ಹೆಸರಿನದ್ದ 5 ಮೀನುಗಾರಿಕಾ ಬೋಟ್ ವಶಪಡಿಸಿದ ಇಡಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 23:37 IST
Last Updated 8 ಆಗಸ್ಟ್ 2025, 23:37 IST
ರೋಷನ್‌ ಸಲ್ಡಾನ
ರೋಷನ್‌ ಸಲ್ಡಾನ   

ಮಂಗಳೂರು: ಬ್ಯಾಂಕ್‌ಗಳಿಂದ ಸಾಲ ಕೊಡಿಸುವ ಆಮಿಷ ಒಡ್ಡಿ ಕಮಿಷನ್ ರೂಪದಲ್ಲಿ ಉದ್ಯಮಿಗಳಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದ ನಗರದ ರೋಷನ್‌ ಸಲ್ಡಾನಗೆ ಸಂಬಂಧಿಸಿದ ಪ್ರಕರಣಗಳಲ್ಲಿ 5 ಕಡೆ (ಇಡಿ) ಅಧಿಕಾರಿಗಳು ಶೋಧ ನಡೆಸಿದ್ದಾರೆ. 

‘₹ 5.75 ಕೋಟಿ ಮೌಲ್ಯದ ಮೀನುಗಾರಿಕೆಯ ಬೋಟ್‌ಗಳು ಸೇರಿದಂತೆ ₹ 9.5 ಕೋಟಿ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ’ ಎಂದು ಜಾರಿ ನಿರ್ದೇಶನಾಲಯದ (ಇ.ಡಿ) ಮಂಗಳೂರು ಉಪವಲಯ ಕಚೇರಿಯ ಪ್ರಕಟಣೆ ತಿಳಿಸಿದೆ.

ಕಂಕನಾಡಿ ಬೊಲ್ಲಗುಡ್ಡದ  ರೋಷನ್ ಸಲ್ಡಾನ ವಿರುದ್ಧ ಮಂಗಳೂರು ಮತ್ತು ಚಿತ್ರದುರ್ಗದಲ್ಲಿ ದಾಖಲಾಗಿದ್ದ ದೂರುಗಳ ಆಧಾರದಲ್ಲಿ ಜುಲೈ 17ರಂದು ಆತನ ವಿಲಾಸಿ ಬಂಗಲೆ ಮೇಲೆ ದಾಳಿ ನಡೆಸಿದ ನಗರದ ಸೆನ್‌ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದರು.

ADVERTISEMENT

‘ಕಡಿಮೆ ಬಡ್ಡಿಗೆ ಕೋಟ್ಯಂತರ ಸಾಲ ಕೊಡಿಸುವುದಾಗಿ ಹೇಳಿ ಕಮಿಷನ್ ಮತ್ತು ಸ್ಟ್ಯಾಂಪ್ ಡ್ಯೂಟಿ ನೆಪದಲ್ಲಿ ಹಲವು ಉದ್ಯಮಿಗಳಿಂದ ಅಂದಾಜು ₹ 39 ಕೋಟಿ ಮೊತ್ತವನ್ನು ರೋಷನ್‌, ಆತನ ಪತ್ನಿ ಡಾಫ್ನಿ ನೀತು ಡಿಸೋಜಮತ್ತು ಇತರರು ಪಡೆದು ವಂಚಿಸಿದ್ದಾರೆ.

‘ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ 2002ರಡಿ ಶೋಧ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ದಿನಚರಿ ಪುಸ್ತಕ, ಕಗದ ಪತ್ರಗಳು ಸೇರಿದಂತೆ ಮಹತ್ವದ ದಾಖಲೆಗಳು ಲಭಿಸಿವೆ. ಬ್ಯಾಂಕ್ ಖಾತೆಯಲ್ಲಿ ₹ 3.75 ಕೋಟಿ ಮೊತ್ತ ಪತ್ತೆಯಾಗಿತ್ತು. ₹ 5.75 ಕೋಟಿ ಮೊತ್ತದಲ್ಲಿ ಪತ್ನಿಯ ಹೆಸರಿನಲ್ಲಿ 5 ಮೀನುಗಾರಿಕಾ ಬೋಟ್‌ಗಳನ್ನು ಖರೀದಿಸಿರುವುದೂ ಪತ್ತೆಯಾಗಿದೆ. ಈ ಬೋಟ್‌ಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

‘ದಾಳಿ ನಡೆಸಿದ್ದಾಗ, ‘ಬೆಂಗಳೂರು, ವಿಜಯಪುರ, ತುಮಕೂರು, ಬಾಗಲಕೋಟೆ, ಕೋಲ್ಕತ್ತ, ಗೋವಾ, ಪುಣೆ, ಲಖನೌ ಮುಂತಾದೆಡೆ ವಂಚಿಸಿದ್ದಾನೆ’ ಎಂದು ಪೊಲೀಸ್‌ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದರು. ರೋಷನ್‌ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.