ADVERTISEMENT

ಶಿವಮೂರ್ತಿ ಮುರುಘಾ ಶರಣರಿಗೆ ಮತ್ತೆ ಪುರುಷತ್ವ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 20:52 IST
Last Updated 4 ನವೆಂಬರ್ 2022, 20:52 IST
ಶಿವಮೂರ್ತಿ ಮುರುಘಾ ಶರಣರು
ಶಿವಮೂರ್ತಿ ಮುರುಘಾ ಶರಣರು   

ಚಿತ್ರದುರ್ಗ: ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ 2ನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಶುಕ್ರವಾರ ಪುರುಷತ್ವ ಪರೀಕ್ಷೆಗೆ ಒಳಪಡಿಸಲಾಯಿತು.

ಜಿಲ್ಲಾ ಆಸ್ಪತ್ರೆಯ ಡಾ.ವೇಣು ಹಾಗೂ ಡಾ.ಲೀಲಾ ರಾಘವನ್‌ ನೇತೃತ್ವದ ವೈದ್ಯರ ತಂಡ ಆರೋಪಿಯ ಪುರುಷತ್ವ ಪರೀಕ್ಷೆ ನಡೆಸಿತು. ಗಂಟೆಗೂ ಹೆಚ್ಚು ಕಾಲ ವಿವಿಧ ಪರೀಕ್ಷೆ ನಡೆಸಿ ಕೂದಲು, ಉಗುರು ಹಾಗೂ ರಕ್ತದ ಮಾದರಿಯನ್ನು ಸಂಗ್ರಹಿಸಿತು. ಈ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗುತ್ತದೆ ಎಂದು ಪೊಲೀಸ್‌ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ಲೈಂಗಿಕ ಕಿರುಕುಳ, ಅತ್ಯಾಚಾರ ಆರೋಪ ಎದುರಿಸುವ ವ್ಯಕ್ತಿ ಲೈಂಗಿಕ ಕ್ರಿಯೆ ನಡೆಸುವ ಸಾಮರ್ಥ್ಯ ಹೊಂದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಪುರುಷತ್ವ ಪರೀಕ್ಷೆ ನಡೆಸಲಾಗುತ್ತದೆ. ಸೆ.3ರಂದು ಮೊದಲ ಬಾರಿಗೆ ಶಿವಮೂರ್ತಿ ಮುರುಘಾ ಶರಣರು ಪುರುಷತ್ವ ಪರೀಕ್ಷೆ ಎದುರಿಸಿದ್ದರು. ಈ ವರದಿ ತನಿಖಾಧಿಕಾರಿಯ ಕೈಸೇರಿದ್ದು, ದೋಷಾರೋಪ ಪಟ್ಟಿಯೊಂದಿಗೆ ನ್ಯಾಯಾಲಯಕ್ಕೆ ಸಲ್ಲಿಕೆಯಾಗಲಿದೆ.

ADVERTISEMENT

ನ್ಯಾಯಾಂಗ ಬಂಧನದಲ್ಲಿದ್ದ ಶಿವಮೂರ್ತಿ ಮುರುಘಾ ಶರಣರನ್ನು 2ನೇ ಪ್ರಕರಣದ ತನಿಖೆಯ ಉದ್ದೇಶದಿಂದ ನ.3ರಂದು ಪೊಲೀಸ್‌ ವಶಕ್ಕೆ ಪಡೆಯಲಾಗಿದೆ. ಡಿವೈಎಸ್‌ಪಿ ಕಚೇರಿಯಲ್ಲಿ ತನಿಖೆಗೆ ಒಳಪಡಿಸಲಾಗಿದ್ದು, ತನಿಖಾಧಿಕಾರಿ ಬಾಲಚಂದ್ರ ನಾಯ್ಕ್‌ ನೇತೃತ್ವದ ತಂಡ ನಿರಂತರವಾಗಿ ವಿಚಾರಣೆ ನಡೆ
ಸುತ್ತಿದ್ದು, ಹಲವು ವಿಷಯಗಳ ಕುರಿತು ಹೇಳಿಕೆ ಪಡೆಯಲಾಗುತ್ತಿದೆ. ಆಗಾಗ ಮೌನಕ್ಕೆ ಜಾರಿದರೂ ಆರೋಪಿಯು ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಯ ಪೊಲೀಸ್‌ ಕಸ್ಟಡಿ ಅವಧಿ ಶನಿವಾರ ಅಂತ್ಯವಾಗಲಿದೆ. ಕೃತ್ಯ ನಡೆದ ಸ್ಥಳದ ಮಹಜರು ಬಾಕಿ ಇದ್ದು, ಶನಿವಾರ ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ.

ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಸೆ.1ರಂದು ಶಿವಮೂರ್ತಿ ಮುರುಘಾ ಶರಣರನ್ನು ಬಂಧಿಸಲಾಗಿತ್ತು. ತನ್ನ ಇಬ್ಬರು ಪುತ್ರಿಯರು ಹಾಗೂ ಇನ್ನಿಬ್ಬರು ವಿದ್ಯಾರ್ಥಿನಿಯರ ಮೇಲೂ ಲೈಂಗಿಕ
ದೌರ್ಜನ್ಯ ನಡೆದಿತ್ತು ಎಂದು ಮಹಿಳೆಯೊಬ್ಬರು ಅ. 14ರಂದು ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.